ADVERTISEMENT

ಕೃಷಿ ಸಲಕರಣೆ ಮಾಡುವ ಕುಟುಂಬಗಳಿಗೆ ಸಂಕಷ್ಟ

ಕೃಷಿ ಮೇಲೆ ಯಾಂತ್ರೀಕರಣದ ಪ್ರಭಾವ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 10:57 IST
Last Updated 25 ಅಕ್ಟೋಬರ್ 2016, 10:57 IST

ವಿಜಯಪುರ: ಕೃಷಿ ಚಟುವಟಿಕೆಗಳನ್ನು ನಡೆಸಬೇಕಾದರೆ ಭೂಮಿ ಹದಗೊಳಿಸುವುದರಿಂದ ಹಿಡಿದು ಫಸಲನ್ನು ಕಟಾವು ಮಾಡುವವರೆಗೂ ಕೃಷಿ ಸಲಕರಣೆಗಳು ಬೇಕೇ ಬೇಕು. ಈಚೆಗೆ ಹೆಚ್ಚಾಗಿರುವ ಯಾಂತ್ರೀಕರಣದಿಂದಾಗಿ ಇಂತಹ ಕೃಷಿ ಸಲಕರಣೆಗಳನ್ನು ಸಿದ್ಧ ಪಡಿಸುವ ಕಾಯಕವನ್ನೇ ನಂಬಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಅನೇಕ ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿವೆ.

ಕೃಷಿ, ತೋಟಗಾರಿಕೆ ಎಲ್ಲಾ ಬೆಳೆಗಳನ್ನು ಬೆಳೆಯಬೇಕಾದರೂ ಸಲಕರಣೆಗಳ ಅವಶ್ಯಕತೆ ಬಹಳಷ್ಟಿದೆ. ಕೃಷಿ ಚಟುವಟಿಕೆ ನಡೆಸಬೇಕಾದರೆ, ಸನಿಕೆ, ಗುದ್ದಲಿ, ಪಿಕಾಸಿ, ಕುಡುಗೋಲು, ಸಣ್ಣಗುದ್ದಲಿ, ಸವರುಗತ್ತಿ, ಕಸಿಚಾಕು, ಓರಾರಿ, ನೇಗಿಲು, ಉಳಿಗಳು ಸೇರಿದಂತೆ ಅನೇಕ ಉಪಕರಣಗಳನ್ನು ರೈತರು ಉಪಯೋಗಿಸುತ್ತಿದ್ದರು.

ಭೂಮಿಯನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಬಳಕೆ, ಸಾಲು ಹೊಡೆಯಲು, ಬಿತ್ತನೆ ಮಾಡಲು, ಕಳೆ ತೆಗೆಯಲು, ಕಟಾವು ಮಾಡುವಂತಹ ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದಿವೆ. ವೇಗವಾಗಿ ಕೆಲಸಕಾರ್ಯಗಳು ಮುಗಿಯುವುದರಿಂದ ರೈತರು ಹಿಂದಿನ ಕೃಷಿ ಉಪಕರಣಗಳನ್ನು ಹೆಚ್ಚಾಗಿ ಬಳಸುತ್ತಿಲ್ಲ.

‘ಇದರಿಂದಾಗಿ ಕುಲುಮೆ ಕಸುಬನ್ನೇ  ನಂಬಿಕೊಂಡು ಜೀವನ ಮಾಡುತ್ತಿರುವ ನಮ್ಮ ಬದುಕು ಕಷ್ಟಕರವಾಗಿದೆ. ಬೇರೆ ಕಸುಬು ಗೊತ್ತಿಲ್ಲ, ಕುಲುಮೆಯ ಕೆಲಸ ಮಾಡಲು ಸುಮಾರು ₹10,000 ಬಂಡವಾಳ ಹೂಡಿದ್ದೇವೆ, ಇದ್ದಿಲು ಖರೀದಿ ಮಾಡಬೇಕು, ಕಬ್ಬಿಣ ಖರೀದಿ ಮಾಡಬೇಕು, ಎಲ್ಲಾ ಖರೀದಿ ಮಾಡಿ ಹೊಗೆಯಲ್ಲಿಯೇ ಉಪಕರಣಗಳನ್ನು ಸಿದ್ಧ ಮಾಡಿ ಇಟ್ಟರೂ ಖರೀದಿ ಮಾಡುವವರು ಇಲ್ಲವಾಗಿದ್ದಾರೆ’. ಎಂದು ಕುಲುಮೆಯಲ್ಲಿ ಕೆಲಸ ಮಾಡುತ್ತಿರುವ ಶಂಕರಾಚಾರಿ ಹೇಳುತ್ತಾರೆ.

‘ಕೆಲವೊಮ್ಮೆ ದಿನನಿತ್ಯ ಹೊಗೆಯಿಂದಾಗಿ ಅಸ್ತಮಾ ಕಾಯಿಲೆಗಳಿಗೂ ಒಳಗಾಗುವಂತಹ ಸಂಭವವಿರುತ್ತದೆ.  ಈ ಕೆಲಸ ಬಿಟ್ಟು ಸಣ್ಣ ವ್ಯಾಪಾರಮಾಡಲು ಬ್ಯಾಂಕ್‌ಗಳಲ್ಲಿ ಐ.ಟಿ.ರಿಟರ್ನ್‌ ಕೇಳ್ತಾರೆ. ಸುಮಾರು ನಾಲ್ಕು ವರ್ಷಗಳಿಂದ ಸಾಲ ಸೌಲಭ್ಯಕ್ಕಾಗಿ ಅರ್ಜಿಗಳನ್ನು ಹಾಕಿದ್ದೇವೆ. ಇದುವರೆಗೂ ಸಾಲ ಪಡೆಯಲು ಸಾಧ್ಯವಾಗಿಲ್ಲ. ಹಳೆ ಕೃಷಿ ಉಪಕರಣಗಳನ್ನು ದುರಸ್ತಿ ಮಾಡುವುದಕ್ಕೆ ದಿನ ನಿತ್ಯ 100 ರಿಂದ 150 ರೂಪಾಯಿಗಳನ್ನಷ್ಟೆ ಸಂಪಾದನೆ ಮಾಡಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟಕರವಾಗುತ್ತಿದೆ’ ಎನ್ನುತ್ತಾರೆ.

ಕೃಷಿ ಉಪಕರಣಗಳನ್ನು ತಯಾರು ಮಾಡಲು ಇಲ್ಲಿ ಮೂರು ಜನ ಇರಬೇಕು, ತಲಾ 50 ರೂಪಾಯಿಗಳನ್ನಷ್ಟೆ ಸಂಪಾದನೆ ಮಾಡಲು ಸಾಧ್ಯವಾಗುತ್ತಿದೆ  ಎಂದು ಅವರು ಹೇಳುತ್ತಾರೆ.

ಇಂತಹ ಉಪ ಕಸುಬುಗಳನ್ನು ನಂಬಿಕೊಂಡು ಜೀವನ ನಡೆಸುತ್ತಿರುವವರ ಬಗ್ಗೆ ಸರ್ಕಾರವೂ ಗಮನಹರಿಸಬೇಕು ಎಂದು ಎಸ್ ಮಂಜುನಾಥ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.