ADVERTISEMENT

ವೀರ್ಯ ಸಂಗ್ರಹಣೆಯಲ್ಲಿ ಸ್ವಾವಲಂಬನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಏಪ್ರಿಲ್ 2017, 6:30 IST
Last Updated 24 ಏಪ್ರಿಲ್ 2017, 6:30 IST

ಹೊಸಪೇಟೆ: ರಾಸುಗಳ ಕೃತಕ ಗರ್ಭಧಾರಣೆಗೆ ಅಗತ್ಯವಿರುವ ಜಾನುವಾರಗಳ ವೀರ್ಯ ಶೇಖರಣೆಗೆ ನಗರದ ಪಶು ಸಂಶೋಪನಾ ಆಸ್ಪತ್ರೆಯ ಆವರಣದಲ್ಲಿ ದ್ರವ ಸಾರಜನಕ ಜಾರಿ (ಟ್ಯಾಂಕ್‌) ಸ್ಥಾಪಿಸಲಾಗಿದೆ.ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ ದ್ರವ ಸಾರಜನಕ ಶೇಖರಣಾ ಜಾರಿಯೇ ಇರಲಿಲ್ಲ. ಇದರಿಂದ ಹರಿಯಾಣದ ಬಾತಿಯಿಂದ ಟ್ಯಾಂಕರ್‌ ಮೂಲಕ ವೀರ್ಯವನ್ನು ತರಿಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ನೆರೆಯ ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳಿಂದಲೂ ವೀರ್ಯ ತರಿಸಲಾಗುತ್ತಿತ್ತು.

ಹೀಗೆ ತಂದ ವೀರ್ಯದ ಪೈಕಿ ಜಿಲ್ಲೆಯ ಪ್ರತಿ ಪಶು ಸಂಗೋಪನಾ ಆಸ್ಪತ್ರೆಗೆ 35 ಲೀಟರ್‌ನಂತೆ ಪೂರೈಸಲಾಗುತ್ತಿತ್ತು. ಆಯಾ ಆಸ್ಪತ್ರೆಯಲ್ಲಿ ರಾಸುಗಳು ಬೇದಿಗೆ ಬಂದರೆ ಅವುಗಳಿಗೆ ವೀರ್ಯದ ಇಂಜೆಕ್ಷನ್‌ ಮಾಡಿ ಕೃತಕ ಗರ್ಭಧಾರಣೆ ಮಾಡಲಾಗುತ್ತಿತ್ತು. ಇದಕ್ಕಾಗಿ ಪ್ರತಿ ವರ್ಷ ₹1 ಲಕ್ಷ ವ್ಯಯಿಸಬೇಕಿತ್ತು. ಅಲ್ಲದೇ ಸಾಕಷ್ಟು ಸಮಯ ಕೂಡ ವಿನಿಯೋಗವಾಗುತ್ತಿತ್ತು. ಈಗ ಜಿಲ್ಲೆಯ ಮಧ್ಯಭಾಗದಲ್ಲಿರುವ ಹೊಸಪೇಟೆ ಉಪ ವಿಭಾಗ ಕೇಂದ್ರದಲ್ಲಿ ವೀರ್ಯ ಸಂಗ್ರಹ ಮಾಡುವುದರಿಂದ ಬಳ್ಳಾರಿಯಷ್ಟೇ ಅಲ್ಲ, ನೆರೆಯ ಕೊಪ್ಪಳ ಜಿಲ್ಲೆಕ್ಕೂ ಬಹಳಷ್ಟು ಅನುಕೂಲವಾಗಲಿದೆ.

ಒಟ್ಟು ₹5.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಶೇಖರಣಾ ಜಾರಿಯಲ್ಲಿ ಆರು ಸಾವಿರ ಲೀಟರ್‌ ವರೆಗೆ ವೀರ್ಯವನ್ನು ಸಂಗ್ರಹಿಸಿ ಇಡಬಹುದು. ದ್ರವ ಸಾರಜನಕ  ಜಾರಿಯಲ್ಲಿ –196 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ವೀರ್ಯ ಇಡಲಾಗುತ್ತದೆ. ಅಗತ್ಯ ಬಿದ್ದಾಗಲೆಲ್ಲ ವೀರ್ಯವನ್ನು ಹೊರಗೆ ತೆಗೆದು ಉಗುರು ಬೆಚ್ಚನೆಯ ನೀರಿನಲ್ಲಿ ಕೆಲಕಾಲ ಇಟ್ಟರೆ, ಘನವಾಗಿರುವ ವೀರ್ಯವೂ ದ್ರವರೂಪ ಪಡೆಯುತ್ತದೆ. ಬಳಿಕ ಬೆದೆಗೆ ಬಂದ ರಾಸುಗಳ ಗರ್ಭಕೋಶಕ್ಕೆ ಇಂಜೆಕ್ಷನ್‌ ಮೂಲಕ ವೀರ್ಯವನ್ನು ಸೇರಿಸಲಾಗುತ್ತದೆ.

ADVERTISEMENT

ಜಾರಿಯಿಂದ ಆಗುವ ಲಾಭವೇನು?
ದ್ರವ ಸಾರಜನಕ ಜಾರಿಯಲ್ಲಿ ಮೈನಸ್‌ ತಾಪಮಾನದಲ್ಲಿ ವೀರ್ಯ ಇಡುವುದರಿಂದ ವೀರ್ಯ ಒಂದೇ ಸ್ಥಿತಿಯಲ್ಲಿ ಇರುತ್ತದೆ. ಆಕಳು, ಎಮ್ಮೆ ಯಾವುದೇ ಸಂದರ್ಭದಲ್ಲಿ ಬೆದೆಗೆ ಬಂದರೂ ಜಾರಿಯಿಂದ ವೀರ್ಯ ಹೊರಗೆ ತೆಗೆದು ಅವುಗಳ ಗರ್ಭಕೋಶಕ್ಕೆ ಸೇರಿಸಬಹುದು. 

‘ಈ ಹಿಂದೆ ವೀರ್ಯ ಶೇಖರಣೆಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಅಲ್ಲದೇ ಬೇರೆ ಕಡೆಯಿಂದ ತರಬೇಕಾಗುತ್ತಿತ್ತು. ಈಗ ಅದು ತಪ್ಪಿದಂತಾಗಿದೆ. ಆರು ಸಾವಿರ ಲೀಟರ್‌ ವರೆಗೆ ವೀರ್ಯ ಸಂಗ್ರಹಿಸಿ ಇಡಬಹುದು. ಯಾವಾಗ ಬೇಕಾದರೂ ಹೊರ ತೆಗೆದು ರಾಸುಗಳ ಕೃತಕ ಗರ್ಭಧಾರಣೆಗೆ ಬಳಸಿಕೊಳ್ಳಬಹುದು’ ಎಂದು ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಎಲ್. ಪರಮೇಶ್ವರ ನಾಯ್ಕ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.