ADVERTISEMENT

ಕಳಪೆ ಮೇವು ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2017, 9:41 IST
Last Updated 18 ಮಾರ್ಚ್ 2017, 9:41 IST

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಶುಕ್ರವಾರ ಶಾಸಕರಿಂದ ಹೋಬಳಿ ಕೇಂದ್ರಗಳಲ್ಲಿ ಮೇವು ವಿತರಣೆ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಕಳಪೆ ಮೇವು ನೀಡಲಾಗುತ್ತಿದೆ ಎಂದು ಆರೋಪಿಸಿ ಹಲವಾರು ರೈತರು ಮೇವನ್ನು ತಿರಸ್ಕರಿಸಿ ಹೊರನಡೆದ ಘಟನೆ ಕಸಬಾ ಹೋಬಳಿ ಮೇವು  ವಿತರಣಾ ಕೇಂದ್ರದಲ್ಲಿ ನಡೆಯಿತು.

ಕಸಬಾ ಹೋಬಳಿ ವ್ಯಾಪ್ತಿಗೆ ಸೇರಿದ ಗ್ರಾಮಗಳಿಗೆ ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಮೇವು ವಿತರಿಸಲು ವ್ಯವಸ್ಥೆ ಮಾಡಲಾಗಿತ್ತು. ಮೇವು ಪಡೆಯಲು ಬಂದ ರೈತರು ಮೇವಿನ ಗುಣಮಟ್ಟ ನೋಡಿ ಇದು ರಾಸುಗಳು ತಿನ್ನಲು ಯೋಗ್ಯವಾಗಿಲ್ಲ ಬಿಸಾಕುವ ಮೇವು ಎಂದು ಅಸಮಾಧಾನಗೊಂಡು ಹೊರಟರು. ಕರ್ನಾಟಕ ರೈತ ಶಕ್ತಿ ಮುಖಂಡರು ಕಳಪೆ ಮೇವು ವಿತರಣೆ ವಿರುದ್ಧ ಪ್ರತಿಭಟಿಸಿ, ಆ ವಿಷಯವನ್ನು ತಹಶೀಲ್ದಾರರ ಗಮನಕ್ಕೆ ತಂದರು.

ಕರ್ನಾಟಕ ರೈತ ಶಕ್ತಿ ಅಧ್ಯಕ್ಷ ಹೊನ್ನಾಘಟ್ಟ ಮಹೇಶ್ ಮಾತನಾಡಿ, ತೋಟಗಾರಿಕೆ ಇಲಾಖೆಯ ಆವರಣದಲ್ಲಿ ನೀಡಲಾಗುತ್ತಿರುವ ಮೇವು ಮಳೆಯಲ್ಲಿ ತೊಯ್ದು ಬೂಸ್ಟ್ ಬಂದಿದೆ. ಇವುಗಳನ್ನು ಪ್ರಾಣಿಗಳು ತಿಂದರೆ ಸಾಯಲವುದು, ಇಲ್ಲವೆ ರೋಗಕ್ಕೆ ತುತ್ತಾಗುವುದು ಖಚಿತ. ಅಧಿಕಾರಿಗಳು ಮೇವನ್ನು ಸಂರಕ್ಷಣೆ ಮಾಡಿ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಸುರಕ್ಷತೆ ಬಗೆಗೆ ಗಮನ ಹರಿಸಿಲ್ಲ ಎಂದು ಟೀಕಿಸಿದರು. ಸಂಬಂಧಪಟ್ಟವರು ಗುಣಮಟ್ಟದ ಮೇವನ್ನು ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಕರ್ನಾಟಕ ರೈತ ಶಕ್ತಿ ಜಿಲ್ಲಾಧ್ಯಕ್ಷ ನಟರಾಜ್ ಮಾತನಾಡಿ, ರೈತರಿಗೆ ₹50ಕ್ಕೆ 25 ಕೆ.ಜಿಯಂತೆ  ನೀಡಲಾಗುತ್ತಿದೆ. ಈ ಮೇವನ್ನು ತೆಗೆದುಕೊಂಡು ಹೋಗಲು ದೂರದಲ್ಲಿರುವ ರೈತರು ₹150 ಖರ್ಚು ಮಾಡಬೇಕು, ಆದ್ದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಮೇವು ವಿತರಣೆಗೆ ವ್ಯವಸ್ಥೆ ಮಾಡಬೇಕು. ಕಳಪೆ ಮೇವು ತಿಂದು ರಾಸುಗಳ ಆರೋಗ್ಯ ಕೆಟ್ಟರೆ ಸರ್ಕಾರ ಹೊಣೆ ಹೊರಬೇಕು ಎಂದರು.

ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ರೈತರಾದ ನಾಗರಾಜ್ ತಳಗವಾರ, ಹೊನ್ನಾಘಟ್ಟ ಮುದ್ದುಕೃಷ್ಣ ಹಾಜರಿದ್ದರು.

ಮೇವು ಕಳಪೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಬಿ.ಎ.ಮೋಹನ್, ಇದರಲ್ಲಿ ಯಾವುದೇ ದುರುದ್ದೇಶ ಅಥವಾ ನಿರ್ಲಕ್ಷ್ಯವಿಲ್ಲ. ತಾಲ್ಲೂಕಿನಲ್ಲಿ ಮುಂಜಾಗ್ರತೆ ವಹಿಸಿ ಉತ್ತಮ ಮೇವು ವಿತರಣೆ ಮಾಡಲಾಗುತ್ತಿದೆ. ಆದರೆ ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮೇವು ನೆನೆದು ಸ್ವಲ್ಪ ಹಾಳಾಗಿದೆ. ಇದನ್ನು ವಿಂಗಡಿಸಿ ಉತ್ತಮ ಮೇವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.