ADVERTISEMENT

ವಿದ್ಯಾರ್ಥಿ ನಾಟಕೋತ್ಸ ವ 14ರಿಂದ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 7:16 IST
Last Updated 6 ಮಾರ್ಚ್ 2015, 7:16 IST

ಬಳ್ಳಾರಿ: ರಂಗತೋರಣ ಸಂಸ್ಥೆಯು ಇದೇ 14ರಿಂದ ಮೂರು ದಿನಗಳ ಕಾಲ ನಗರದಲ್ಲಿ ಆಯೋಜಿಸಿರುವ ವಿದ್ಯಾರ್ಥಿ ನಾಟಕೋತ್ಸವದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಒಟ್ಟು 16 ತಂಡಗಳು  ಭಾಗವಹಿಸಲಿವೆ.

ನಗರದಲ್ಲಿ ಗುರುವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಈ ವಿಷಯ ತಿಳಿಸಿದ ರಂಗತೋರಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಕಪಗಲ್‌, ನಾಟಕೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಸ್ವಾಗತ ಸಮಿತಿ ಸೇರಿದಂತೆ ಇತರ ಸಮಿತಿಗಳನ್ನು  ರಚಿಸಲಾಗಿದೆ. ನಗರದ ರಂಗಪ್ರೇಮಿಗಳು, ಕಲಾಸಕ್ತರು ಸಮಿತಿಯಲ್ಲಿ ಸೇರಿದ್ದಾರೆ  ಎಂದರು.

ನಿರಂತರ ನಾಟಕ, ರಂಗ ವೈಭವಯಾತ್ರೆ, ರಂಗತೋರಣ ಪ್ರಶಸ್ತಿ- ಪುರಸ್ಕಾರ, ನುಡಿ ತೋರಣ, ಕಲಾ ತೋರಣ, ರಂಗ ಚಾವಡಿ ಹಾಗೂ ರಂಗ ಬೆಳದಿಂಗಳು ಕಾರ್ಯಕ್ರಮ ಆಯೋಜಿಸಲಾಗಿದೆ.  ರಾಯಚೂರು ಕೃಷಿ ವಿ.ವಿ, ಬೆಂಗಳೂರು ವಿ.ವಿ. ತಂಡಗಳು ಸೇರಿದಂತೆ ಧಾರವಾಡ, ಕೊಪ್ಪಳ, ಗದಗ,ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬಳ್ಳಾರಿ, ಚಿಕ್ಕಮಗಳೂರು, ಹೊನ್ನಾವರ, ತುಮಕೂರು ಮತ್ತಿತರ ಜಿಲ್ಲೆಗಳ 16 ತಂಡಗಳು ಭಾಗವಹಿಸಲಿವೆ. ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬರಲಿದ್ದು, ವಸತಿ, ಊಟ, ತಿಂಡಿ, ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಗರದ ಜೋಳದರಾಶಿ ದೊಡ್ಡನ­ಗೌಡ ರಂಗಮಂದಿರದಲ್ಲಿ ಮಾರ್ಚ್‌ 14ರಂದು ಬೆಳಿಗ್ಗೆ 10.30ಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ನಾಟಕೋತ್ಸವ ಉದ್ಘಾಟಿ­ಸಲಿದ್ದು, ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಸಂಜೆ ನಗರದ ಹಳೆ ಬಸ್ ನಿಲ್ದಾಣದಿಂದ ರಂಗ ವೈಭವಯಾತ್ರೆ ನಡೆಯಲಿದೆ.
‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹ, ‘ಈಟಿವಿ ಕನ್ನಡ’ ಮಾಧ್ಯಮ ಸಂಸ್ಥೆ, ಹಂಪಿ ಕನ್ನಡ ವಿ.ವಿ, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ­ದೇವರಾಯ ವಿ.ವಿ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗ ಇದೆ ಎಂದು ಅವರು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾವಿನಾಳ್‌ ಶರಣಬಸಪ್ಪ, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಯೂನುಸ್, ಜಯ­ಪ್ರಕಾಶ್ ಗುಪ್ತಾ, ಐನಾತ ರೆಡ್ಡಿ, ಎನ್‌.ಯಶವಂತರಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.