ADVERTISEMENT

‘ಸಫಾಯಿ ಕರ್ಮಚಾರಿಗಳ ನಿರ್ಲಕ್ಷ್ಯ ಸಲ್ಲದು’

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:28 IST
Last Updated 31 ಜನವರಿ 2017, 6:28 IST
‘ಸಫಾಯಿ ಕರ್ಮಚಾರಿಗಳ ನಿರ್ಲಕ್ಷ್ಯ ಸಲ್ಲದು’
‘ಸಫಾಯಿ ಕರ್ಮಚಾರಿಗಳ ನಿರ್ಲಕ್ಷ್ಯ ಸಲ್ಲದು’   

ಹೊಸಪೇಟೆ: 2014–15, 2015–16ನೇ ಸಾಲಿನಲ್ಲಿ ಸಫಾಯಿ ಕರ್ಮ­ಚಾರಿಗಳಿಗಾಗಿ ಖರೀದಿಸಿರುವ ಪರಿಕರ­ಗಳಿಗೆ ವೆಚ್ಚ ಮಾಡಿರುವ ಹಣವೆಷ್ಟು ಎನ್ನುವುದರ ಕುರಿತು ನಿಖರ ಮಾಹಿತಿ ನೀಡಬೇಕೆಂದು ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸಫಾಯಿ ಕರ್ಮಚಾರಿಗಳ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಕರಗಳ ಸಂಖ್ಯೆ, ಅವುಗಳಿಗೆ ಖರ್ಚು ಮಾಡಿದ ಹಣ, ಎಷ್ಟು ಸಫಾಯಿ ಕರ್ಮಚಾರಿಗಳಿಗೆ ಪರಿಕರಗಳನ್ನು ನೀಡಲಾಗಿದೆ ಎನ್ನುವುದರ ಕುರಿತು ವಿವರವಾಗಿ ಮಾಹಿತಿ ನೀಡಬೇಕು ಎಂದು ನಗರಸಭೆ ಪೌರಾಯುಕ್ತ ಎಂ.ಪಿ. ನಾಗಣ್ಣ ಅವರಿಗೆ ನಿರ್ದೇಶನ ನೀಡಿದರು. ಮಿಶ್ರಾ ಅವರು ಒಂದರ ಮೇಲೊಂದು ಪ್ರಶ್ನೆಗಳನ್ನು ಕೇಳಿ, ಸೂಚನೆ ಕೊಟ್ಟಿದ್ದ­ರಿಂದ ಪೌರಾಯುಕ್ತರು ತಬ್ಬಿಬ್ಬಾದರು.

ಬಳಿಕ ಮಾತನಾಡಿದ ಪೌರಾ­ಯುಕ್ತರು, ಸಫಾಯಿ ಕರ್ಮಚಾರಿಗಳಿಗೆ ಪರಿಕರಗಳನ್ನು ನೀಡಲಾಗುತ್ತಿದೆ. ಆದರೆ, ಅವುಗಳನ್ನು ಅವರು ಬಳಸುತ್ತಿಲ್ಲ. ಈ ಕುರಿತು ದಾಖಲೆಗಳೊಂದಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಪರಿಕರಗಳನ್ನು ನೀಡಿದ್ದರೂ ಸಫಾಯಿ ಕರ್ಮಚಾರಿಗಳು ಅವುಗಳನ್ನು ಏಕೆ ಬಳಸುತ್ತಿಲ್ಲ. ಅಧಿಕಾರಿಗಳು ಅವರಿಗೆ ಸರಿಯಾದ ಸೂಚನೆ ಕೊಡುತ್ತಿಲ್ಲವೇ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದ ಎಂದು ಮಿಶ್ರಾ ಮಧ್ಯ ಪ್ರವೇಶಿಸಿ ಎಚ್ಚರಿಕೆ ನೀಡಿದರು.

ಕಾರ್ಮಿಕರ ಭವಿಷ್ಯ ನಿಧಿ ಸೇರಿದಂತೆ ಪ್ರತಿಯೊಂದರ ಬಗ್ಗೆ ಮಾಹಿತಿ ಕೊಡಬೇಕು. ಕಾರ್ಮಿಕರ ಹಿತ ಕಾಪಾಡಲು ಶ್ರಮಿಸಬೇಕು ಎಂದು ಸೂಚಿಸಿದರು. ನಗರಸಭೆ ನೈರ್ಮಲ್ಯ ಅಧಿಕಾರಿ ಶಶಿಭೂಷಣ ಹಿರೇಮಠ, ಕಾಯಂ ಪೌರ ಕಾರ್ಮಿಕರ ವಿಷಯ ನಿರ್ವಹಣಾಧಿಕಾರಿ ಓಬಣ್ಣ, ಕಮಲಾಪುರ ಪಟ್ಟಣ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ, ಕೊಟ್ಟೂರು ಆರೋಗ್ಯಾಧಿಕಾರಿ ಮಂಜುನಾಥ, ಸಹಾಯಕ ಸಮಾಜ ಕಲ್ಯಾಣಾಧಿಕಾರಿ ಮಾಣಿಕ್ಯಚಾರ್ಯ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.