ADVERTISEMENT

ಗಾಂಧಿ ವೇಷಧಾರಿಗೆ ಬೇಕಿದೆ ಸಹಾಯಹಸ್ತ

ಜೀವನ ಪರ್ಯಂತ ಸತ್ಯ, ಅಹಿಂಸೆ, ಕಠಿಣ ಶ್ರಮದ ಪರಿಪಾಲಕ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:31 IST
Last Updated 18 ಏಪ್ರಿಲ್ 2017, 7:31 IST
ಗಾಂಧಿ ವೇಷಧಾರಿಗೆ ಬೇಕಿದೆ ಸಹಾಯಹಸ್ತ
ಗಾಂಧಿ ವೇಷಧಾರಿಗೆ ಬೇಕಿದೆ ಸಹಾಯಹಸ್ತ   
ಮಾಗಡಿ: ಗಾಂಧಿ ವೇಷಧಾರಿ ಕಲ್ಯದ ಭಗವಂತಯ್ಯ (94) ನಿತ್ರಾಣಗೊಂಡು ಹಾಸಿಗೆ ಹಿಡಿದಿದ್ದಾರೆ.
 
ಜೀವನ ಪರ್ಯಂತ ಸತ್ಯ, ಅಹಿಂಸೆ, ಕಠಿಣ ಶ್ರಮದಲ್ಲಿ ನಂಬಿಕೆ ಇಟ್ಟುಕೊಂಡು ಖಾದಿಧಾರಿಯಾಗಿರುವ ಅವರ ಆರೋಗ್ಯ ಸುಧಾರಣೆಗೆ ಸಿರಿವಂತರು ಸಹಾಯಹಸ್ತ ಚಾಚಬೇಕು. ಅವರಿಗೆ ಇಳಿವಯಸ್ಸಿನಲ್ಲಿ ರಕ್ಷಣೆ ನೀಡಬೇಕಿದೆ ಎಂದು ಗ್ರಾಮಸ್ಥರು  ಮನವಿ ಮಾಡಿದ್ದಾರೆ.
 
1922 ರಲ್ಲಿ ವೀರೇಗೌಡನ ದೊಡ್ಡಿಯ ಮೂಲಕ ಲಕ್ಷ್ಮೀಪುರದಲ್ಲಿ ಏರ್ಪಡಿಸಿದ್ದ ಸ್ವದೇಶಿ ಚಳವಳಿ ಸಭೆಯಲ್ಲಿ ಭಾಗವಹಿಸಲು ಕಲ್ಯಾದ ಮೂಲಕ ಮಾಗಡಿ ಮಾರ್ಗವಾಗಿ ಮಹಾತ್ಮ ಗಾಂಧೀಜಿ ತೆರಳಿದ್ದರು.
 
ಈ ಚಳವಳಿಯಲ್ಲಿ ಭಾಗವಹಿಸಿದ್ದ ಬಾಲಕ ಭಗವಂತಯ್ಯ, ಅಂದಿನಿಂದಲೂ ಬಾಪೂಜಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡವರು. ರಾಷ್ಟ್ರೀಯ ಹಬ್ಬಗಳು, ರಂಗನಾಥ ಸ್ವಾಮಿ ರಥೋತ್ಸವ, ಕೆಂಪೇಗೌಡ ಜಯಂತಿ ಇತರ ಕಾರ್ಯಕ್ರಮಗಳಲ್ಲಿ ಮೈಗೆಲ್ಲ ಬಿಳಿಯ ಬಣ್ಣ ಬಳಿದುಕೊಂಡು ಕೈಯಲ್ಲೊಂದು ಭಗವದ್ಗೀತೆ ಕೃತಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. 
 
ವಾರಕ್ಕೊಮ್ಮೆ ಉಪವಾಸ ಮಾಡುವುದು. ಖಾದಿ ಧರಿಸಿ,  ಮದ್ಯಪಾನ ಮತ್ತು ಧೂಮಪಾನ ಮಾಡಬೇಡಿ ಎಂಬ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಬಿಳಿಯ ಬಣ್ಣ ಬಳಿದು ಕನ್ನಡಕ ಧರಿಸಿ, ಕೈಯಲ್ಲೊಂದು ಕೋಲು ಹಿಡಿದು ಗಾಂಧಿ ವೇಷಧರಿಸಿ ನಡೆದು ಬರುವ ಭಗವಂತಯ್ಯ ಅವರನ್ನು ನೋಡಿದ ಶಾಲಾ ಮಕ್ಕಳು ನಿಜವಾದ ಗಾಂಧೀಜಿ ಅವರನ್ನು ನೋಡಿದಷ್ಟು ಸಂತಸಗೊಳ್ಳುತ್ತಿದ್ದರು. ಅವರೊಂದಿಗೆ ಭಾವಚಿತ್ರ ತೆಗೆದುಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದರು.
 
ಕಲ್ಯಾ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಇರುವ ತುಂಡು ಭೂಮಿಯಲ್ಲಿ ಅವರು ಸ್ಥಳೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಹೂವಿನ ಗಿಡಗಳನ್ನು ನೆಟ್ಟು ಅದರಲ್ಲಿ ಬರುವ ಹೂಗಳನ್ನು ಸಂಗ್ರಹಿಸಿ ತಂದು ಮಾಗಡಿಯಲ್ಲಿ ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. 
 
ಬಾಪೂಜಿ ಆದರ್ಶಗಳನ್ನು ಬಾಳಿನಲ್ಲಿ ಅನುಸರಿಸಿಕೊಂಡು ಬಂದಿದ್ದಾರೆ. ಗ್ರಾಮದ ಯಾರಾದರೂ ಮರಣ ಹೊಂದಿದರೆ ಅಲ್ಲಿಗೆ ಹಾಜರಾಗುವ ಭಗವಂತಯ್ಯ, ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಟ್ಟು, ಮೃತರ ಬಂಧುಗಳಿಗೆ ಸಾಂತ್ವನ ಹೇಳುತ್ತಾ ಬಂದವರು. ಅಂತ್ಯಕ್ರಿಯೆ ನಡೆಸಿ ಮುಕ್ತಿಗೆ ಬೇಕಾದ ವಿಧಿವಿಧಾನ ನಡೆಸಿಕೊಂಡು ಬಂದಿದ್ದಾರೆ. 
 
ನಿತ್ಯ ಸೂರ್ಯೋದಯಕ್ಕೆ ಮುನ್ನ ಎದ್ದು ಕಲ್ಯದ ಕೆರೆಯಲ್ಲಿ ಮುಳುಗಿ ಸ್ನಾನ ಮುಗಿಸಿ ಊರ ಮುಂದಿನ ಆಂಜನೇಯ ಸ್ವಾಮಿ, ಗಣೇಶ ಮತ್ತು ರಾಮದೇವರಿಗೆ ಹೂವಿನ ಅರ್ಪಣೆ ಮಾಡುತ್ತಾ ಬಂದಿದ್ದಾರೆ. ವಾರಕ್ಕೊಮ್ಮೆ ಬೆಟ್ಟದಲ್ಲಿ ಕುಳಿತು ಏಕಾಂಗಿಯಾಗಿ ಉಪವಾಸ, ಧ್ಯಾನ ಮಾಡುವುದು ಅವರ ದಿನಚರಿಯಾಗಿತ್ತು.
 
ಇದೀಗ ಇಳಿವಯಸ್ಸಿನಲ್ಲಿ ಬೆಟ್ಟದ ತಪ್ಪಲಿನ ಮಕ್ಕಳ ಮನೆಯ ಕೊಠಡಿಯೊಂದರಲ್ಲಿ ಏಕಾಂಗಿಯಾಗಿ ರಾಮ ಭಜನೆ ಮುಂದುವರಿಸಿದ್ದಾರೆ. ನಿತ್ರಾಣಗೊಂಡಿರುವ ಅವರಿಗೆ ಸೂಕ್ತ ಆರೋಗ್ಯದ ರಕ್ಷಣೆಯ ಅಗತ್ಯವಿದೆ. ಇಬ್ಬರು ಮಕ್ಕಳು ಸಹ ಬಡತನದಿಂದಾಗಿ ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ.  
–ದೊಡ್ಡಬಾಣಗೆರೆ ಮಾರಣ್ಣ.
***
ನೆರವು ನೀಡಿ
ಕಲ್ಯದ ಭಗವಂತಯ್ಯ ಅಲಿಯಾಸ್‌ ಬೊಮ್ಮಲಿಂಗಯ್ಯ ಅವರ ಅಕೌಂಟ್‌ ನಂಬರ್‌ 5953101001491 ಕೆನರಾ ಬ್ಯಾಂಕ್‌, ಕಲ್ಯ ಗ್ರಾಮ ಶಾಖೆ ಮಾಗಡಿ ತಾಲ್ಲೂಕು. ಅವರ ಮಗ ಗಂಗಾಧರ್‌ ಮೊಬೈಲ್‌ ಸಂಖ್ಯೆ 95380–98613

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.