ADVERTISEMENT

ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:12 IST
Last Updated 5 ಸೆಪ್ಟೆಂಬರ್ 2017, 6:12 IST

ಸಿರುಗುಪ್ಪ: ಶಂಕಿತ ಡೆಂಗಿ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಸೋಮವಾರ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು.

‘ನನ್ನ ನಾಲ್ಕು ವರ್ಷದ ಮಗ ಯಶ್ವಂತ್‌ನನ್ನು ಆಗಸ್ಟ್‌ 17 ರಂದು ಆಸ್ಪತ್ರೆಗೆ ದಾಖಲಿಸಿದ್ದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಗ್ಲೋಕೋಸ್‌ ಹಾಕಿ, ರಕ್ತ ತಪಾಸಣೆ ಮಾಡಿ ಕಳಿಸಿದರು. ಮಗು ಗುಣಮುಖವಾಗದೇ ನರಳುತ್ತಿರು ವುದನ್ನು ನೋಡದೇ ಖಾಸಗಿ ವೈದ್ಯರ ಬಳಿ ತೋರಿಸಿದಾಗ ಅವರು ಬಳ್ಳಾರಿಯ ವಿಮ್ಸ್‌ಗೆ ದಾಖಲಿಸುವಂತೆ ತಿಳಿಸಿದರು’ ಎಂದು ತಾಯಿ ವಾಣಿಬಾಯಿ ಹೇಳಿದರು.

ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆಗಸ್ಟ್‌ 23 ರಂದು ಯಶ್ವಂತ್‌ ಮೃತಪಟ್ಟಿದ್ದಾನೆ’ ಎಂದು ಮಗುವಿನ ತಂದೆ ಕೆ.ನಾಗರಾಜ ತಿಳಿಸಿದರು. ಮಗುವಿನ ಭಾವಚಿತ್ರ ಹಿಡಿದು ರೋದಿಸುತ್ತಾ ದೃಶ್ಯ ಮನ ಕಲುಕುವಂತಿತ್ತು. ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಜಗನ್ನಾಥ ಸ್ಥಳಕ್ಕೆ ಬಂದು, ಪಾಲಕರಿಗೆ ಸಾಂತ್ವನ ಹೇಳಿದರು.

ADVERTISEMENT

‘ಆಸ್ಪತ್ರೆಯಲ್ಲಿ ಮಗುವಿಗೆ 3ದಿನ ಚಿಕಿತ್ಸೆ ನೀಡಲಾಗಿದೆ. ಅಂದು ಕರ್ತವ್ಯ ನಿರ್ವಹಿಸಿದ ವೈದ್ಯರ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರ ಹುದ್ದೆ ಖಾಲಿ ಇದೆ, ಹುದ್ದೆ ಭರ್ತಿ ಮಾಡುವಂತೆ ಮೇಲಧಿಕಾರಿ ಗಮನಕ್ಕೆ ತರಲಾಗಿದ್ದು, ಶೀಘ್ರವೇ ಮಕ್ಕಳ ವೈದ್ಯರು ಆಸ್ಪತ್ರೆಯಲ್ಲಿ ನಿಯೋಜನ ಗೊಳ್ಳಲಿದ್ದಾರೆ’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಸುರೇಶ್‌ಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ವಿಷಮ ಜ್ವರ ಹಾಗೂ ಶಂಕಿತ ಡೆಂಗಿ ಪ್ರಕರಣಗಳು ವರದಿಯಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.