ADVERTISEMENT

ಸಂಡೂರಿನಲ್ಲಿ ಏರುವುದೇ ಬಂಡಾಯದ ಬಿಸಿ?

ಬಿಜೆಪಿ: ಕೂಡ್ಲಿಗಿ ಟಿಕೆಟ್‌ಗೆ ಹನುಮಂತು ಯತ್ನ?: ಮೂರು ಕ್ಷೇತ್ರದಲ್ಲಿ ತಲಾ ಒಬ್ಬರೇ ಆಕಾಂಕ್ಷಿ

ಕೆ.ನರಸಿಂಹ ಮೂರ್ತಿ
Published 15 ಏಪ್ರಿಲ್ 2018, 5:52 IST
Last Updated 15 ಏಪ್ರಿಲ್ 2018, 5:52 IST

ಬಳ್ಳಾರಿ: ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಬಿ.ರಾಘವೇಂದ್ರ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದ್ದನ್ನು ಆಕ್ಷೇಪಿಸಿ ಬಂಡಾಯದ ಮಾತುಗಳನ್ನು ಆಡಿದ್ದ ಬಂಗಾರು ಹನುಮಂತು ಸದ್ದಿಲ್ಲದೆ ಕೂಡ್ಲಿಗಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಇದನ್ನು ಅಲ್ಲಗೆಳೆದಿರುವ ಹನುಮಂತು, ‘ಕೂಡ್ಲಿಗಿ ಕ್ಷೇತ್ರಕ್ಕೆ ಬರಲು ನಾನು ಪ್ರಯತ್ನಿಸಿಲ್ಲ. ಸಂಡೂರಿನಲ್ಲೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವೆ’ ಎಂದಿದ್ದಾರೆ.

ಕೂಡ್ಲಿಗಿ ಕ್ಷೇತ್ರದಲ್ಲಿ ಸೂರ್ಯ ಪಾಪಣ್ಣ, ಎಸ್‌.ಪಿ.ಪ್ರಕಾಶ್‌, ಹಾಗೂ ಕಾಂಗ್ರೆಸ್‌ನಿಂದ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಕೋಡಿಹಳ್ಳಿ ಭೀಮಪ್ಪ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ.

ADVERTISEMENT

ಪಕ್ಷಾಂತರಿಗಳಿಗೆ ಮತ್ತು ಹೊರಗಿನ ಕ್ಷೇತ್ರದವರಿಗೆ ಟಿಕೆಟ್‌ ದೊರಕುತ್ತದೆಯೇ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡಿದೆ. ಆದರೆ ಈ ಪ್ರಶ್ನೆಯೇ ಅಪ್ರಸ್ತುತ ಎಂಬುದು ಆಕಾಂಕ್ಷಿಗಳ ಪ್ರತಿಪಾದನೆ. ಭೀಮಪ್ಪ ಮತ್ತು ಪ್ರಕಾಶ್‌ ಇಬ್ಬರೂ ತಮ್ಮ ಹೆಸರು ಪಟ್ಟಿಯಲ್ಲಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಹಡಗಲಿ: ಹಡಗಲಿ ಕ್ಷೇತ್ರದಲ್ಲಿ ಬಿ.ಚಂದ್ರಾನಾಯ್ಕ, ಎಚ್‌.ಪೂಜಪ್ಪ, ದೂದಾ ನಾಯ್ಕ ಮತ್ತು ಓದೋ ಗಂಗಪ್ಪ ಟಿಕೆಟ್‌ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಟಿಕೆಟ್‌ಗಾಗಿ ಅಲ್ಲಿ 15 ಮಂದಿ ಅರ್ಜಿ ಸಲ್ಲಿಸಿದ್ದರು.

ಬೋವಿ ಸಮುದಾಯದ ನಿವೃತ್ತ ಎಂಜಿನಿಯರ್‌ ಗಂಗಪ್ಪ ಅವರಿಗೆ ಸಂಸದ ಬಿ.ಶ್ರೀರಾಮುಲು ಅವರ ಬೆಂಬಲವಿದೆ ಎನ್ನಲಾಗಿದೆ. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ, ಮಾದಿಗ ಸಮುದಾಯದ ಪೂಜಪ್ಪ ಸಂಘ ಪರಿವಾರದ ಹಿನ್ನೆಲೆಯನ್ನು ನೆಚ್ಚಿಕೊಂಡಿದ್ದಾರೆ. ಲಂಬಾಣಿ ಸಮುದಾಯದ ದೂದಾ ನಾಯ್ಕ ಒಮ್ಮೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು. ಚಂದ್ರಾನಾಯ್ಕ ಮಾಜಿ ಶಾಸಕರು. 2013ರಲ್ಲಿ ಪಕ್ಷ ಮೂರು ಭಾಗವಾದ ಸಂದರ್ಭದಲ್ಲಿ ಅವರು ಬಿಜೆಪಿಯಿಂದಲೇ ಸ್ಪರ್ಧಿಸಿ ಸೋತಿದ್ದರು. ಅವರು ಪಕ್ಷ ನಿಷ್ಠೆಗೆ ಹೆಸರಾದವರು.

ಒಬ್ಬರೇ ಆಕಾಂಕ್ಷಿ: ಈ ಕ್ಷೇತ್ರಗಳನ್ನು ಹೊರತುಪಡಿಸಿದರೆ ಹಗರಿಬೊಮ್ಮನಹಳ್ಳಿಯಲ್ಲಿ ನೇಮಿರಾಜ ನಾಯ್ಕ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಜಿ.ಸೋಮಶೇಖರ ರೆಡ್ಡಿ, ಸಿರುಗುಪ್ಪದಲ್ಲಿ ಸೋಮಲಿಂಗಪ್ಪ ಅವರನ್ನು ಗೆಲ್ಲಿಸಬೇಕು ಎಂದು ಪರಿವರ್ತನಾ ಯಾತ್ರೆ ಸಂದರ್ಭದಲ್ಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದರು. ಈ ಕ್ಷೇತ್ರದಲ್ಲಿ ಮೂವರನ್ನು ಹೊರತುಪಡಿಸಿದರೆ ಬೇರೆ ಆಕಾಂಕ್ಷಿಗಳೂ ಇಲ್ಲದಿರುವುದು ವಿಶೇಷ.

ದೆಹಲಿಯಲ್ಲಿ ಓದೋ ಗಂಗಪ್ಪ

ಹಡಗಲಿ ಕ್ಷೇತ್ರದ ಆಕಾಂಕ್ಷಿಗಳ ಪೈಕಿ ಓದೋ ಗಂಗಪ್ಪ ಮಾತ್ರ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದು ತಿಳಿದುಬಂದಿದೆ. ಉಳಿದವರಿಗಿಂತಲೂ ಇವರು ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದಾರೆ. ಒಮ್ಮೆ ಶ್ರೀರಾಮುಲು ಕೂಡ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅವರಿಗೇ ಟಿಕೆಟ್‌ ಕೊಡುವಂತೆ ವರಿಷ್ಠರಿಗೆ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

ಗ್ರಾಮೀಣದಲ್ಲಿ ಇಬ್ಬರ ಹೆಸರು

‘ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಮೊದಲು ಶ್ರೀರಾಮುಲು ಮತ್ತು ಎಸ್‌.ಪಕ್ಕಿರಪ್ಪ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ರಾಮುಲು ಅವರಿಗೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಟಿಕೆಟ್‌ ಘೋಷಣೆಯಾಗಿದ್ದರಿಂದ, ಅವರ ಬದಲು ಓಬಳೇಶ್‌ ಹೆಸರನ್ನು ಸೇರಿಸಲಾಗಿತ್ತು’ ಎಂದು ಪಿ.ಚನ್ನಬಸವನಗೌಡ ತಿಳಿಸಿದರು.

‘ಓಬಳೇಶ್‌ ಹಿಂದಿನ ಸಲ ಸ್ಪರ್ಧಿಸಿ ಸೋತಿದ್ದರು. ಪಕ್ಕೀರಪ್ಪ ನಿಯೋಜಿತ ಅಭ್ಯರ್ಥಿ ಎಂಬ ಹಣೆಪಟ್ಟಿಯೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಈ ಇಬ್ಬರಲ್ಲಿ ಟಿಕೆಟ್‌ ಯಾರಿಗೆ ಘೋಷಣೆಯಾಗುತ್ತದೋ ಕಾದು ನೋಡಬೇಕು’ ಎಂದರು.

**

ಹನುಮಂತು ಅವರು ಕೂಡ್ಲಿಗಿ ಕ್ಷೇತ್ರದಿಂದ ಟಿಕೆಟ್‌ಗಾಗಿ ಪ್ರಯತ್ನಿಸಿದ್ದಾರೆ. ಟಿಕೆಟ್‌ ಘೋಷಣೆಯಾಗುವವರೆಗೂ ಏನೂ ಹೇಳಲಾಗುವುದಿಲ್ಲ – ಪಿ.ಚನ್ನಬಸವನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.