ADVERTISEMENT

ಹಂಪಿಯಲ್ಲಿ ತಗ್ಗಿದ ಪ್ರವಾಸಿಗರ ಸಂಖ್ಯೆ

ಕೆಂಡದಂತಹ ಬಿಸಿಲಿಗೆ ಹೆದರಿದ ಜನ; ವೀಕ್ಷಕರ ಸುಳಿವಿಲ್ಲದೆ ಬಿಕೋ ಎನ್ನುತ್ತಿರುವ ಸ್ಮಾರಕಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 2 ಫೆಬ್ರುವರಿ 2017, 6:19 IST
Last Updated 2 ಫೆಬ್ರುವರಿ 2017, 6:19 IST
ಹಂಪಿಯಲ್ಲಿ ತಗ್ಗಿದ ಪ್ರವಾಸಿಗರ ಸಂಖ್ಯೆ
ಹಂಪಿಯಲ್ಲಿ ತಗ್ಗಿದ ಪ್ರವಾಸಿಗರ ಸಂಖ್ಯೆ   

ಹೊಸಪೇಟೆ: ಸದಾ ಪ್ರವಾಸಿಗರಿಂದ ಗಿಜಿ ಗುಡುವ ಹಂಪಿ ಈಗ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಕಾರಣ ಮೈಸುಡುವ ಬಿಸಿಲು. ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆದರೆ, ಈಗಲೇ ಸೂರ್ಯ ಕೆಂಡ ಕಾರು ತ್ತಿದ್ದಾನೆ. ಬಿಸಿಲ ಝಳದಿಂದ ಟಾರಿನ ರಸ್ತೆಗಳು, ಕಲ್ಲು, ಬಂಡೆಗಳು ಕಾದ ಕಾವಲಿಯಂತಾಗುತ್ತಿವೆ.

ಹಂಪಿಯಲ್ಲಿರುವ ಬಹುತೇಕ ಸ್ಮಾರಕ ಗಳು ಬೆಟ್ಟ ಗುಡ್ಡ, ಕಲ್ಲು, ಬಂಡೆಗಳ ಮಧ್ಯದಲ್ಲಿವೆ. ಬಿಸಿಲಿಗೆ ಇವುಗಳು ಕಾದು ಸುತ್ತಲಿನ ಪರಿಸರದಲ್ಲಿ ಶಾಖ ಹೆಚ್ಚಾಗು ತ್ತಿದೆ. ಗಾಳಿ ಕೂಡ ಬಿಸಿಯಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಬಿಸಿಲು ಹೆಚ್ಚಾಗುತ್ತದೆ. ಆದರೆ, ಈ ಬಾರಿ ಜನ ವರಿ ಕೊನೆಯ ವಾರದಿಂದಲೇ ಬಿಸಿಲಿನ ಪ್ರಮಾಣ ಅಧಿಕವಾಗಿದೆ.
ಈ ಸಲ ಸಮರ್ಪಕವಾಗಿ ಮಳೆ ಆಗಿಲ್ಲ. ಇದರಿಂದ ತುಂಗಭದ್ರಾ ಜಲಾ ಶಯ ಹಾಗೂ ನದಿಯಲ್ಲಿ ನೀರಿಲ್ಲದೇ ಬತ್ತು ಹೋಗಿದೆ. ನದಿಯಲ್ಲಿ ನೀರಿದ್ದರೆ ಹಂಪಿ ಸುತ್ತಮುತ್ತಲಿನ ವಾತಾವರಣ ಸ್ವಲ್ಪ ಪ್ರಮಾಣದಲ್ಲಿ ತಂಪಾಗಿರುತ್ತಿತ್ತು. ಅಷ್ಟೇ ಅಲ್ಲ, ನದಿ ತಟ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ.

ಅಕ್ಟೋಬರ್‌ನಿಂದ ಫೆಬ್ರುವರಿ ಅಂತ್ಯ ದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರು ಹಂಪಿಗೆ ಭೇಟಿ ಕೊಡುತ್ತಾರೆ. ಈ ವೇಳೆ ಚಳಿ ಅಧಿಕ ಇರುವುದರಿಂದ ವಿದೇಶಗಳಿಂದ ಹೆಚ್ಚು ಜನ ಬರುತ್ತಾರೆ. ಅದರಲ್ಲೂ ಯುರೋಪ್‌ ಒಕ್ಕೂಟದ ಪ್ರಜೆಗಳು ಇದೇ ಅವಧಿಯನ್ನು ಆಯ್ಕೆ ಮಾಡಿಕೊಂಡು ನಾಲ್ಕೈದು ದಿನಗಳವ ರೆಗೆ ಹಂಪಿಯಲ್ಲಿ ಬಿಡಾರ ಹೂಡುತ್ತಾರೆ. ಶಾಲಾ, ಕಾಲೇಜಿನವರು ಇದೇ ಸಂದರ್ಭ ದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದ ರಿಂದ ಹಂಪಿಯಲ್ಲಿ ಗಿಜಿಗುಡುವ ವಾತಾ ವರಣ ಇರುತ್ತದೆ. ಆದರೆ, ಕಳೆದ ಒಂದು ವಾರದಿಂದ ಈ ವಾತಾವರಣ ಕಂಡು ಬರುತ್ತಿಲ್ಲ. ಹಂಪಿ ವಿರೂಪಾಕ್ಷೇಶ್ವರ ದೇವ ಸ್ಥಾನ ಎದುರಿನ ರಥ ಬೀದಿ, ಹಂಪಿ ಬಜಾರ್‌ನಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದೆ.ಕಮಲ್‌ ಮಹಲ್‌, ಆನೆಸಾಲು ಮಂಟಪ, ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪ, ಕಡಲೆ ಕಾಳು ಗಣಪ ಸ್ಮಾರಕಗಳ ಬಳಿಯೂ ಇದೇ ಪರಿಸ್ಥಿತಿ ಇದೆ.

ಸಂಜೆಯಾಗುತ್ತಿದ್ದಂತೆಯೇ ಹೇಮ ಕೂಟದ ಬಳಿ ಪ್ರವಾಸಿಗರು ಜಮಾಯಿಸಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿ ದ್ದರು. ಇಳಿ ಸಂಜೆಯಲ್ಲಿ ಬಂಡೆಗಲ್ಲುಗಳ ಮೇಲೆ ನಿಂತುಕೊಂಡು, ಸೆಲ್ಫಿ ತೆಗೆದು ಕೊಂಡು ಸಂಭ್ರಮಿಸುತ್ತಿದ್ದರು. ಆದರೆ, ಬಂಡೆಗಲ್ಲುಗಳು ಕಾದು ಕೆಂಡದಂತಾಗು ತ್ತಿರುವ ಕಾರಣ ಅಲ್ಲಿಗೂ ಪ್ರವಾಸಿಗರು ಸುಳಿಯುತ್ತಿಲ್ಲ.
‘ಬಿಸಿಲು ಹೆಚ್ಚಾಗಿರುವ ಕಾರಣ ಕಳೆದ ಒಂದು ವಾರದಿಂದ ಪ್ರವಾಸಿಗರು ಬರು ವುದು ಕಡಿಮೆ ಆಗಿದೆ. ಅನೇಕ ಗೈಡ್‌ ಗಳಿಗೆ ಕೆಲಸವಿಲ್ಲದಂತಾಗಿದೆ’ ಎಂದು ಗೈಡ್‌ ಹುಲುಗಪ್ಪ ‘ಪ್ರಜಾವಾಣಿ’ಗೆ ತಿಳಿಸಿ ದರು. ಇನ್ನೊಬ್ಬ ಗೈಡ್‌ ಗೋಪಾಲ್‌ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜನವರಿ ಕೊನೆಯ ವಾರದಲ್ಲಿ ಎಂದೂ ಇಷ್ಟೊಂದು ಬಿಸಿಲು ಇರಲಿಲ್ಲ. ಅಲ್ಲದೇ ನದಿ ಸಂಪೂರ್ಣ ಬತ್ತು ಹೋಗಿರುವ ಕಾರಣಕ್ಕೆ ಪ್ರವಾಸಿಗರು ಸುಳಿಯುತ್ತಿಲ್ಲ. ಮೇಲಿಂದ ಮಾರ್ಚ್‌ನಿಂದ ಶಾಲಾ, ಕಾಲೇಜಿನ ಪರೀಕ್ಷೆಗಳು ಶುರುವಾಗುತ್ತವೆ. ಈ ಎಲ್ಲ ಕಾರಣಗಳಿಂದ ಪ್ರವಾಸಿಗರ ಸಂಖ್ಯೆ ಕುಸಿದಿದೆ. ನೆರೆಹೊರೆ ಊರಿನ ವರು ಮಾತ್ರ ಸಂಜೆ ಸಮಯದಲ್ಲಿ ದೇವ ಸ್ಥಾನಕ್ಕೆ ಬಂದು ದರ್ಶನ ಪಡೆಯು ತ್ತಿದ್ದಾರೆ’ ಎಂದು ವಿರೂಪಾಕ್ಷೇಶ್ವರ ದೇವ ಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ರಾವ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.