ADVERTISEMENT

ಕಾರ್ಮಿಕರು ತೆರೆದಿಟ್ಟ ಮನದಾಳದ ನೋವು

ನೂಲು ಬಿಚ್ಚಾಣಿಕೆ ಕಾರ್ಮಿಕರ ಹದಗೆಟ್ಟ ಆರೋಗ್ಯ: ದೂರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:17 IST
Last Updated 22 ಸೆಪ್ಟೆಂಬರ್ 2017, 5:17 IST
ವಿಜಯಪುರದ ರಹಮತ್ ನಗರದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರು ಹೊಗೆಯಲ್ಲೇ ಕೆಲಸದಲ್ಲಿ ತೊಡಗಿರುವುದು
ವಿಜಯಪುರದ ರಹಮತ್ ನಗರದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕದಲ್ಲಿ ಕಾರ್ಮಿಕರು ಹೊಗೆಯಲ್ಲೇ ಕೆಲಸದಲ್ಲಿ ತೊಡಗಿರುವುದು   

ವಿಜಯಪುರ: ‘ರೈತರು ಬೆಳೆಯುವ ಬೆಳೆಗಳಿಗೆ ವಿಮೆ ಇದೆ. ವಾಹನಗಳಿಗೆ ವಿಮೆ ಇದೆ’ ಆದರೆ, ಬೆಳಗಿನಿಂದ ರಾತ್ರಿ ಯವರೆಗೆ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ನಮಗೆ ಸರ್ಕಾರ ಈವರೆಗೂ ವಿಮೆ ಮಾಡಿಸಿಲ್ಲ. ನೂಲು ಬಿಚ್ಚಾಣಿಕೆ ಕಾರ್ಮಿಕರು ತಮ್ಮ ಮನದಾಳದ ನೋವು ವ್ಯಕ್ತಪಡಿಸಿದ್ದು, ಹೀಗೆ’. ‌

ಇಲ್ಲಿನ ರೇಷ್ಮೆನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಬೆಳಿಗ್ಗೆ 6ಗಂಟೆಗೆ ಹೋದರೆ, ರಾತ್ರಿ 8ಗಂಟೆಯವರೆಗೂ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿಸಿ ಕೊಳ್ಳಬೇಕು. ಕಾರ್ಮಿಕರು ಕುಳಿತು ಕೆಲಸ ಮಾಡುವ ಪ್ರದೇಶ ಹೇಳಿಕೊಳ್ಳುವಷ್ಟು ಸ್ವಚ್ಛವಾಗಿಲ್ಲ. ಬಿಸಿ ನೀರಿನಲ್ಲಿ ಹಾಕಿರುವ ರೇಷ್ಮೆಗೂಡು, ಸದಾ ಉರಿಯುತ್ತಿರುವ ಒಲೆಯಿಂದ ಬರುವ ಹೊಗೆ, ಹಿಂದೆ ಸದಾ ತಿರುಗುವ ನೂಲಿನ ರಾಟೆ, ಅದರ ಕೆಳಗೆ ಬೆಂಕಿಯ ಕೆಂಡಗಳು, ಅದರಿಂದ ತೂರಿ ಬರುವಂತಹ ಬೂದಿ ದೂಳು ಕಾರ್ಮಿಕರ ಜೀವನವನ್ನೇ ಮುಳವಾಗಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಬೆಳಿಗ್ಗೆ 4ಗಂಟೆಗೆ ನಿದ್ದೆಯಿಂದ ಎದ್ದರೆ, ಮಕ್ಕಳಿಗೆ ಅಡುಗೆ ಸಿದ್ದ ಮಾಡು ವಷ್ಟರಲ್ಲಿ 6 ಗಂಟೆ ಯಾಗುತ್ತದೆ. ಮಕ್ಕಳಿಗೆ ಪ್ರೀತಿಯಿಂದ ಊಟ ಮಾಡಿಸಲಿಕ್ಕೂ ಆಗುವುದಿಲ್ಲ’ ಎಂದು ನೂಲು ಬಿಚ್ಚಾಣಿಕೆ ಮಾಡುವ ಬೀಬಿಜಾನ್ ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ನೇರವಾಗಿ ಕೆಲಸಕ್ಕೆ ಬರಬೇಕು, ಒಂದು ಗಾಣಿಗೆ ನಮಗೆ ₹ 60 ರೂಪಾಯಿ ಕೊಡ್ತಾರೆ. ಒಂದು ಗಾಣಿಗವನ್ನು 2 ಗಂಟೆ 20 ನಿಮಿಷದಲ್ಲಿ ತೆಗೆಯಬೇಕು. ಮಾರು ಕಟ್ಟೆಗೆ ಗೂಡು ಕಡಿಮೆ ಬರುವುದಿಂದ ದಿನಕ್ಕೆ 3ಗಾಣಿಗ ತೆಗೆಯಲಾಗುವುದು. ₹180 ರೂಪಾಯಿ ದಿನಕ್ಕೆ ಸಿಗುತ್ತೆ’ಎಂದು ಕಾರ್ಮಿಕರು ತಮ್ಮ ದಿನಚರಿ ತೆರೆದಿಟ್ಟರು.

‘ಕೆಲವೊಮ್ಮೆ ಗೂಡು ಬಾರದಿದ್ದಾಗ ಕೆಲಸ ಇರೋದಿಲ್ಲ, ಆಗ ಮನೆ ಸಂಸಾರಕ್ಕೆ ತುಂಬಾ ಕಷ್ಟ ಆಗುತ್ತೆ. ನಾವು ಯಾವಾಗಲೂ ಕೈಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಂಡು ಕೆಲಸ ಮಾಡುವುದರಿಂದ ಕೈಗಳು ಬೊಬ್ಬೆಗಳಂತಾಗಿ ಊಟ ಮಾಡುವುದಕ್ಕೂ ಕಷ್ಟವಾಗುತ್ತದೆ’ ಎಂದು ತಾಜುನ್ನಿಸಾ ಪರಿಸ್ಥಿತಿ ವಿವರಿಸುತ್ತಾರೆ.

ಕಾರ್ಮಿಕ ನಾರಾಯಣಸ್ವಾಮಿ ಮಾತ ನಾಡಿ, ‘ನಾವು ಕೆಲಸ ಮಾಡುವ ಜಾಗದ ಸುತ್ತಲೂ ಒಂದು ಕಡೆ ಸೌಧೆ. ಮತ್ತೊಂದು ಕಡೆ ಗೂಡಿಗೆ ಸ್ಟೀಮ್ ಕೊಡಲಾಗುತ್ತದೆ. ಇಲ್ಲೇ ಗೂಡು ಲಾಟು ಹಾಕಲಾಗಿರುತ್ತದೆ. ಗೂಡಿನಿಂದ ಬಂದ ಜೋಟನ್ನು ನೇತು ಹಾಕಲಾಗಿರುತ್ತದೆ. ಗೂಡಿನಿಂದ ಬೇರ್ಪ ಡಿಸಿದ ಪ್ಯೂಪಾಗಳು, ಇವೆಲ್ಲ ವುಗಳಿಂದ ಬರುವಂತಹ ವಾಸನೆಯಲ್ಲೇ ದಿನ ಕಳೆಯಬೇಕು’ ಎಂದು ಕಾರ್ಮಿಕರು ನೊಂದು ನುಡಿಯುತ್ತಾರೆ.

(ನೂಲು ಬಿಚ್ಚಾಣಿಕೆ ಮಾಡುತ್ತಿರುವ ಕಾರ್ಮಿಕರ ಕೈಗಳಲ್ಲಿ ಬೊಬ್ಬೆ ಯಾಕಾರದಲ್ಲಿ ಸುಕ್ಕುಕಟ್ಟಿರುವುದು)

‘ಒಂದು ಟನ್ ಸೌಧೆ ₹4 ಸಾವಿರ, ಒಂದು ಟ್ಯಾಂಕರ್ ನೀರು ₹380, ಕಾರ್ಮಿಕರ ಕೊರತೆ ಜಾಸ್ತಿ ಇದೆ. ಅವರಿಗೆ ಮುಂಗಡ ಹಣ ಕೊಡಲಾಗಿದೆ. ಒಂದು ಗಾಣಿಗೆ ₹65 ರೂಪಾಯೊ ಕೊಡಲಾ ಗುವುದು. ಈಚೆಗೆ ಗೂಡು ಕಡಿಮೆ ಯಾಗಿರುವುದರಿಂದ ಉದ್ಯಮ ಕಷ್ಟ ದಲ್ಲಿದ್ದು, ಬದುಕು ದುಸ್ತರವಾಗಿದೆ’ ಎಂದು ತಿಳಿಸಿದರು.

**

ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಪೂರ್ಣ ಮಾಹಿತಿ ತೆಗೆದುಕೊಂಡು ವಿಮೆ ಮಾಡಿಸಲು ಇಲಾಖೆಗೆ ಕಳುಹಿಸ ಲಾಗಿದೆ
-ಚಂದ್ರಪ್ಪ
ರೇಷ್ಮೆ ಕೃಷಿ ವಿಸ್ತರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.