ADVERTISEMENT

ಸಿಡಿಲಿಗೆ 74 ಕುರಿ ಸಾವು, ಒಡೆದ ಚೆಕ್‌ ಡ್ಯಾಂ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 8:56 IST
Last Updated 29 ಏಪ್ರಿಲ್ 2017, 8:56 IST

ಹೊಸಪೇಟೆ: ಜಿಲ್ಲೆಯಲ್ಲಿ ಶುಕ್ರವಾರ ನಸುಕಿನ ಜಾವ ಮಳೆ ಸುರಿದು ವಿವಿಧೆಡೆ 74 ಕುರಿಗಳು ಸತ್ತು, ಸಿಡಿಲಿಗೆ ಗುಡಿಸಲು ಸುಟ್ಟಿದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ.ಮಳೆಯಿಂದಾಗಿ ಬಹುತೇಕ ಹೊಂಡ, ಚೆಕ್‌ಡ್ಯಾಂ ತುಂಬಿದ್ದು ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರಸಿಕ್ಕಂತಾಗಿದೆ.

ಒಡೆದ ಚೆಕ್‌ ಡ್ಯಾಂ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಶುಕ್ರವಾರ ಬೆಳಗಿನ ಜಾವ ಗುಡುಗು, ಸಿಡಿಲು ಮತ್ತು ಮಳೆಗೆ 19 ಕುರಿಗಳು ಸಾವನ್ನಪ್ಪಿದ್ದು, ಚೆಕ್‌ ಡ್ಯಾಂ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಪೋಲಾಗಿ ಹರಿದಿದೆ.ತಾಲ್ಲೂಕಿನ ಪಿಲ್ಲೋಬನಹಳ್ಳಿ ಗ್ರಾಮದಲ್ಲಿ ಗುಡ್ಡದರ ತಿಮ್ಮಪ್ಪ ಎನ್ನುವವರಿಗೆ ಸೇರಿದ 19 ಕುರಿಗಳು ಸಿಡಿಲು ಹೊಡೆದ ಪರಿಣಾಮ ಸಾವನ್ನಪ್ಪಿವೆ, ಇದರಿಂದಾಗಿ ₹ 1 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ.

ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸೂರಪ್ಪ, ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ ಭೇಟಿ ನೀಡಿದರು. ಸತ್ತ ಕುರಿಗಳಿಗೆ ತಲಾ ₹5ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದರು.

ADVERTISEMENT

ಒಡೆದ ಚೆಕ್‌ ಡ್ಯಾಂ
ಮಳೆಯ ಆರ್ಭಟಕ್ಕೆ ತಾಲ್ಲೂಕಿನ ಮಾದೂರು ಗ್ರಾಮದ ಬಳಿ ಉಪ್ಪಾರಗಟ್ಟಿ ರಸ್ತೆಯಲ್ಲಿರುವ ಚೆಕ್‌ ಡ್ಯಾಂ ಹೊಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ. ಈ ಕುರಿತಂತೆ ಗ್ರಾಮದ ಮುಖಂಡರಾದ ಮಹೇಶ್‌, ಸಂಗಪ್ಪ ಕೂಡಲೇ ಚೆಕ್‌ ಡ್ಯಾಂ ದುರಸ್ತಿಗೊಳಿಸಬೇಕು. ಇದು ನಾಲ್ಕನೇ ಬಾರಿ ಒಡೆಯುತ್ತಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ಜಲಸಂರಕ್ಷಣೆಯ ಮೂಲ ಉದ್ಧೇಶವೇ ಮಾಯವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಿಮೆಂಟ್ ಶೀಟ್‌ ಜಖಂ
ಮಾದೂರು ಗ್ರಾಮದಲ್ಲಿ ಗಾಳಿ ಮಳೆಯಿಂದಾಗಿ ಕರಿಗೋಣೆಪ್ಪನವರ ಗಂಗಮ್ಮ ಎನ್ನುವವರಿಗೆ ಸೇರಿದ್ದ ಮನೆಯ ಚಾವಣಿಯ ಸಿಮೆಂಟ್‌ ಶೀಟ್‌ಗಳು ಒಡೆದು ನೆಲಕ್ಕೆ ಉರುಳಿವೆ. ಕಬ್ಬಿಣದ ಕಂಬಗಳು ಮುರಿದಿವೆ. ಇದರಿಂದಾಗಿ ₹ 50 ಸಾವಿರಕ್ಕೂ ಹೆಚ್ಚು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಡಿ.ಮಹೇಶಪ್ಪ ಭೇಟಿ ನೀಡಿದರು.

ನೆಮ್ಕದಿ ತಂದ ಮಳೆ
ಕೂಡ್ಲಿಗಿ: ತಾಲ್ಲೂಕಿನ ಕೆಲ ಭಾಗಗಳಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಬಿರು ಬಿಸಿಲಿಗೆ ಬೆಂದಿದ್ದ ಜನತೆಗೆ ಸ್ವಲ್ಪ ನೆಮ್ಮದಿ ತಂದಿದ್ದರೆ, ರೈತರ ಮೊಗದಲ್ಲಿ ಸಂತಸ ಮೂಡಿದ್ದು ಕೃಷಿ ಚಟುವಟಿಕೆ ಗರಿಗೆದರಿದೆ.ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಆರಂಭವಾದ ಮಳೆ, ಬಾರಿ ಗುಡುಗು ಸಿಡಿಲಿನಿಂದ ಆರ್ಭಟಿಸಿತೊಡಗಿತು. ನಂತರ ಉಜ್ಜನಿ, ತೂಲಹಳ್ಳಿಯ ಭಾಗದಲ್ಲಿ ಬಾರಿ ಮಳೆ ಸುರಿದ್ದರೆ, ಕೂಡ್ಲಿಗಿ, ನಿಂಬಳಗೆರೆ, ಆಗ್ರಹಾರ, ಹೊಸಹಳ್ಳಿ, ಹುಡೇಂ ಮುಂತಾದ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದೆ.

ಉಜ್ಜನಿ ಗ್ರಾಮದಲ್ಲಿ ಸುರಿದ ಬಾರಿ ಮಳೆ ಹೊಲದಲ್ಲಿದ್ದ ಮಂಟಪ್ಪರ ಪಕೀರಪ್ಪ ಮತ್ತು ಪೂಜಾರ್ ಸಿದ್ಧಲಿಂಗಪ್ಪ ಅವರ 55 ಕುರಿಗಳು ಬಲಿಯಾಗಿವೆ.ಉಜ್ಜನಿ, ತೂಲಹಳ್ಳಿ, ಬೆನಕಹಳ್ಳಿ ಗ್ರಾಮಗಳಲ್ಲಿ ಅನೇಕ ಕೃಷಿ ಹೊಂಡಗಳು ತುಂಬಿದ್ದು, ಕೆಲವು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.

55 ಕುರಿಗಳು ಸಾವು
ಕೊಟ್ಟೂರು: ಪಟ್ಟಣಕ್ಕೆ ಸಮೀಪದ ಉಜ್ಜಿನಿ ಗ್ರಾಮದಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ 55 ಕುರಿಗಳು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಗ್ರಾಮದ ಹೊರವಲಯದ ದೇವಸ್ಥಾನದ ಸಮೀಪ ಮಂಟಪ್ಪರ ಫಕೀರಪ್ಪ ಹಾಗೂ ಪೂಜಾರ್ ಸಿದ್ದಲಿಂಗಪ್ಪ ಇವರಿಗೆ ಸೇರಿದ ಒಟ್ಟು 55 ಕುರಿಗಳು ರಭಸದಿಂದ ಹರಿದ ಮಳೆನೀರಿನಲ್ಲಿ ಕೊಚ್ಚಕೊಂಡು ಹೋದ ಪರಿಣಾಮ ಸಾವನ್ನಪ್ಪಿದ್ದಾವೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ರವಿಪ್ರಕಾಶ್‌ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕುರಿಗಳ ಸಾವಿನಿಂದ ಅಪಾರ ನಷ್ಟ ವಾಗಿದೆ ಸರ್ಕಾರ ಪರಿಹಾರ ನೀಡಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.

ಭಾರಿ ಮಳೆ
ಕೊಟ್ಟೂರು: ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಗುಡುಗು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ. ಇದರಿಂದಾಗಿ ಬಿಸಿಲಿನ ತಾಪದಿಂದ ತತ್ತರಿಸಿದ್ದ ಜನತೆಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿ ಬಿತ್ತನೆ ಕಾರ್ಯಕ್ಕೆ ಅಣಿಯಾಗಲು ಹೊಲಗಳನ್ನು ಸಜ್ಜುಗೊಳಿಸುವ ದೃಶ್ಯ ಸಾಮಾನ್ಯವಾಗಿತ್ತು.

ಜಿನುಗು ಮಳೆ
ಸಂಡೂರು: ಸಂಡೂರು ಸುತ್ತಮುತ್ತ ಶುಕ್ರವಾರ ನಸುಕಿನಲ್ಲಿ ಕೆಲ ಸಮಯ ಗುಡುಗು ಜಿಟಿಜಿಟಿ ಮಳೆ ಸುರಿದಿದೆ. ಆದರೆ ಶುಕ್ರವಾರ ಬೇಸಿಗೆಯ ಧಗೆ ಹೆಚ್ಚಲು ಕಾರಣವಾಯಿತು.
ಸಂಡೂರು ಮಳೆ ಮಾಪನ ಕೇಂದ್ರದಲ್ಲಿ 2 ಮಿ.ಮೀ, ಕುರೆಕುಪ್ಪ ಮಳೆ ಮಾಪನ ಕೇಂದ್ರದಲ್ಲಿ 4 ಮಿ.ಮೀ,  ಚೋರನೂರು ಮಳೆ ಮಾಪನ ಕೇಂದ್ರದಲ್ಲಿ 1.6 ಮಿ.ಮೀ ಮಳೆ ದಾಖಲಾಗಿದೆ.  ಮುಂದಿನ ಎರಡು ದಿನ ತಾಲ್ಲೂಕಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.