ADVERTISEMENT

ಕೆರೆಗಳ ಹೂಳು ಮೇಲೆತ್ತಲು ಆಗ್ರಹ

ನೀರಿಗಾಗಿ ಜನರ ಪರದಾಟ, ಕುಸಿದ ಅಂತರ್ಜಲ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 8:52 IST
Last Updated 3 ಮಾರ್ಚ್ 2017, 8:52 IST
ವಿಜಯಪುರ ಕೆರೆಯಲ್ಲಿ ನೀರಿಲ್ಲದೆ ಮಣ್ಣು ತೆಗೆದಿರುವುದರಿಂದ ನಿರ್ಮಾಣವಾಗಿರುವ ದೊಡ್ಡಪ್ರಮಾಣದ ಹಳ್ಳಗಳು
ವಿಜಯಪುರ ಕೆರೆಯಲ್ಲಿ ನೀರಿಲ್ಲದೆ ಮಣ್ಣು ತೆಗೆದಿರುವುದರಿಂದ ನಿರ್ಮಾಣವಾಗಿರುವ ದೊಡ್ಡಪ್ರಮಾಣದ ಹಳ್ಳಗಳು   

ವಿಜಯಪುರ: ತೀವ್ರ ಬರಗಾಲಕ್ಕೆ ತುತ್ತಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನ-ಜಾನುವಾರಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ.
ರಾಸುಗಳಿಗೆ ನೀರು ಮೇವು ಇಲ್ಲದ ಕಾರಣ ರೈತರು ಹಸುಗಳನ್ನು ಕಸಾಯಿಖಾನೆಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯ ಜನರು ಇಷ್ಟೆಲ್ಲ ಸಂಕಷ್ಟಗಳನ್ನು ಅನುಭವಿಸುತ್ತಿದ್ದರೂ, ಸರ್ಕಾರ ಕೆರೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆದು ,ಅಂತರ್ಜಲದ ಮಟ್ಟ ಸುಧಾರಣೆ ಮಾಡಲು ಮುಂದಾಗಿಲ್ಲವೆಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್ ಆರೋಪಿಸಿದ್ದಾರೆ.

ಪಟ್ಟಣದ ಜಯಕರ್ನಾಟಕ ಸಂಘಟನೆಯ ಕಚೇರಿಯಲ್ಲಿ ಮಾತನಾಡಿದ ಅವರು, ದೇವನಹಳ್ಳಿ ತಾಲ್ಲೂಕಿನ  ವಿಜಯಪುರ ಹೋಬಳಿ, ಚನ್ನರಾಯಪಟ್ಟಣ ಹೋಬಳಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಟ್ಯಾಂಕರುಗಳಲ್ಲಿ ಪೂರೈಕೆ ಮಾಡಲಿಕ್ಕೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಮೀಪದ ಭದ್ರಯ್ಯನಕೆರೆ, ವಿಜಯಪುರ ಕೆರೆ, ಭಟ್ರೇನಹಳ್ಳಿ ಕೆರೆ, ಅಮಾನಿಕೆರೆ ಸೇರಿದಂತೆ ಬಹುತೇಕ ಕೆರೆಗಳಲ್ಲಿ ಒಂದು ತೊಟ್ಟು ನೀರಿಲ್ಲದ ಕಾರಣ ಕೆರೆಗಳಲ್ಲಿ ಮಣ್ಣನ್ನು ಮನಸೋ ಇಚ್ಛೆ ಸಾಗಾಣಿಕೆ ಮಾಡಿರುವುದರಿಂದ ಕೆರೆಗಳಲ್ಲಿ ದೊಡ್ಡ ಪ್ರಮಾಣದ ಹಳ್ಳಗಳು ಬಿದ್ದಿವೆ.

ಕೆಲವು ಕಡೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದೆ. ಹಲವು ವರ್ಷಗಳಿಂದ ಬತ್ತದೆ ಇರುವ  ಕೆರೆಗಳು ಈ ಬಾರಿ ಬತ್ತಿ ರುವ ಕಾರಣ ರೈತರಷ್ಟೇ ಅಲ್ಲ ಜಾನುವಾ ರುಗಳು ಪರದಾಡುವಂತಾಗಿದೆ ಎಂದು ಅವರು ಹೇಳಿದರು.

ಗಾಂಧಿ ಉದ್ಯೋಗ ಖಾತ್ರಿ ಮತ್ತು ಕೆರೆ ಸಂಜೀವಿನಿ ಯೋಜನೆಗಳಲ್ಲಿ ಸಾಕಷ್ಟು ಹಣ ಗ್ರಾಮ ಪಂಚಾಯಿತಿಗಳಿಗೆ ಹರಿದುಬರುತ್ತದೆ. ಆದರೂ  ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಮಾಡುತ್ತಿಲ್ಲವೆಂದು ಆರೋಪಿಸಿದರು.

ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ನೀರಿಲ್ಲದೆ ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಪ್ರಾರಂಭಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.  ‘ಹ್ಯೂಮನ್ ರೈಟ್ಸ್ ಪ್ರೋಟೆಕ್ಷನ್ ಕಮಿಟಿ’ಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಪುರ ನಾಗರಾಜ್ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.