ADVERTISEMENT

ಮಲ್ಲಿಗೆ ಹೂವಿನಂತೆ ಕೆಂಡ ತೂರುವ ಭಕ್ತರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 9:18 IST
Last Updated 11 ಫೆಬ್ರುವರಿ 2018, 9:18 IST
ಗಂಗೆಯ ಪೂಜೆಯಿಂದ ಬಂದ ಭಕ್ತರು ಬೆಂಕಿಯನ್ನು ತೂರುತ್ತಿರುವುದು
ಗಂಗೆಯ ಪೂಜೆಯಿಂದ ಬಂದ ಭಕ್ತರು ಬೆಂಕಿಯನ್ನು ತೂರುತ್ತಿರುವುದು   

ಕೂಡ್ಲಿಗಿ: ದೇವರಿಗೆ ಹೂವಿನ ಮಳೆ ಕರೆಯುವುದು, ಹೂಗಳನ್ನು ತೂರುವುದು ಸಾಮಾನ್ಯ. ಆದರೆ ಜಾತ್ರೆಯಲ್ಲಿ ಭಕ್ತರು ಒಬ್ಬರಿಗೊಬ್ಬರು ದೇವರ ಹೆಸರಲ್ಲಿ ಬೆಂಕಿಯ ಕೆಂಡ ತೂರುವುದು ವಿಚಿತ್ರ ಆದರೂ ಸತ್ಯ!.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಬೊಗ್ಗುಲು ಓಬಳೇಶ್ವರ ಜಾತ್ರೆಯಲ್ಲಿ ವಿಶಿಷ್ಟ ಆಚರಣೆಯಿದೆ. ‘ಉರುಮೆಯ ರುಮು ರುಮು ನಾದದಿಂದ ಭಾವಾವೇಶಕ್ಕೆ ಒಳಗಾಗುವ ಭಕ್ತರು ಕೊಂಚವೂ ಬೆಳಕೇ ಇಲ್ಲದ ರಾತ್ರಿಯಲ್ಲಿ ಪರಸ್ಪರ ಕೆಂಡ ತೂರಿಕೊಳ್ಳುತ್ತಾರೆ. ಅಕ್ಷರಶಃ ಬೆಂಕಿಯ ಮಳೆಯೇ ಸುರಿಯುತ್ತಿದೆಯೇನೋ ಎಂಬಂತೆ ಕಾಣುವ ಈ ಜಾತ್ರೆಯಲ್ಲಿ ನಿಗಿ ನಿಗಿ ಕೆಂಡವನ್ನು ಹೂವಿನಂತೆ ತೂರಲಾಗುತ್ತದೆ. ಪ್ರತಿ 3 ವರ್ಷಕ್ಕೊಮ್ಮೆ ಈ ವಿಶಿಷ್ಟ ಜಾತ್ರೆ ನಡೆಯುತ್ತದೆ.

ಹೊಸಹಟ್ಟಿ ಗ್ರಾಮದ ಆರಾಧ್ಯ ದೈವ ಬಗ್ಗಲು ಓಬಳೇಶ್ವರ ಸ್ವಾಮಿ. ಸ್ಥಳೀಯರು ಗುಗ್ಗರಿ ಹಬ್ಬ ಎಂತಲೂ ಕರೆಯುತ್ತಾರೆ. ಪರಿಶಿಷ್ಟ ಪಂಗಡದ ಜನಾಂಗದವರೇ ಹೆಚ್ಚಾಗಿ ವಾಸಿಸುವ ಇಲ್ಲಿ ಬೇಡ ಸಂಸ್ಕೃತಿಯ ಆಚರಣೆ ಇಂದಿಗೂ ಉಳಿದುಕೊಂಡಿದೆ. ಬೊಗ್ಗುಲು ಎಂದರೆ ತೆಲುಗಿನಲ್ಲಿ ಬೆಂಕಿಯ ಕೆಂಡಗಳಿಂದಾಗುವ ಇದ್ದಿಲು ಎಂದರ್ಥ. ಇಲ್ಲಿನ ಪೂಜಾರಿ ಮನೆತನದ ಪೂರ್ವಿಕರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲು ಒಯ್ದು ಮಾರುತ್ತ್ದಿದರು. ಒಮ್ಮೆ ಬೆಳಿಗ್ಗೆ ಇದ್ದಿಲು ತರಲು ಕಾಡಿಗೆ ಹೋದಾಗ, ಇದ್ದಿಲಿನ ರಾಶಿಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದುದನ್ನು ಕಂಡು ದೇವರು ಪ್ರತ್ಯಕ್ಷರಾಗಿದ್ದರು ಎಂಬ ನಂಬಿಕೆಯಿಂದ ಭಕ್ತರು ಕೆಂಡ ತೂರುವ ಸೇವೆ ಆರಂಭಿಸಿದರು ಎಂದು ಪೂಜಾರಿ ಮನೆತನದ ಚಿನ್ನಪಲ್ಲಿ ಓಬಯ್ಯ ತಿಳಿಸಿದರು.

ADVERTISEMENT

ಜಾತ್ರೆಗೂ ಮೊದಲು 8 ದಿನಗಳವರೆಗೆ ಕಾಸು ಮೀಸಲು, ಗಂಗೆಪೂಜೆಗಳು ಸಾಂಪ್ರದಾಯಿಕವಾಗಿ ನಡೆಯುತ್ತವೆ. ಉತ್ಸವ ನಡೆಯುವ 8 ದಿನಗಳವರೆಗೂ ಗ್ರಾಮಸ್ಥರಾರೂ ಮದ್ಯ, ಮಾಂಸ ಮುಟ್ಟುವುದಿಲ್ಲ. ಇದು ಇಲ‍್ಲಿನ ವ್ರತ ಹಾಗೂ ನಿಯಮ. ಚಪ್ಪಲಿಯನ್ನೂ ತೊಡುವಂತಿಲ್ಲ. ಗ್ರಾಮಕ್ಕೆ ಚರ್ಮದ ಯಾವುದೇ ವಸ್ತು ತರುವಂತಿಲ್ಲ. ಇವುಗಳನ್ನು ಪಾಲಿಸದಿದ್ದಲ್ಲಿ ಕೆಡುಕಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ.

ಶಿವರಾತ್ರಿ ಅಮಾವಾಸ್ಯೆಗೂ ಮುಂಚೆ ನಡೆಯುವ ಈ ಜಾತ್ರೆಯಲ್ಲಿ ಕೆಂಡ ತೂರುವ ಉತ್ಸವಕ್ಕಾಗಿಯೇ ಕೆಂಡವನ್ನು ಸಿದ್ಧಪಡಿಸಲು ಕಟ್ಟಿಗೆಯ ರಾಶಿ ಹಾಕಿ ಪೂಜಿಸಲಾಗುತ್ತದೆ. ನಂತರ ಸುಮಾರು 30 ಜನ ಭಕ್ತರು ಉತ್ಸವಕ್ಕಾಗಿಯೇ ಉಪವಾಸವಿದ್ದು, ತಮ್ಮ ಹರಕೆ ತೀರಿಸಲು ಗಂಗೆಪೂಜೆ ನೆರವೇರಿಸಿ ಬರುತ್ತಾರೆ. ಓಬಳೇಶ್ವರ ಸ್ವಾಮಿಯ ಪೂಜಾರಿ ಅಗ್ನಿಕುಂಡದ ಸ್ವಲ್ಪ ಭಾಗವನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ದೇವಸ್ಥಾನದ ಒಳಗಿಡುತ್ತಾರೆ. ನಂತರ ಬರಿಮೈಯಲ್ಲಿ ಇರುವ ಹರಕೆ ಹೊತ್ತ ಭಕ್ತರು ಅಗ್ನಿಸ್ಪರ್ಶ ಮಾಡಿ, ರಾಶಿಯಲ್ಲಿರುವ ಕೆಂಡವನ್ನು ಬೊಗಸೆಯಲ್ಲಿ ತೆಗೆದುಕೊಂಡು ಒಬ್ಬರ ಮೈಮೇಲೊಬ್ಬರು ತೂರಾಡತೊಡಗುತ್ತಾರೆ. ಈ ಸಂದರ್ಭದಲ್ಲಿ ಗ್ರಾಮವನ್ನು ಸಂಪೂರ್ಣ ಕತ್ತಲಾಗಿಸಲಾಗುತ್ತದೆ. ಇಡೀ ವಾತಾವರಣ ಉರುಮೆ ನಾದದಿಂದ, ನಿಗಿ ನಿಗಿ ಕೆಂಡದ ತೂರಾಟದಿಂದ ಭಾವಾವೇಶಕ್ಕೊಳಗಾಗುತ್ತದೆ. ಇಷ್ಟೆಲ್ಲ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ ಎಂಬುದು ಅಚ್ಚರಿಯ ಸಂಗತಿ.

ರಾತ್ರಿಯ ಕತ್ತಲಲ್ಲಿ ಕೆಂಡವನ್ನು ತೂರುವ ದೃಶ್ಯ ಕೆಂಡದ ಮಳೆಯೇನೋ ಎಂಬಂತೆ ಭಕ್ತರಲ್ಲಿ ಭಾಸವಾಗಿ, ಮತ್ತಷ್ಟು ಭಕ್ತಿಯನ್ನು ಉದ್ದೀಪಿಸುತ್ತದೆ. ಜಾತ್ರೆ ನೋಡಬಯಸುವ ಆಸಕ್ತರು ಇದೇ 27ರಂದು ಈ ಗ್ರಾಮಕ್ಕೆ ಬರಬಹುದು.
-ಎ.ಎಂ.ಸೋಮಶೇಖರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.