ADVERTISEMENT

ಸಮಾನ ಶಿಕ್ಷಣ ನೀತಿ ಜಾರಿ ಅಗತ್ಯ: ಬಂಜಗೆರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2015, 9:13 IST
Last Updated 6 ಜನವರಿ 2015, 9:13 IST
ಯಾದವ ಸಂಘದ ಜಿಲ್ಲಾ ಘಟಕ ಬಳ್ಳಾರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಪಿ.ಗಾದೆಪ್ಪ, ಚಿದಾನಂದಪ್ಪ, ಯಶವಂತರಾಜ, ಆಶಾಲತಾ ಚಿತ್ರದಲ್ಲಿದ್ದಾರೆ
ಯಾದವ ಸಂಘದ ಜಿಲ್ಲಾ ಘಟಕ ಬಳ್ಳಾರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಪಿ.ಗಾದೆಪ್ಪ, ಚಿದಾನಂದಪ್ಪ, ಯಶವಂತರಾಜ, ಆಶಾಲತಾ ಚಿತ್ರದಲ್ಲಿದ್ದಾರೆ   

ಬಳ್ಳಾರಿ: ‘ಬಡ, ಶ್ರೀಮಂತ, ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ­ಗಳಿಗೆ ಏಕರೂಪದ ಪಠ್ಯಕ್ರಮ­ವನ್ನು ಪರಿಚಯಿಸುವ ಮೂಲಕ ಸರ್ಕಾರ ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವ ಅಗತ್ಯವಿದೆ’ ಎಂದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಯಾದವ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಶಿಕ್ಷಣದಲ್ಲಿ ಸಮಾನತೆ ಸಾಧಿಸದಿದ್ದರೆ ಸಾಮಾಜಿಕ ಸಮಾನತೆ ಅಸಾಧ್ಯ. ಅನೇಕ ವಿಚಾರಗಳಲ್ಲಿ ಅಮೆರಿಕವನ್ನು ಅನುಕರಿ­ಸುವ ಇಲ್ಲಿನ ಸರ್ಕಾರಗಳು, ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಆ ದೇಶವನ್ನು ಅನುಕರಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಹೋಟೆಲ್‌ಗಳನ್ನು ನಡೆಸು­ವುದು ಸರ್ಕಾರದ ಕೆಲಸವಲ್ಲ. ಆ ಕೆಲಸವನ್ನು ಖಾಸಗಿಯವರಿಗೆ ವಹಿಸಿ, ಶಿಕ್ಷಣ ಕ್ಷೇತ್ರವನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ಪ್ರದರ್ಶಿಸಬೇಕಿದೆ. ಸಮಾನ ಶಿಕ್ಷಣವು ಪ್ರಜಾತಾಂತ್ರಿಕ ಮೌಲ್ಯಗಳನ್ನು ರೂಢಿಸುವುದರಿಂದ ಸರ್ಕಾರವೇ ಶಿಕ್ಷಣ­ವನ್ನು ನೀಡುವಂತಾಗಬೇಕು ಎಂದು ಅವರು ಹೇಳಿದರು.

ಮುಂದುವರಿದಿರುವ ಅಮೆರಿಕ, ಜರ್ಮನಿ ಮತ್ತಿತರ ದೇಶಗಳಲ್ಲಿ ಶಿಕ್ಷಣ ಖಾಸಗಿಯವರ ಅಧೀನದಲ್ಲಿರದೆ, ಸರ್ಕಾರದ ಕೈಯಲ್ಲೇ ಇರುವುದರಿಂದ ಎಲ್ಲ ವರ್ಗದವರೂ ಶಿಕ್ಷಣ ಪಡೆಯು­ವಂತಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೇವಲ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸೀಮಿತವಾಗಿದ್ದು, ಸಾಮಾಜಿಕ ಭದ್ರತೆ, ಸಾರಿಗೆ, ಶಿಕ್ಷಣ ಕ್ಷೇತ್ರಗಳತ್ತ ಆದ್ಯತೆ ನೀಡುವುದನ್ನು ಮರೆತಿದೆ ಎಂದು ಅವರ ದೂರಿದರು.

ಬಹುಪರಾಖ್‌ ಹೇಳಬಾರದು: ಸಾಹಿತಿ­ಗಳು, ಬುದ್ಧಿಜೀವಿಗಳು ಸರ್ಕಾರದ ಪದವಿ, ಅಧಿಕಾರ ದೊರಕಿದ ಕೂಡಲೇ ಅದಕ್ಕೇ ಅಂಟಿಕೊಂಡು ಸರ್ಕಾರದ ಧೋರಣೆಯನ್ನು ಬೆಂಬಲಿ­ಸುತ್ತ, ಬಹುಪರಾಖ್‌ ಹೇಳಬಾರದು ಎಂದು ಅವರು ಮಾರ್ಮಿಕವಾಗಿ ನುಡಿದರು.

ಸಾಹಿತಿಗಳು ಸತ್ಯವನ್ನು ಶೋಧಿಸುವ ಕೆಲಸ ಮಾಡಬೇಕು. ಅಧಿಕಾರ ಮತ್ತು ಪದವಿಯನ್ನೇ ನೆಚ್ಚಿಕೊಂಡು ವಿಮರ್ಶಾ ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಅಧಿಕಾರ, ಪದವಿ, ಸ್ಪರ್ಧೆಯನ್ನೇ ಮುಖ್ಯ ಎಂದು ಭಾವಿಸುತ್ತ ಸಾಂಸ್ಕೃತಿಕವಾಗಿ ನಿರ್ಣಾಯಕ ಪಾತ್ರ ವಹಿಸದೆ, ಮೌನ ವಹಿಸುವ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಮಹಿಳೆಯರನ್ನು ಕೆಲವು ಸಂದರ್ಭ­ಗಳಲ್ಲಿ ಮನೆಯಿಂದ ಹೊರಗಿಡುತ್ತ, ಅಮಾನವೀಯವಾದ ಮೌಢ್ಯ ಆಚರಣೆ­ಯಲ್ಲಿ ತೊಡಗಿರುವ ಯಾದವ (ಗೊಲ್ಲರ) ಸಮುದಾಯವು ಸಾಮಾಜಿಕ­ವಾಗಿ ಅತ್ಯಂತ ಹಿಂದುಳಿದಿದ್ದು, ಒಳ­ಪಂಗಡ­ಗಳ ಪ್ರಜ್ಞೆಯಿಂದ ನರಳುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿ­ದರು.

ಪ್ರತಿಯೊಂದು ಸಮುದಾಯಗಳು ಜಾತಿ ‘ವ್ಯಾಮೋಹ’ ತೋರದೆ, ಇತರ ಜಾತಿಗಳೊಂದಿಗೆ ಸಮಾನ­ವಾಗುವ ಗುರಿ ಹೊಂದಬೇಕು. ಜಾತಿಯು ಶ್ರೇಷ್ಠ, ಕೀಳು ಎಂಬ ಭಾವನೆಯನ್ನು ಕೈಬಿಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಯಾದವ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಗಾದೆಪ್ಪ, ಮುಖಂಡರಾದ ಚಿದಾನಂದಪ್ಪ, ಯಶವಂತರಾಜ, ಆಶಾಲತಾ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.