ADVERTISEMENT

ಸಾಂಸ್ಕೃತಿಕ ನೆಲೆಗಟ್ಟಿನ ಹುಳುಕು ಕಿತ್ತು ಹಾಕಿ

ಸಂಸ್ಕೃತಿ ಸಮ್ಮೇಳನಕ್ಕೆ ತೆರೆ; ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:42 IST
Last Updated 22 ಮಾರ್ಚ್ 2017, 7:42 IST

ಹೊಸಪೇಟೆ: ‘ಭಾರತೀಯ ಸಾಮಾಜಿಕ ವ್ಯವಸ್ಥೆ ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭ­ದಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನ ಹುಳುಕು­ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಕಿತ್ತು ಹಾಕಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್‌ ಹೇಳಿದರು.

ಧಾರವಾಡ ಕರ್ನಾಟಕ ವಿಶ್ವ­ವಿದ್ಯಾಲಯದ ಡಾ.ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಂತರಿಕ ಗುಣ­ಮಟ್ಟ ಭರವಸೆ ಕೋಶದ ಸಹಭಾಗಿತ್ವದಲ್ಲಿ ತಾಲ್ಲೂಕಿನ ವಿ.ವಿ ಮಂಟಪ ಸಭಾಂಗಣದಲ್ಲಿ ಮಂಗಳವಾರ ನಡೆದ 20ನೇ ಸಂಸ್ಕೃತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಬ್ರಿಟಿಷರು ತೋರಿಸಿದ ಚೌಕಟ್ಟು­ಗಳಿಂದ ಸಂಸ್ಕೃತಿಯನ್ನು ಅರ್ಥೈಸ­ಬೇಕೇ? ಹಿಂದೂ ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಅರ್ಥೈಸಬೇಕೆ? ಆಯಾ ಕಾಲದ ಸಂಸ್ಕೃತಿಗಳನ್ನು ಬಿಡಿ ಬಿಡಿಯಾಗಿ ನೋಡಬೇಕೆ? ಅಥವಾ ಇಡಿಯಾಗಿ ನೋಡಬೇಕೇ? ಎಂದು ಪ್ರಶ್ನಿಸಿದರು.

ಮಾನವಿಕ ಶಾಸ್ತ್ರಗಳು, ಬುದ್ಧಿಜೀವಿ­ಗಳು, ಸನಾತನವಾದಿಗಳು, ಬಲ­ಪಂಥೀಯ ರಾಜಕಾರಣಿಗಳು ವಿಜ್ಞಾನ–ತಂತ್ರಜ್ಞಾನದ ಹೊಸ ಅರಿವನ್ನು ಬಳಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿಗಳ ಹಗಲು ಕನಸಿನ ಭ್ರಮೆಯಿಂದ ಹೊರ­ಬರಬೇಕು. ಪ್ರತಿಯೊಂದು ಜಾತಿ, ಲಿಂಗಕ್ಕೆ ಸಂಬಂಧಿಸಿ ಸಂಸ್ಕೃತಿಗಳಿವೆ. ಆಯಾ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಉತ್ಪಾದನಾ ಕ್ರಮಗಳಿಗೆ ಅನುಗುಣವಾಗಿ ಸಂಸ್ಕೃತಿ ಇರುತ್ತದೆ ಎಂದು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸೋಮಶೇಖರ ಇಮ್ರಾಪೂರ ಮಾತ­ನಾಡಿ, ಮಧ್ಯಮ ವರ್ಗ ಅದರಲ್ಲೂ ಮಹಿಳೆಯರು ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಅವರೇ ಸಂಸ್ಕೃತಿಯ ಬಾಧ್ಯಸ್ಥರು. ಜಾತಿಗಳೆಲ್ಲ ಒಂದಾದಾಗ ಹೊಸ ಸಂಸ್ಕೃತಿ ಹುಟ್ಟುತ್ತವೆ ಎಂದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ಕನ್ನಡ ವಿ.ವಿ ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಎ. ಮೋಹನ ಕುಂಟಾರ್, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಓದುವ ಹೊಸ ಬಗೆ ಕಂಡುಕೊಳ್ಳಬೇಕಾಗಿದೆ. ಆಧುನಿಕ ಕನ್ನಡ ನಾಟಗಳೆಲ್ಲವೂ ಅನಾವರಣ­ಗೊಳ್ಳುವುದು ಜಾನಪದ ಸಂಸ್ಕೃತಿಯಿಂದ. ರಂಗಪ್ರಯೋಗಕ್ಕೆ ಜಾನಪದ ಸಂಸ್ಕೃತಿ ಅನುಸಂಧಾನ ಆಗಬೇಕು ಎಂದರು.

ಹಂಪಿ ಕನ್ನಡ ವಿ.ವಿ ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ, ಕುಲಸಚಿವ ಡಿ. ಪಾಂಡುರಂಗಬಾಬು, ಕರ್ನಾಟಕ ವಿ.ವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಧನವಂತ ಹಾಜವಗೋಳ, ವೆಂಕಟಗಿರಿ ದಳವಾಯಿ, ಪಿ.ಕೆ. ರಾಠೋಡ, ಎಸ್‌.ವೈ. ಸೋಮಶೇಖರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.