ADVERTISEMENT

ಎಲ್ಲ ಹಳ್ಳಿಗಳಿಗೂ ಗ್ರಂಥಾಲಯ

ಸರ್ಕಾರದಿಂದ ಯೋಜನೆ ಜಾರಿ: ನಾರಾಯಣಘಟ್ಟದಲ್ಲಿ ಸಚಿವ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 11:08 IST
Last Updated 30 ಜೂನ್ 2015, 11:08 IST

ಆನೇಕಲ್: ಪ್ರತಿ ಗ್ರಾಮದಲ್ಲೂ ಗ್ರಂಥಾಲಯ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನುಡಿದರು.

ತಾಲ್ಲೂಕಿನ ನಾರಾಯಣಘಟ್ಟದಲ್ಲಿ ಭಾನುವಾರ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಕ್ಕೊಂದು ಗ್ರಂಥಾಲಯವಿದ್ದರೆ ಜನರ ಜ್ಞಾನಾಭಿವೃದ್ದಿಗೆ ಸಹಾಯವಾಗುತ್ತದೆ. ಸರ್ಕಾರ ಗ್ರಾಮ ಪಂಚಾಯಿತಿಗೊಂದು ಗ್ರಂಥಾಲಯದ ವ್ಯವಸ್ಥೆ ಮಾಡುತ್ತಿದೆ. ಪ್ರತಿ ಗ್ರಾಮಗಳಲ್ಲೂ ಗ್ರಂಥಾಲಯ ಸ್ಥಾಪನೆಯಾದರೇ ಆಯಾ ಗ್ರಾಮಗಳ ಜನರಿಗೆ ಉಪಯುಕ್ತವಾಗುತ್ತದೆ.

ನಾರಾಯಣಘಟ್ಟ ಗ್ರಾಮದ ನಡುವೆಯೇ ಐಆರ್‌ಆರ್ ರಸ್ತೆ ಹಾದು ಹೋಗುತ್ತಿದ್ದು ಗ್ರಾಮ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿಯಿದೆ. ಹಾಗಾಗಿ ಗ್ರಾಮವನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ನೀಡಿದ ಮನವಿಗೆ ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮೂಲಗ್ರಾಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ಮಾತನಾಡಿ ಗ್ರಂಥಾಲಯಗಳು ಗ್ರಾಮದ ಜ್ಞಾನದ ದೀವಿಗೆಗಳು ಮನುಕುಲಕ್ಕೆ ಅವಶ್ಯಕ
ವಿರುವ ಜೀವನದ ಮೌಲ್ಯಗಳನ್ನು ತಿಳಿದುಕೊಳ್ಳಲು ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಸಕ ಬಿ.ಶಿವಣ್ಣ ಮಾತನಾಡಿ, ಗ್ರಂಥಾಲಯವನ್ನು ಉನ್ನತೀಕರಿಸಲಾಗುವುದು. ಡಿಜಿಟಲ್ ಗ್ರಂಥಾಲಯ ಸ್ಥಾಪನೆಯ ಬಗ್ಗೆ ಪ್ರಸ್ತಾವನೆಯಿದೆ. ಇದಕ್ಕೆ ಅವಶ್ಯಕ ಇರುವ ಐದು ಗಣಕಯಂತ್ರಗಳನ್ನು ಶಾಸಕರ ಅನುದಾನದಲ್ಲಿ ನೀಡಲಾಗುವುದು. ಗ್ರಂಥಾಲಯದ ಕಾಂಪೌಂಡ್ ನಿರ್ಮಾಣಕ್ಕೆ ಈಗಾಗಲೇ ₨5 ಲಕ್ಷ ನೀಡಲಾಗಿದೆ. ಗ್ರಂಥಾಲಯದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಾಹಿತಿ ಶೂದ್ರ ಶ್ರೀನಿವಾಸ್ ಮಾತನಾಡಿ, ರಾಜಕೀಯ ಜಂಜಾಟಗಳಿಂದ ಜನಪ್ರತಿನಿಧಿಗಳು ಓದುವ ಹವ್ಯಾಸವನ್ನು ಬಿಟ್ಟಿದ್ದಾರೆ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಅವಶ್ಯಕತೆಯಿದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಗ್ರಂಥಾಲಯವನ್ನು ಸ್ಥಾಪಿಸಿಕೊಳ್ಳಬೇಕು. ಪುಸ್ತಕಗಳನ್ನು ಕೊಳ್ಳುವ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರರೆಡ್ಡಿ, ಸದಸ್ಯರಾದ ಮಂಜುಳಾ, ರಮೇಶ್‌ರೆಡ್ಡಿ, ಜೆ.ಶಿವಕುಮಾರ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿದೇರ್ಶಕ ಡಾ.ಸತೀಶ್ ಕುಮಾರ್.ಎಸ್.ಹೊಸಮನಿ, ಉಪನಿದೇರ್ಶಕ ದಿವಾಕರ್, ನಿವೃತ್ತ ಮುಖ್ಯ ಶಿಕ್ಷಕ ಯಲ್ಲಾರೆಡ್ಡಿ, ಗೋಪಾಲರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.