ADVERTISEMENT

ಸರ್ವರ್‌ ಡೌನ್‌: ಆನ್‌ಲೈನ್‌ ನೋಂದಣಿಗೆ ಅಡ್ಡಿ

ಕೆ.ನರಸಿಂಹ ಮೂರ್ತಿ
Published 17 ಮೇ 2017, 9:27 IST
Last Updated 17 ಮೇ 2017, 9:27 IST
‘ಕೌಶಲ ಕರ್ನಾಟಕ’ ಕಾರ್ಯಕ್ರಮದ ಅಡಿ ಅರ್ಜಿ ಸಲ್ಲಿಸಲು ಮಂಗಳವಾರ ಬಳ್ಳಾರಿಯ ಬಿ.ಡಿ.ಎ.ಎ ಸಭಾಂಗಣಕ್ಕೆ ಬಂದಿದ್ದ ಉದ್ಯೋಗಾಕಾಂಕ್ಷಿಗಳು ಆನ್‌ಲೈನ್‌ ನೋಂದಣಿಗಾಗಿ ಕಾಯುತ್ತಿದ್ದ ದೃಶ್ಯ
‘ಕೌಶಲ ಕರ್ನಾಟಕ’ ಕಾರ್ಯಕ್ರಮದ ಅಡಿ ಅರ್ಜಿ ಸಲ್ಲಿಸಲು ಮಂಗಳವಾರ ಬಳ್ಳಾರಿಯ ಬಿ.ಡಿ.ಎ.ಎ ಸಭಾಂಗಣಕ್ಕೆ ಬಂದಿದ್ದ ಉದ್ಯೋಗಾಕಾಂಕ್ಷಿಗಳು ಆನ್‌ಲೈನ್‌ ನೋಂದಣಿಗಾಗಿ ಕಾಯುತ್ತಿದ್ದ ದೃಶ್ಯ   

ಬಳ್ಳಾರಿ: ನಿರುದ್ಯೋಗಿಗಳಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸುವ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ‘ಕೌಶಲ ಕರ್ನಾಟಕ’ ನೋಂದಣಿ ಅಭಿಯಾನಕ್ಕೆ ಆರಂಭದಲ್ಲೇ ‘ಸರ್ವರ್‌ ಡೌನ್‌’ ವಿಘ್ನ ಎದುರಾಗಿದ್ದು ಆನ್‌ಲೈನ್‌ ನೋಂದಣಿಗೆ ತಡೆ ಉಂಟಾಗಿದೆ.

ಕಾರ್ಯಕ್ರಮ ಉದ್ಘಾಟನೆಗೊಂಡ ಸೋಮವಾರ ಹಾಗೂ ಎರಡನೇ ದಿನವಾದ ಮಂಗಳವಾರವೂ ಇದೇ ಸಮಸ್ಯೆ ಮುಂದುವರಿದಿದೆ. ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಬಿ.ಡಿ.ಎ.ಎ ಸಭಾಂಗಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆತ ಬಳಿಕ, ಕಂಪ್ಯೂಟರ್‌ ಮುಂದೆ ಕುಳಿತ ಸಿಬ್ಬಂದಿಗೆ ಕಾರ್ಯಕ್ರಮದ ವೆಬ್‌ ಪೋರ್ಟಲ್‌ ಸೌಲಭ್ಯ ದೊರಕಲಿಲ್ಲ. ಸಂಜೆ 4ರ ವರೆಗೂ ಇದೇ ಸಮಸ್ಯೆ ಮುಂದು ವರಿದಿತ್ತು. ಪರಿಣಾಮವಾಗಿ, ಸಿಬ್ಬಂ ದಿಯು ನಿರುದ್ಯೋಗಿಗಳ ಅರ್ಜಿಯನ್ನು ಸ್ವೀಕರಿಸುವ ಕೆಲಸವನ್ನಷ್ಟೇ ಮಾಡಬೇಕಾಯಿತು.

ಮಂಗಳವಾರ ಬೆಳಿಗ್ಗೆ ಸಭಾಂಗಣದ ಕೌಂಟರ್‌ಗಳಿಗೆ ‘ಪ್ರಜಾವಾಣಿ’ ಭೇಟಿ ನೀಡಿದ ಸಮಯದಲ್ಲೂ ಸಿಬ್ಬಂದಿ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುತ್ತಿದ್ದರು. ಆನ್‌ಲೈನ್‌ ನೋಂದಣಿ ಮಾಡಿಸಲೇಬೇಕು ಎಂಬ ಹಟ ತೊಟ್ಟವರು ಮಾತ್ರ ಕೌಂಟರ್‌ಗಳಲ್ಲಿ ಕಾಯುತ್ತಾ ಕುಳಿತಿದ್ದರು.

ADVERTISEMENT

ರಾಜ್ಯದೆಲ್ಲೆಡೆ ಸಮಸ್ಯೆ: ಈ ಕುರಿತು ಪ್ರತಿಕ್ರಿಯಿಸಿದ ಸಿಬ್ಬಂದಿಯೊಬ್ಬರು, ‘ಸೋಮವಾರ ಬೆಳಿಗ್ಗೆ ಹತ್ತೂವರೆಯಿಂದ ಸಂಜೆ 4ರ ವರೆಗೆ ಸರ್ವರ್‌ ಡೌನ್‌ ಆಗಿತ್ತು. ನಂತರ ನಿರುದ್ಯೋಗಿಗಳ ಅರ್ಜಿ  ಮಾಹಿತಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದೆವು. ಒನ್‌ಟೈಂ ಪಾಸ್‌ವರ್ಡ್‌ ಮಾಹಿತಿಯನ್ನು ಅವರಿಗೆ ದೂರವಾಣಿ ಮೂಲಕ ತಿಳಿಸಿದೆವು’ ಎಂದರು.

820 ಅರ್ಜಿ ಸ್ವೀಕಾರ: ‘ಜಿಲ್ಲಾ ಕೇಂದ್ರದಲ್ಲಿ 20 ಹಾಗೂ ಏಳು ತಾಲ್ಲೂಕು ಕೇಂದ್ರಗಳಲ್ಲಿ ತಲಾ 10ರಂತೆ ಒಟ್ಟು 90 ಕೌಂಟರ್‌ಗಳನ್ನು ತೆರೆಯಲಾಗಿದ್ದು, ಮೊದಲ ದಿನ 820 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ಅರ್ಜಿ ಸ್ವೀಕರಿಸುವ ಕಾರ್ಯ ಆರಂಭವಾಗಿದೆ. ಮೇ 22ರ ವರೆಗೆ ಸುಮಾರು 20 ಸಾವಿರ ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ಮನೋಹರ್ ತಿಳಿಸಿದರು.

ಇಂದು ಮತ್ತೆ ಬಂದೆ
‘ಆನ್‌ಲೈನ್‌ ಸಮಸ್ಯೆ ಇದೆ ಎಂದು ಹೇಳಿದ್ದರಿಂದ ಸೋಮವಾರ ವಾಪಸ್‌ ಹೋಗಿ, ಮಂಗಳವಾರ ಮತ್ತೆ ಬಂದಿರುವೆ’ ಎಂದು ತಾಲ್ಲೂಕಿನ ಕೋಳೂರು ಗ್ರಾಮದ ಯುವಕ ಬಿ.ತಿಪ್ಪೇಸ್ವಾಮಿ ಹೇಳಿದರು.

*

ಇಡೀ ರಾಜ್ಯದಾದ್ಯಂತ ಸರ್ವರ್‌ ಡೌನ್‌ ಆಗಿದೆ. ಹೀಗಾಗಿ ಅರ್ಜಿಗಳನ್ನು ಸ್ವೀಕರಿಸುವ ಕೆಲಸವಷ್ಟೇ ನಡೆದಿದೆ
ಡಾ.ರಾಮಪ್ರಸಾದ್‌ ಮನೋಹರ್‌
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.