ADVERTISEMENT

ಕಲ್ಲಹಳ್ಳಿ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠೆ

ಜನರ ಸಂಭ್ರಮದ ನಡುವೆ ನಡೆದ ವಿವಿಧ ಧಾರ್ಮಿಕ ವಿಧಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:48 IST
Last Updated 30 ಜನವರಿ 2017, 7:48 IST
ಕಲ್ಲಹಳ್ಳಿ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠೆ
ಕಲ್ಲಹಳ್ಳಿ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠೆ   

ಕನಕಪುರ:   ಕಸಬಾ ಹೋಬಳಿ ಕಲ್ಲಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಮಹಾಲಕ್ಷ್ಮಿ, ವೇದ ಮಾತೆ ಗಾಯಿತ್ರಿದೇವಿ, ಶ್ರೀ ಹನುಮಂತ ಸಮೇತ ಯೋಗಿನಾರೇಯಣ ಯತೀಂದ್ರರ ದೇವಾಲಯದ ಉದ್ಘಾಟನೆ ಹಾಗೂ ಗಣಪತಿ ಮತ್ತು ಆಂಜನೇಯ ಮೂರ್ತಿಗಳ ಪ್ರತಿಷ್ಠಾಪನೆ ಭಾನುವಾರ ನೆರವೇರಿತು.

ಶನಿವಾರ ಸಂಜೆ ದೇವಾಲಯದ ಪ್ರವೇಶ ಮಹಾಸಂಕಲ್ಪ ಕಲಶ ಸ್ಥಾಪನೆ, ಪಂಚಗವ್ಯ ಪೂಜೆ, ಸ್ವಸ್ತಿಪುಣ್ಯಾಹ, ದೇವನಾಂದಿ, ನವಗ್ರಹ ಆರಾಧನೆ ಸಹಿತ ದೇವತಾ ಮೂರ್ತಿಗಳಿಗೆ ಕಾಶಿ ಗಂಗೆ, ತ್ರಿವೇಣಿ ಸಂಗಮ, ಗಂಗೆ ಯಮುನಾ ಸರಸ್ವತಿ ಗೋದಾವರಿ ನರ್ಮದಾ ನದಿ, ತಿರುಪತಿ ಪುಷ್ಕರಣಿ, ರಾಮೇಶ್ವರದ 22 ಬಾವಿಗಳು ಹಾಗೂ ತುಂಗಾ ನದಿಗಳಿಂದ ತಂದಿದ್ದ ಪವಿತ್ರ ಜಲದೊಂದಿಗೆ ಅಭಿಷೇಕ ಮಾಡಲಾಯಿತು. 

ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಮತ್ತು ಆಂಜನೇಯ ವಿಗ್ರಹಗಳ ಪ್ರತಿಷ್ಠಾಪನೆ ನಡೆಸಲಾಯಿತು, ನೇತ್ರೋನ್ಮಿಲನ ಮತ್ತು ಕಲಾಕರ್ಷನ ಕೈಂ ಕರ್ಯ, ಗಣಪತಿ ಹೋಮ, ಆಂಜನೇಯ ಹೋಮ, ರುದ್ರ ಹೋಮ, ಸಹಿತ ಪೂರ್ಣಾಹುತಿ, ಅಶೀರ್ವಾದ ಮಂಗಳಾರತಿ ಅಷ್ಟೋತ್ತರ ಶತನಾಮಾವಳಿ ಪೂಜಾ ಕಾರ್ಯಕ್ರಮದೊಂದಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ ಮಹಾಲಕ್ಷ್ಮಿ ವೇದ ಮಾತೆ, ಶ್ರೀಗಾಯತ್ರಿದೇವಿ ವಿಗ್ರಹಗಳಿಗೆ ಪುರುಷ ಸೂಕ್ತ ಶ್ರೀ ಸೂಕ್ತ ದೇವಿ ಜಲಾಭೀಷೇಕ, ಪಂಚಾಮೃತಾಭಿಷೇಕ, ಶೋಡಶೋಪಚಾರ ಪೂಜೆ ಕಂಕುಮ ಅಷ್ಠೋತ್ತರ ಅಲಂಕಾರ ದೂಪದೀಪ ನೈವೇದ್ಯ ಸಹಿತ ವಿಶ್ರಾಂತಿ ಶಯ್ಯಾಧಿವಾನೋತ್ಸವವನ್ನು ನಡೆಸಲಾಯಿತು.

ಸೋಮವಾರ ಬೆಳಿಗ್ಗೆ ಮಹಾಲಕ್ಷ್ಮಿ ಮತ್ತು ವೇದಮಾತಾ ಶ್ರೀ ಗಾಯಿತ್ರಿ ದೇವಿ ಹಾಗೂ ಯತಿವರೈಯೋಗಿ ನಾರೇಯಣ ಸ್ವಾಮಿಗಳ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ದೇಗುಲಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಶಿವಗಿರಿಕ್ಷೇತ್ರದ ಅನ್ನದಾನೇಶ್ವರನಾಥ ಸ್ವಾಮಿ, ಮರಳೇಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮಿ ಸಾರ್ವಜನಿಕ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದಾರೆ.

ಶನಿವಾರ ಮತ್ತು ಭಾನುವಾರ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭಕ್ತರು, ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದವರು ಪಾಲ್ಗೊಂಡಿದ್ದರು. ಎರಡು ದಿನಗಳ ಕಾಲ ಬೆಳಿಗ್ಗೆ ತಿಂಡಿ ಊಟದ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಮಾಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.