ADVERTISEMENT

ವಿದ್ಯುತ್ ವ್ಯತ್ಯಯ: ಕುಡಿಯುವ ನೀರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 9:21 IST
Last Updated 17 ಮೇ 2017, 9:21 IST

ಕುರುಗೋಡು: ಇತ್ತೀಚೆಗೆ ಸುರಿದ ಮಳೆಗಾಳಿಗೆ ಇಲ್ಲಿಗೆ ಸಮೀಪದ ಕುಡತಿನಿ ಪಟ್ಟಣದ ಹೊರ ವಲಯದಲ್ಲಿ 6 ವಿದ್ಯುತ್ ಸರಬರಾಜು ಕಂಬಗಳು ಮುರಿದುಬಿದ್ದ ಪರಿಣಾಮ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಕುಡತಿನಿ ಸೇರಿದಂತೆ ಏಳುಬೆಂಚಿ, ತಿಮ್ಮಲಾಪುರ, ದರೋಜಿ, ಬಸವಣ್ಣ ಕ್ಯಾಂಪ್, ವೇಣಿ ವೀರಾಪುರದಲ್ಲಿ ಶನಿವಾರ ರಾತ್ರಿಯಿಂದದಿಂದ ವಿದ್ಯುತ್ ಸರಬರಾಜುಗೊಳ್ಳದ ಪರಿಣಾಮ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ.

ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರು ಸರಬರಾಜು ಕೊಳ್ಳದೆ ಜನರು ತೊಂದರೆಗೆ ಸಿಲುಕಿದ್ದಾರೆ. ಹಿಟ್ಟಿನ ಗಿರಣಿಗಳು ಸ್ಥಗಿತಗೊಂಡ ಪರಿಣಾಮ ಬಡ ಜನರು ತೊಂದರೆ ಎದುರಿಸುವಂತಾಗಿದೆ.

ADVERTISEMENT

ಕುಡತಿನಿಯಲ್ಲಿ ಪಟ್ಟಣ ಪಂಚಾಯ್ತಿಯಿಂದ ಪ್ರತಿ ನಾಲ್ಕು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದರು. ವಿದ್ಯುತ್ ಸರಬರಾಜು ಗೊಳ್ಳದ ಪರಿಣಾಮ ನೀರು ಪೂರೈಕೆಯಾಗುತ್ತಿಲ್ಲ. ಸ್ಥಳೀಯ ಯುವಕರು ಸ್ವಯಂಪ್ರೇರಣೆಯಿಂದ ಕುಡತಿನಿಯ ಕೋಳಿ ಬಜಾರ್, ಸಂಗಮೇಶ್ವರ ದೇವಸ್ಥಾನದ ಪ್ರದೇಶ, ವಾಲ್ಮೀಕಿ ನಗರ, ಬಣಜಿಗರ ಬೀದಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸೋಮವಾರ ಮತ್ತು ಮಂಗಳವಾರ 40ಕ್ಕೂ ಅಧಿಕ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿದೆ.

ವಿದ್ಯುತ್ ಸರಬರಾಜು ಇಲ್ಲದ ಕಾರಣ ಸಿದ್ದಲಿಂಗ ಸ್ವಾಮಿ ಮತ್ತು ಮಹಾದೇವ ಸ್ವಾಮಿಯವರ ಜಮೀನಿನಲ್ಲಿರುವ ಕೊಳವೆ ಬಾವಿಗಳಿಂದ ಡೀಸೆಲ್ ಮೋಟರ್ ಗಳ ಮೂಲಕ ನೀರು ತುಂಬಿಸಿ ಸರಬರಾಜು ಮಾಡಲಾಗುತ್ತಿದೆ.

ಮಾಲಿಕರು ಟ್ರ್ಯಾಕ್ಟರ್ ಬಾಡಿಗೆ ಪಡೆಯದೆ ಉಚಿತವಾಗಿ ಬಿಟ್ಟಿದ್ದಾರೆ. ಚಾಲಕರೂ ಉಚಿತವಾಗಿ ಸೇವೆ ಸಲ್ಲಿಸುವ ಮೂಲಕ ಬಡತನ ದಲ್ಲಿಯೂ ಮಾನವೀಯತೆ ಮೆರೆಯುತ್ತಿದ್ದಾರೆ.ಕುಡತಿನಿಯ ಯುವಕರಾದ ವಿನೋದ್, ಕೃಷ್ಣ, ಪ್ರಕಾಶ್, ಸಿದ್ದಲಿಂಗ ಸ್ವಾಮಿ, ರಾಜು, ಮಾನಯ್ಯ, ಕೋಟೆ ಪಂಪಾಪತಿ, ಭೂಮೇಶ್ ಮತ್ತು ವೀರೇಶ್ ಅವರು ನೀರಿನ ಸಮಸ್ಯೆಯನ್ನು ಕಂಡು ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜಿಗೆ ಮುಂದಾಗಿರುವುದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳವಾರ ಸಂಜೆಯಿಂದ ತಾತ್ಕಾಲಿಕವಾಗಿ ಕುರುಗೋಡು 110ಕೆ.ವಿ. ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಕನಿಷ್ಠ 15 ದಿನಗಳ ವರೆಗೆ ವಿದ್ಯುತ್ ಟವರ್ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ. ನಂತರ ಎಂದಿನಂತೆ ವಿದ್ಯುತ್ ಸರಬರಾಜಿಗೆ ಕ್ರಮಕೈಗೊಳ್ಳಲಾಗುವುದು ಎಂದು ಕುಡತಿನಿ ಜೆಸ್ಕಾಂ ಜೆ.ಇ. ಶ್ರೀನಿವಾಸ್ ತಿಳಿಸಿದರು. ಜಿಂದಾಲ್ ಕಂಪೆನಿಯಿಂದ ಸಹಾಯ ಪಡೆದು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಪ.ಪಂ. ಮುಖ್ಯಾಧಿಕಾರಿ ರೆಹಮಾನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.