ADVERTISEMENT

ಉದ್ಯೋಗ ಮೇಳ– 821ಕ್ಕೂ ಹೆಚ್ಚು ನೋಂದಣಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 8:13 IST
Last Updated 25 ಮಾರ್ಚ್ 2017, 8:13 IST
ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಡಿ ಚಂದ್ರಶೇಖರ್, ಮ್ಯಾಜಿಕ್ ಕ್ರಿಯೇಟರ್ಸ್ ಮುಖ್ಯಸ್ಥ ಪುನೀತ್ ನಾಯ್ಕ, ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು
ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಡಿ ಚಂದ್ರಶೇಖರ್, ಮ್ಯಾಜಿಕ್ ಕ್ರಿಯೇಟರ್ಸ್ ಮುಖ್ಯಸ್ಥ ಪುನೀತ್ ನಾಯ್ಕ, ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಉಪಸ್ಥಿತರಿದ್ದರು   

ದೇವನಹಳ್ಳಿ: ದೇವನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ನಡೆಸಲಾಗುತ್ತಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲ ಡಾ.ಡಿ ಚಂದ್ರಶೇಖರ್ ಸಲಹೆ ನೀಡಿದರು .

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ನಿರುದ್ಯೋಗ ಮೇಳ ಮತ್ತು ಕೌಶಲದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಖಾಸಗಿ ಕಂಪೆನಿಗಳಿಗೆ ಹಿಂದೆ ಸರ್ಕಾರಿ ಕಾಲೇಜುಗಳೆಂದರೆ ನಿರ್ಲಕ್ಷ್ಯದ ಭಾವನೆ ಇತ್ತು. ಅದೀಗ ಬದಲಾಗಿದೆ.

ವಿವಿಧ ಕ್ಷೇತ್ರ ಗಣನೀಯವಾಗಿ ವಿಸ್ತಾರಗೊಳ್ಳುತ್ತಿವೆ. ರಾಜ್ಯ ಸೇರಿದಂತೆ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಖಾಸಗಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಶೈಕ್ಷಣಿಕ ಪದವಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ಸಿಗಲಿದೆ ಎಂದರು.

ಉದ್ಯೋಗವೆಂಬುದು ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರ ಬೆಳೆದಂತೆ ಅಂಗೈಯಲ್ಲೇ ವಿಶ್ವದ ಪ್ರತಿಕ್ಷಣದ ಮಾಹಿತಿ ಪಡೆಯಬಹುದು, ಪ್ರಸ್ತುತ ಯಾವುದೆ ಸಣ್ಣಪುಟ್ಟ ಕಂಪೆನಿಗಳಲ್ಲಿ ಉದ್ಯೋಗ ದೊರಕಿದರೂ ಒಂದೆರಡು ವರ್ಷದಲ್ಲಿ ತರಬೇತಿ ,ಅನುಭವದಿಂದ ಬಡ್ತಿ ಪಡೆಯವ ಅವಕಾಶಗಳಿವೆ.

ಬೇರೆ ಕಂಪೆನಿ ಸೇರಲು ಪ್ರಯತ್ನ ಮಾಡಬಹುದು ಎಂದರು. ಮ್ಯಾಜಿಕ್ ಕ್ರಿಯೇಟರ್ಸ್ ಕಂಪೆನಿ ಮುಖ್ಯಸ್ಥ ಪುನೀತ್ ನಾಯ್ಕ ಮಾತನಾಡಿ, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗ್ರಾಮೀಣ ಸೊಗಡಿನ ಹಿರಿಯ ಮಾತಿನಂತೆ ಖಾಸಗಿ ಕಂಪೆನಿಗಳಲ್ಲಿ ವ್ಯಾಸಂಗದ ಪದವಿ ಮತ್ತು ಮಾತನಾಡುವ ಭಾಷೆಯ ಸಂವಹನ ಕಲೆ ಅತಿಮುಖ್ಯ, ಶಿಸ್ತು ಮತ್ತು ಸಮಯಪಾಲನೆ  ಉದ್ಯೋಗಿಗಳಿಗೆ ಅನಿವಾರ್ಯ ಎಂದರು.

ದಿನದ ಲೆಕ್ಕದಲ್ಲಿ ವೇತನವಲ್ಲ, ತಾಸುಗಳ ಅಧಾರದಲ್ಲಿ ಸಂಬಳ ಬಹುತೇಕ ಕಂಪೆನಿಗಳಲ್ಲಿ ಗ್ರಾಮೀಣ ಭಾಗದ ಅನೇಕರು ಉತ್ತಮ ಹುದ್ದೆಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾನ್ವಿತರಿದ್ದಾರೆ ಖಾಸಗಿ ಕಂಪೆನಿಗಳು ನಿರುದ್ಯೋಗಿಗಳ ಬಳಿ ಬರುತ್ತಿವೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಾಗೇಶಬಾಬು, ಪುರಸಭೆ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು, ಕಾಲೇಜು ಅಭಿವೃದ್ಧಿ ಸದಸ್ಯ ಪಿಳ್ಳರಾಜು, ವಿ.ಗೋಪಾಲ್, ಗೋಪಾಲಕೃಷ್ಣ, ಎಂ.ಕುಮಾರ್, ಸನ್ನಿಧಿ ಫೌಂಡೇಷನ್ ಅಧ್ಯಕ್ಷ ಶ್ರೀನಿವಾಸ್ ಮತ್ತು ವೆಂಕಟೇಶ್, ಉಪನ್ಯಾಸಕ ನಾಗೇಂದ್ರ ಬಾಬು, ಕೆಂಪೇಗೌಡ, ರವಿಚಂದ್ರ, ಡಾ.ರಾಮಕೃಷ್ಣ ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರದ 22 ಕಂಪೆನಿಗಳು ಪಾಲ್ಗೊಂಡಿದ್ದವು.

*
ಜೀವನದಲ್ಲಿ ನಿರಾಶೆ ಪಡುವ ಅಗತ್ಯವಿಲ್ಲ. ನಿರಂತರ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ಬೃಹತ್‌ ಖಾಸಗಿ ಕಂಪೆನಿ ಮಾಲೀಕರು ಅತ್ಯುನ್ನತ ಪದವಿ ಪಡೆದವರಲ್ಲ.
-ಡಾ.ಡಿ ಚಂದ್ರಶೇಖರ್ , ಪ್ರಾಂಶುಪಾಲ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.