ADVERTISEMENT

ಅಧಾರ್ ಕಡ್ಡಾಯ: ಪಡಿತರ ಪರದಾಟ

ರಾಜ್ಯ ಸರ್ಕಾರದ ನೀತಿಗೆ ಸಾರ್ವಜನಿಕರ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಮೇ 2016, 9:34 IST
Last Updated 27 ಮೇ 2016, 9:34 IST

ದೇವನಹಳ್ಳಿ: ರಾಜ್ಯ ಸರ್ಕಾರ ಮೊದಲ ಬಾರಿಗೆ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಅಧಾರ್ ಕಾರ್ಡ್‌ ಸಂಖ್ಯೆ ನಮೂದಿಸುವುದು ಕಡ್ಡಾಯಗೊಳಿಸಿರುವುದರಿಂದ ಪಡಿತರಿಗೆ ಪೀಕಲಾಟದ ಜತೆಗೆ ಪರದಾಟವಾಗುತ್ತಿದೆ ಎಂಬುದಾಗಿ ಪಡಿತರದಾರರು ಅರೋಪಿಸುತ್ತಾರೆ.

ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಅಡಳಿತ ನಡೆಸಿದ ಯುಪಿಎ ಸರ್ಕಾರ ಜಾರಿಗೊಳಿಸಿದ ಅಧಾರ್ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಧಾರ್ ಕಾರ್ಡ್ ಹೊಂದಬೇಕು ಎಂಬುದಾಗಿ ಅದೇಶವಾಗಿದ್ದರೂ ಅಧಾರ್ ಕಾರ್ಡ್ ಕೆಲವು ಯೋಜನೆಗಳಿಗೆ ಸಿಮಿತಗೊಳಿಸಿತ್ತು. ಅಧಿಕಾರ ಕಳೆದುಕೊಂಡ ನಂತರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಅಧಾರ್ ಕಾರ್ಡ್ ಹೊಂದುವುದು ಯಥಾಸ್ಥಿತಿ ಗೊಳಿಸಲಾಯಿತು.

ಅಧಾರ್ ಕಾರ್ಡ್ ಕಡ್ಡಾಯಗೊಳಿಸುವುದರ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ನ್ಯಾಯಾಲವು ಅಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಅಧಾರ್ ಕಾರ್ಡ್ ಬೇಕು ಬೇಡ ಎಂಬ ಚರ್ಚೆ ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮ ಪಡಿತರ ಕಾರ್ಡ್‌ ಪತ್ತೆ ಹಚ್ಚುವ ನೆಪದಲ್ಲಿ ಅಧಾರ್ ಕಾರ್ಡ್ ಏಕಾಏಕಿ ಕಡ್ಡಾಯಗೊಳಿಸಿ ಮೇ.31 ಕ್ಕೆ ಅಂತಿಮ ಗಡುವು ನೀಡಿರುವುದು ಅನೇಕ ಅರ್ಹ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಪಡಿತರ ಧಾನ್ಯದಿಂದ ವಂಚಿತರಾಗಲಿದ್ದಾರೆ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.

ಅಹಾರ ಇಲಾಖೆ ಮಾಹಿತಿಯಂತೆ ಗ್ರಾಮೀಣ ಪ್ರದೇಶದಲ್ಲಿ 61, ದೇವನಹಳ್ಳಿ ಪುರಸಭೆ 15, ವಿಜಯಪುರ ಪುರಸಭೆ 14, ಒಟ್ಟು 90 ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಎ.ಪಿ.ಎಲ್ 5588, ಬಿಪಿಎಲ್ 47255, ಅಂತ್ಯೋದಯ 1533 ಸೇರಿ ಒಟ್ಟು 54376 ಪಡಿತರದಾರರು ಇದ್ದಾರೆ.

ಎಪಿಎಲ್‌ ಮತ್ತು ಬಿಪಿಎಲ್‌ ಹಾಗೂ ಅಂತ್ಯೋದಯ ವ್ಯಾಪ್ತಿಯಲ್ಲಿರುವ ಅರ್ಹರಿಗೆ ಒಟ್ಟು 7544.01 ಕ್ವಿಂಟಲ್ ಅಕ್ಕಿ ಮಾಸಿಕ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದೆ ಅನೇಕರಿಗೆ ಅಧಾರ್ ಕಾರ್ಡ್ ಕಡ್ಡಾಯದ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಈವರೆವಿಗೂ ಶೇ.60 ಪಡಿತರದಾರರು ಅಧಾರ್ ಕಾರ್ಡ್ ಸಂಖ್ಯೆ ನಮೂದಿಸಿಲ್ಲ ಇದರಿಂದ ಅರ್ಹರು ನ್ಯಾಯಬೆಲೆ ಅಂಗಡಿಯಿಂದ ದೂರ ಉಳಿಯುವ ಸಂಭವ ಹೆಚ್ಚು ಎಂದು ಅಂತಕ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ 1533 ಅಂತ್ಯೋದಯದಡಿ ಪಡಿತರಧಾನ್ಯ ಪಡೆಯುವವರಿದ್ದಾರೆ ಅತ್ಯಂತ ಕಡು ಬಡವರಿಗೆ ಯಾವುದೆ ಚರಸ್ಥಿರ ಅಸ್ತಿ ಇಲ್ಲದವರಿಗೆ, ಕುಟುಂಬದಲ್ಲಿ ಆಶ್ರಯ ಇಲ್ಲದ ವಯೋವೃದ್ಧರಿಗೆ ಅಂತ್ಯೋದಯ ಚೀಟಿ ನಿಡಲಾಗಿದೆ. ಇಂತಹ ಅಶಕ್ತರು ಅಧಾರ್ ಚೀಟಿ ಬಗ್ಗೆ ಅರಿವಿಲ್ಲ ನಡೆದಾಡುವ ಶಕ್ತಿ ಇಲ್ಲದವರು ಹೇಗೆ ಅಧಾರ್ ಚೀಟಿ ಪಡೆಯಲು ಸಾಧ್ಯ ಎಂಬುದು ಅಂತ್ಯೋದಯ ಪಡಿತದಾರರ ಅಳಲು.

ಕಳೆದ 13 ಜುಲೈ 2015 ರಲ್ಲಿ ಎರಡನೆ ಬಾರಿಗೆ ಅಧಾರ್ ಕೇಂದ್ರದಲ್ಲಿ ಅಧಾರ್ ನೊಂದಾಯಿಸಿದ್ದೆ ಈವರೆಗೂ ಅಧಾರ್ ಕಾರ್ಡ್ ಬಂದಿಲ್ಲ ಮತ್ತೆ ಮೇ.25 ರಂದು ಮೂರನೇ ಬಾರಿಗೆ ನೊಂದಾಯಿಸಿದ್ದೇನೆ ಯಾವಾಗ ಬರುತ್ತದೋ ಗೊತ್ತಿಲ್ಲ ಈ ರೀತಿ ಪದೇಪದೇ ಅಧಾರ್ ನೊಂದಾಯಿಸಿ ಕೊಂಡರು ಕಾರ್ಡ್ ಬಂದಿಲ್ಲವೆಂದರೆ ಪಡಿತರ ಧಾನ್ಯ ಪಡೆಯುವುದಾದರೂ ಹೇಗೆ ಎಂಬುದು ಸ್ಥಳಿಯ ನಾಗರತ್ನ ಪ್ರಶ್ನೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಾರ್ ನೊಂದಣಿ ಬಗ್ಗೆ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಆರ್‌ಟಿಐ ಕಾರ್ಯಕರ್ತ ಆಂಜಿನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.