ADVERTISEMENT

ಗುಟ್ಕಾ ಮಾರಾಟ: ಅಂಗಡಿಗಳ ಮೇಲೆ ದಾಳಿ

ದೇವನಹಳ್ಳಿ: 30 ಪ್ರಕರಣಗಳಲ್ಲಿ ರೂ 3970 ದಂಡ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 8:47 IST
Last Updated 24 ಅಕ್ಟೋಬರ್ 2014, 8:47 IST

ದೇವನಹಳ್ಳಿ: ಪಟ್ಟಣದ ವ್ಯಾಪ್ತಿಯ ಅಂಗಡಿ ಮತ್ತು ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ ರಾಜ್ಯ ತಂಬಾಕು ನಿಯಂತ್ರಣ ಘಟಕದ ಅಧಿಕಾರಿಗಳು ಗುಟ್ಕಾ, ಪಾನ್ ಮಸಾಲಾ ವಶಪಡಿಸಿಕೊಂಡು ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ನಂತರ ಮಾತನಾಡಿದ ರಾಜ್ಯ ತಂಬಾಕು ನಿಯಂತ್ರಣ ಘಟಕ ಸಲಹೆಗಾರ ಡಾ.ಜಗನ್ನಾಥ್, ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಅಲ್ಲದೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಮಾರುಕಟ್ಟೆ, ಚಲನಚಿತ್ರ ಮಂದಿರ, ಕಲ್ಯಾಣ ಮಂಟಪ, ಸರ್ಕಾರಿ ಭವನಗಳು ಮತ್ತು ಕಚೇರಿ ವ್ಯಾಪ್ತಿಯಲ್ಲಿ ಸಿಗರೇಟು ಸೇವನೆ ನಿಷೇಧವಾಗಿದ್ದರೂ ಖಾಸಗಿ ಮಾರಾಟಗಾರರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಂಡಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ ಮತ್ತು ಪಾನ್ ಮಸಾಲಾ ಗುಟ್ಕಾ ಮಾರಾಟಗಾರರಿಗೆ ₨ 500 ಮೊದಲ ಹಂತದಲ್ಲಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತಿದ್ದು, ಎರಡನೇ ಹಂತದಲ್ಲಿ ₨ 5 ಸಾವಿರ ಹಾಗೂ ಪ್ರಕರಣ ದಾಖಲಿಸಿ ಗಂಭೀರ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ವಿವರಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಜಿ.ಗೋವಿಂದರಾಜು ಮಾತನಾಡಿ, ಪ್ರಸ್ತುತ ವಿವಿಧೆಡೆ ದಾಳಿ ನಡೆಸಿ 30 ಪ್ರಕರಣಗಳಲ್ಲಿ ₨ 3970 ದಂಡ ವಸೂಲಿ ಮಾಡಲಾಗಿದೆ ಎಂದರು. ರಾಜ್ಯ ತಂಬಾಕು ನಿಯಂತ್ರಣ ಘಟಕ ಯೋಜನಾ ಸಹಾಯಕ ರವಿಪ್ರಕಾಶ್, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಟಿ.ವಿ.ರಾಜು ಹಾಗೂ ಎಚ್. ನಾಗರಾಜ್, ಪುರಸಭೆ ಆರೋಗ್ಯ ನಿರೀಕ್ಷಕಿ ಹಾಗೂ ಪೊಲೀಸರು ದಾಳಿಯ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.