ADVERTISEMENT

ಮೊದಲ ಸಭೆಯತ್ತ ರೈತರ ಚಿತ್ತ

ಇದೇ 16ರಂದು ಐ.ಸಿ.ಸಿ. ಸಭೆ ನಿಗದಿ; ಕಾಲುವೆಗಳಿಗೆ ನೀರು ಬಿಡಲು ಮುಹೂರ್ತ ನಿಗದಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 9 ಜುಲೈ 2018, 11:43 IST
Last Updated 9 ಜುಲೈ 2018, 11:43 IST
ತುಂಗಭದ್ರಾ ಜಲಾಶಯದಲ್ಲಿ ಸೋಮವಾರ ನೀರಿನ ಸಂಗ್ರಹ ಕಂಡಿದ್ದು ಹೀಗೆ–ಪ್ರಜಾವಾಣಿ ಚಿತ್ರ
ತುಂಗಭದ್ರಾ ಜಲಾಶಯದಲ್ಲಿ ಸೋಮವಾರ ನೀರಿನ ಸಂಗ್ರಹ ಕಂಡಿದ್ದು ಹೀಗೆ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಕೊನೆಗೂ ಸರ್ಕಾರ ಮೀನುಗಾರಿಕೆ ಮತ್ತು ಪಶು ಸಂಗೋಪನಾ ಸಚಿವ ವೆಂಕಟರಾವ ನಾಡಗೌಡ ಅವರ ಅಧ್ಯಕ್ಷತೆಯ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯನ್ನು ರಚಿಸಿದೆ. ಇದೇ 16ರಂದು ಸಮಿತಿಯ ಮೊದಲ ಸಭೆ ನಿಗದಿಯಾಗಿದ್ದು, ಸಭೆಯತ್ತ ರೈತರ ಚಿತ್ತ ನೆಟ್ಟಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಸಮಿತಿಯನ್ನು ಪುನರ್‌ ರಚಿಸುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಜುಲೈ ಮೊದಲ ವಾರ ಕಳೆದರೂ ಸಮಿತಿ ರಚನೆಯಾಗಿರಲಿಲ್ಲ. ಸಮಿತಿಯ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ತೆಗೆದುಕೊಂಡ ಬಳಿಕವಷ್ಟೇ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಇದರಿಂದಾಗಿ ಅನಿಶ್ಚಿತತೆ ಉಂಟಾಗಿತ್ತು. ಈಗ ಅದು ದೂರವಾಗಿದ್ದು, ಇಡೀ ರೈತ ಸಮುದಾಯದ ಚಿತ್ತ ಸಭೆಯ ಕಡೆ ಹರಿದಿದೆ.

ಅಂದು ಬೆಳಿಗ್ಗೆ 10.30ಕ್ಕೆ ತುಂಗಭದ್ರಾ ಜಲಾಶಯ ಸಮೀಪದ ಮುನಿರಾಬಾದ್‌ ನೀರಾವರಿ ನಿಗಮದ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರು ಪಾಲ್ಗೊಳ್ಳುವರು. ಸದ್ಯ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆ ನೋಡಿಕೊಂಡು, ಎಲ್ಲರ ಅಭಿಪ್ರಾಯ ಪಡೆದು, ಯಾವ ಕಾಲುವೆಗಳಿಗೆ ಎಷ್ಟು ದಿನಗಳ ವರೆಗೆ, ಎಷ್ಟು ನೀರು ಹರಿಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ.

ADVERTISEMENT

ಈ ಸಲ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಸೋಮವಾರ ಜಲಾಶಯದಲ್ಲಿ 42.90 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹ ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲೇ ಇದು ಅಧಿಕ. ಹಿಂದಿನ ವರ್ಷ ಇದೇ ದಿನ ಜಲಾಶಯದಲ್ಲಿ 11.38 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿತ್ತು. ಅಣೆಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಸಂಗ್ರಹ ಇರುವುದರಿಂದ ಡಿಸೆಂಬರ್‌ ವರೆಗೆ ಸತತವಾಗಿ ನೀರು ಹರಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

‘ಅಂದಿನ ಸಭೆಯಲ್ಲಿ ನಾನೂ ಭಾಗವಹಿಸುತ್ತಿದ್ದು, ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆ (ಆರ್‌.ಬಿ.ಎಚ್‌.ಎಲ್‌.ಸಿ.) ಹಾಗೂ ಕೆಳಮಟ್ಟದ ಕಾಲುವೆಗಳಿಗೆ (ಆರ್‌.ಬಿ.ಎಲ್‌.ಎಲ್‌.ಸಿ.) ಡಿಸೆಂಬರ್‌ ಕೊನೆಯ ವರೆಗೆ ನೀರು ಹರಿಸಬೇಕೆಂದು ಒತ್ತಾಯಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ತಿಳಿಸಿದರು.

‘ಹಿಂದಿನ ವರ್ಷ ಇಷ್ಟೊಂದು ನೀರು ಸಂಗ್ರಹವಾಗಿರಲಿಲ್ಲ. ರೈತರ ಮೊದಲ ಬೆಳೆಗೆ ಆಗಸ್ಟ್‌ನಲ್ಲಿ ನೀರು ಹರಿಸಿದ್ದರು. ಇದರಿಂದಾಗಿ ರೈತರು ಸಮಸ್ಯೆ ಎದುರಿಸಿದ್ದರು. ಈ ಸಲ ಅದು ಪುನರಾವರ್ತನೆ ಆಗುವುದು ಬೇಡ. ಈ ಕುರಿತು ಸಮಿತಿಗೆ ಮನವರಿಕೆ ಮಾಡಿಕೊಡಲಾಡುವುದು’ ಎಂದರು.

ಈ ಕುರಿತು ತುಂಗಭದ್ರಾ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಂಕರಗೌಡ ಅವರನ್ನು ಸಂಪರ್ಕಿಸಿದಾಗ, ‘ಸಭೆ ನಿಗದಿಯಾಗಿದೆ. ಎಲ್ಲ ಜನಪ್ರತಿನಿಧಿಗಳಿಗೆ, ರೈತ ಮುಖಂಡರಿಗೆ ವಿಷಯ ತಿಳಿಸಲಾಗುತ್ತಿದೆ. ನೀರು ಹರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸಭೆಯಲ್ಲಿ ನಿರ್ಧಾರ ಕೈಗೊಂಡು ನಮಗೆ ಏನು ಸೂಚನೆ ಬರುತ್ತದೆಯೋ ಅದರಂತೆ ಮುಂದುವರಿಯುತ್ತೇವೆ’ ಎಂದರು.

‘ಕೆಲವು ಕಡೆ ಕೈಗೆತ್ತಿಕೊಂಡಿದ್ದ ಎಚ್‌.ಎಲ್‌.ಸಿ. ಹಾಗೂ ಎಲ್‌.ಎಲ್‌.ಸಿ. ದುರಸ್ತಿ ಕೆಲಸ ಪೂರ್ಣಗೊಂಡಿದೆ. ನೀರು ಹರಿಸಲು ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ನೀರು ಹರಿಸುವುದನ್ನು ನಿಲ್ಲಿಸಿದ ಬಳಿಕ ಮತ್ತೆ ಮಿಕ್ಕುಳಿದ ಕಾಮಗಾರಿ ನಡೆಯಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.