ADVERTISEMENT

‘ಕಾಂಗ್ರೆಸ್‌ ಮೇಲಿನ ಅಭಿಮಾನ ಇಮ್ಮಡಿಗೊಳಿಸಿ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 5:25 IST
Last Updated 10 ನವೆಂಬರ್ 2017, 5:25 IST

ವಿಜಯಪುರ: ಜನರ ಮನದಾಳದಲ್ಲಿರುವ ಕಾಂಗ್ರೆಸ್ ಅಭಿಮಾನವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಪಕ್ಷದ ನಾಯಕ ಕೆ.ವೆಂಕಟಸ್ವಾಮಿ ಹೇಳಿದರು. ಇಲ್ಲಿನ ಓಂಕಾರೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳಿಂದಾಗಿ ಕಡಿಮೆಯಾಗುತ್ತಿರುವ ಜೆಡಿಎಸ್ ಹಾಗೂ ಬಿಜೆಪಿಯ ವರ್ಚಸ್ಸನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಪರಿವರ್ತನಾ ಯಾತ್ರೆ ನಡೆಸುತ್ತಿದೆ, ಜೆಡಿಎಸ್ ಕೂಡಾ ಕುಮಾರ ಪರ್ವದ ಹೆಸರಿನಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರ ಹಾಗೂ ರಾಜ್ಯದಲ್ಲಿ ಪುನಃ ಕಾಂಗ್ರೆಸ್‌ ಅನ್ನು ಜನರು ಅಧಿಕಾರಕ್ಕೆ ತರುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಜನರು ತಕ್ಕ ಪಾಠಕಲಿಸಲಿದ್ದಾರೆ’ ಎಂದರು.

ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಸಾಮಾನ್ಯ ವರ್ಗದವರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ಜಾತಿ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುತ್ತಿರುವ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಿಂದ ಮತ್ತೊಮ್ಮೆ ಜನಪರವಾದ ಸರ್ಕಾರ ರಚನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿಗೆ ಬಂದದ್ದನ್ನು ಮಾತನಾಡುತ್ತಾರೆ. ಆದರೆ ಕೆಲಸದಲ್ಲಿ ಏನೂ ಸಾಧನೆ ಇಲ್ಲ. ಬಿಜೆಪಿಯವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಿದರೆ ಸಾಕು ಎಂದರು.

ADVERTISEMENT

ನಗರ ಘಟಕದ ಅಧ್ಯಕ್ಷ ವಿ.ಎಂ.ನಾಗರಾಜ್ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಜನರ ಮನದಲ್ಲಿ ಉಳಿಯುವಂತಹ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದೆ. ಪಕ್ಷದ ಸಾಧನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ನಾಯಕರು ಮತ್ತು ಕಾರ್ಯಕರ್ತರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಮುಖಂಡ ವಿ.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಾರದರ್ಶಕ, ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುವುದರ ಜೊತೆಗೆ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿ ಮಾಡಿದೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಸಾಮಾನ್ಯರಿಗೆ ಸಹಕಾರಿಯಾಗಿದೆ ಎಂದರು.
ಎರಡನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು, ಮನೆ ಮನೆಗೂ ತೆರಳಿ ಕಾಂಗ್ರೆಸ್ ಸರ್ಕಾರದ ಸಾಧನೆಗಳ ಕಿರು ಹೊತ್ತಿಗೆ ನೀಡಿದರು.

ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್, ಮಹೇಶ ಕುಮಾರ್, ನಿಸಾರ್ ಅಹ್ಮದ್, ಎಂ.ಮುನಿಚಿನ್ನಪ್ಪ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಸಂಪತ್ ಕುಮಾರ್, ತಿರುಮಲೇಶ, ಮಹಬೂಬ್ ಪಾಷ, ಎಜಾಜ್ ಅಹ್ಮದ್, ಶಬೀರ್, ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ರಮೇಶ್, ಮುನಿಕೃಷ್ಣಪ್ಪ, ಎಸ್.ಮಂಜುನಾಥ, ಅಮೃತ್ ರಾಜ್, ಫೈಜಲ್, ಗಿರೀಶ, ಜ್ಯೋತಿ, ಭಾಗ್ಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.