ADVERTISEMENT

ಶಿಕ್ಷಣ ಇಲಾಖೆ ಧೋರಣೆಗೆ ಬೇಸರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2016, 8:12 IST
Last Updated 23 ಡಿಸೆಂಬರ್ 2016, 8:12 IST

ಹೊಸಪೇಟೆ:  ನಗರದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿಯ 2016–17ನೇ ಸಾಲಿನ ನಾಲ್ಕನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಅಧ್ಯಕ್ಷೆ ಹಾಗೂ ಉಪಾಧ್ಯ ಕ್ಷರು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷೆ ಜೋಗದ ನೀಲಮ್ಮ ಮಾತ ನಾಡಿ, ‘ತಾಲ್ಲೂಕಿನ ಕಾಕುಬಾಳು, ಗಾದಿ ಗನೂರು, ಕೊಟಗಿನಹಾಳ್‌ ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್‌ ಕಟ್ಟಲಾ ಗಿದೆ. ಆದರೆ, ಹಲವು ತಿಂಗಳಿಂದ ಪೈಪ್‌ ಲೈನ್‌ ಸಂಪರ್ಕ ಕಲ್ಪಿಸಿಲ್ಲ. ಪ್ರತಿ ಸಲವೂ ಶೀಘ್ರ ಕೆಲಸ ಪೂರ್ಣಗೊಳಿಸಲಾಗು ವುದು ಎಂದು ಹೇಳುತ್ತೀರಿ. ನೀವು ಕೆಲಸ ಮಾಡುವ ರೀತಿ ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮರ್ಪಕವಾಗಿ ಕುಡಿಯುವ ನೀರು ಪೂರೈಸದಿದ್ದರೆ ಜನ ನಮ್ಮನ್ನು ಪ್ರಶ್ನಿಸು ತ್ತಾರೆ. ನಿಮ್ಮಂತೆ ಪ್ರತಿ ಸಾರಿ ಏನಾದ ರೊಂದು ಉತ್ತರ ನೀಡಿ ಜಾರಿಕೊಳ್ಳಲು ನಮಗೆ ಬರುವುದಿಲ್ಲ. ಸಬೂಬು ಹೇಳಿ ಜಾರಿಕೊಳ್ಳುವುದು ಸರಿಯಲ್ಲ. ಹೇಳಿದ ಕೆಲಸವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದರು.

ಉಪಾಧ್ಯಕ್ಷ ಗಾದಿಲಿಂಗಪ್ಪ ಮಾತ ನಾಡಿ, ನಿಮ್ಮ ಇಲಾಖೆ ಕೈಗೆತ್ತಿಕೊಳ್ಳುವ ಬಹುತೇಕ ಕಾಮಗಾರಿಗಳು ಕಳಪೆ ಆಗಿ ರುತ್ತವೆ. ಎಲ್ಲೂ ಕೆಲಸ ಸರಿಯಾಗಿ ನಡೆ ಯುವುದಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ. ಮಹಾ ದೇವ ಮಾತನಾಡಿ, ಹೊಸಪೇಟೆಯಲ್ಲಿ ಈ ಬಾರಿ ಎಲ್ಲೂ ಕೊಳವೆ ಬಾವಿ ಹಾಕಿಲ್ಲ. ಎಲ್ಲೆಡೆ ನೀರಿಗೆ ತತ್ವಾರ ಸೃಷ್ಟಿಯಾಗಿದೆ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ. ಭಾಸ್ಕರ್‌ ಮಾತನಾಡಿ, ಬೇರೆ ಏನಾ ದರೂ ಸಮಸ್ಯೆಯಿದ್ದರೆ ತಡೆದುಕೊಳ್ಳ ಬಹುದು. ಆದರೆ, ನೀರಿನ ಸಮಸ್ಯೆ ಯಾರೂ ತಡೆದುಕೊಳ್ಳುವುದಿಲ್ಲ. ನೀರು ಸಮರ್ಪಕವಾಗಿ ಸರಬರಾಜು ಆಗದಿದ್ದರೆ ಬೆಳಿಗ್ಗೆಯೇ ಜನ ಕರೆ ಮಾಡುತ್ತಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾ ಹಕ ಎಂಜಿನಿಯರ್‌ ನಾಗರಾಜ್‌, ಎಲ್ಲೂ ಬೋರ್‌ವೆಲ್‌ ಹಾಕಬಾರದು ಎಂದು ಸರ್ಕಾರ ನಿರ್ದೇಶನ ನೀಡಿದೆ. ಅನುದಾ ನದ ಕೊರತೆಯಿಂದ ಕೆಲ ಕೆಲಸಗಳು ವಿಳಂಬವಾಗಿವೆ. ಈಗ ಅನುದಾನ ಬಿಡು ಗಡೆಯಾಗಿದ್ದು, ಶೀಘ್ರ ಎಲ್ಲ ಕಾಮಗಾರಿ ಗಳನ್ನು ಪೂರ್ಣಗೊಳಿಸಲಾಗುವುದು ಎಂದು ಉತ್ತರ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗೆ ತರಾಟೆ: ‘ಹಿಂದಿನ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಬಹಳ ಕಡಿಮೆ ಬಂದಿದೆ. ಈ ಸಾಲಿನಲ್ಲಿ ಫಲಿ ತಾಂಶ ಸುಧಾರಣೆ ಆಗಬೇಕು. ಆದರೆ, ಶಿಕ್ಷಣ ಇಲಾಖೆಯಿಂದ ಯಾವುದೇ ಕೆಲಸ ಗಳು ಆಗುತ್ತಿಲ್ಲ. ಇಲ್ಲಿಯವರೆಗೆ ಶಾಲೆಯ ಮುಖ್ಯಶಿಕ್ಷಕರನ್ನು ಕರೆದು  ಸಭೆ ನಡೆಸಿಲ್ಲ ಎಂದರೆ ಎಷ್ಟರಮಟ್ಟಿಗೆ ಬೇಜವಾಬ್ದಾರಿ ಯಿಂದ ವರ್ತಿಸುತ್ತಿದ್ದೀರಿ ಎನ್ನುವುದು ಇದರಿಂದ ಗೊತ್ತಾಗುತ್ತದೆ’ ಎಂದು ಸಿ.ಡಿ. ಮಹಾದೇವ ಬೇಸರ ವ್ಯಕ್ತಪಡಿಸಿದರು.

ಹಿಂದೆ ಸುನಂದಾ ಎಂಬುವವರು ಕ್ಷೇತ್ರ ಶಿಕ್ಷಣಾಧಿಕಾರಿ ಒಳ್ಳೆಯ ಕೆಲಸ ಮಾಡಿದ್ದರು. ಇಂದಿಗೂ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ. ತಾಲ್ಲೂಕಿನಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದರು. ಆದರೆ, ನಿಮಗೇಕೆ ನಿಷ್ಕಾಳಜಿ’ ಎಂದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿ ಕಾರಿ ಎಸ್‌.ಎಂ. ವೀರಭದ್ರಯ್ಯ, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸಂಬಂಧ ಜಿಲ್ಲಾ ಧಿಕಾರಿ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಈಗಾ ಗಲೇ ಎರಡು ಸಭೆ ನಡೆಸಲಾಗಿದೆ. ಉಪ ವಿಭಾಗಾಧಿಕಾರಿ ಒಂದು ಸಭೆ ನಡೆಸಿ ದ್ದಾರೆ. ಪ್ರತಿ ತಿಂಗಳು ಸಭೆ ನಡೆಸಿ ಜಿಲ್ಲಾಧಿ ಕಾರಿಗೆ ವರದಿ ಕೊಡುತ್ತಿದ್ದೇವೆ. ಈ ಬಾರಿ ಫಲಿತಾಂಶ ಸುಧಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ನನ್ನಷ್ಟು ಸಲ ಶಾಲೆ ಗಳಿಗೆ ಭೇಟಿ ನೀಡಿರುವ ಕ್ಷೇತ್ರ ಶಿಕ್ಷಣಾ ಧಿಕಾರಿ ಮತ್ತೊಬ್ಬರಿಲ್ಲ ಎಂದು ಹೇಳು ತ್ತಿದ್ದಂತೆಯೇ ಸಭೆ ನಗೆಗಡಲಲ್ಲಿ ತೇಲಿತು. ‘ನೀವು ಈ ಹಿಂದೆ ಯಾವುದಾದರೂ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಿ ರೇನು?’ ಎಂದು ಕೆ.ವಿ. ಭಾಸ್ಕರ್‌ ಪ್ರಶ್ನಿಸಿ ದಾಗ ಸಭೆಯಲ್ಲಿ ಮತ್ತೆ ನಗೆ ಮೂಡಿತು.

ಕನ್ನಡ  ಕಡೆಗಣನೆಗೆ  ಆಕ್ಷೇಪ
ಕೆಲವು ಇಲಾಖೆಗಳ ಪ್ರಗತಿಯ ವರದಿಯನ್ನು ಇಂಗ್ಲಿಷ್‌ನಲ್ಲಿ ಕೊಟ್ಟಿದ್ದಕ್ಕೆ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ್‌ ಜೈನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಬರುವಾಗ ಕಡ್ಡಾಯವಾಗಿ ಕನ್ನಡದಲ್ಲಿಯೇ ವರದಿ ಕೊಡಬೇಕು ಎಂದು ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಉದ್ದೇಶಿಸಿ ಮಾತನಾಡಿದ ಜೈನ್‌, ನೀವು ಕೊಟ್ಟಿರುವ 27 ಪುಟಗಳ ವರದಿಯಲ್ಲಿ 14 ಪುಟಗಳ ಮಾಹಿತಿ ಇಂಗ್ಲಿಷ್‌ನಲ್ಲಿದೆ. ಮುಂದಿನ ಸಭೆಯಲ್ಲಿ ಕನ್ನಡದಲ್ಲಿಯೇ ಮಾಹಿತಿ ಕೊಡಬೇಕು’ ಎಂದು ಹೇಳಿದರು.

‘ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಕನ್ನಡದಲ್ಲಿಯೇ ನಾಮಫಲಕ ಹಾಕಿಸಲು ಕ್ರಮ ತೆಗೆದುಕೊಳ್ಳಬೇಕು. ಕನ್ನಡದಲ್ಲಿಯೇ ನಾಮಫಲಕ ಹಾಕುತ್ತೇವೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು. ಯಾರು ನಿಯಮಗಳನ್ನು ಪಾಲಿಸುವುದಿಲ್ಲವೋ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕಾರ್ಮಿಕ ಇಲಾಖೆಯ ಇನ್‌ಸ್ಪೆಕ್ಟರ್‌ಗೆ ತಿಳಿಸಿದರು.

ಬಿಆರ್‌ಸಿ 28 ಪುಟಗಳ ವರದಿಯನ್ನು ಇಂಗ್ಲಿಷ್ ಭಾಷೆಯಲ್ಲಿ ಕೊಟ್ಟಿದ್ದೀರಿ. ನೀವೇ ಈ ರೀತಿ ಮಾಡಿದರೆ ಹೇಗೆ? ಇದು ಪುನರಾವರ್ತನೆ ಆಗಬಾರದು ಎಂದು ಹೇಳಿದರು.

ತಡವಾಗಿ ಸಭೆ ಆರಂಭ
ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಹಾಗೂ ಸಾಮಾನ್ಯ ಸಭೆ ತಡವಾಗಿ ಆರಂಭವಾಗುವುದು ರೂಢಿಯಾಗಿದೆ. ಗುರುವಾರ ಕರೆದಿದ್ದ ಸಭೆ ಕೂಡ ಒಂದು ಗಂಟೆ ತಡವಾಗಿ ಆರಂಭಗೊಂಡಿತು. ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆ ಮಧ್ಯಾಹ್ನ 12ಕ್ಕೆ ಆರಂಭಗೊಂಡಿತು. ಆರೋಗ್ಯ, ಕೃಷಿ  ಸೇರಿ ಕೆಲ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿದರೆ ಬಹುತೇಕ ಇಲಾಖೆಯ ಅಧಿಕಾರಿಗಳು ಸಭೆಗೆ ತಡವಾಗಿ ಬಂದಿದ್ದರು.

ಅಧ್ಯಕ್ಷೆ, ಉಪಾಧ್ಯಕ್ಷ, ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರೂ ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಇದರಿಂದಾಗಿ ಸಭೆ ತಡವಾಗಿ ಆರಂಭವಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.