ADVERTISEMENT

ಗೋಶಾಲೆ ತೆರೆಯಲು ಸಚಿವ ಸೂಚನೆ

ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನೆ; ಗಡುವಿನೊಳಗೆ ಅನುದಾನ ಸದ್ಬಳಕೆಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 12:12 IST
Last Updated 9 ಮಾರ್ಚ್ 2017, 12:12 IST
ಗೋಶಾಲೆ ತೆರೆಯಲು ಸಚಿವ ಸೂಚನೆ
ಗೋಶಾಲೆ ತೆರೆಯಲು ಸಚಿವ ಸೂಚನೆ   
ರಾಮನಗರ: ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯ ಜೊತೆಗೆ ಪ್ರತಿ ತಾಲ್ಲೂಕಿಗೆ ಒಂದು ಗೋಶಾಲೆ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಸೂಚಿಸಿದರು.
 
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ತಾಲ್ಲೂಕುವಾರು ಮಾಹಿತಿ ಪಡೆದರು.
 
‘ಕನಕಪುರ ತಾಲ್ಲೂಕಿನಲ್ಲಿ 5 ಗ್ರಾಮಗಳಲ್ಲಿ ಗೋಶಾಲೆ ತೆರೆಯಲಾಗಿದ್ದು, ಒಟ್ಟು 5,023 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ’ ಎಂದು ಕನಕಪುರ ತಹಶೀಲ್ದಾರ್‌ ಯೋಗಾನಂದ ಮಾಹಿತಿ ನೀಡಿದರು. 
 
‘ರಾಮನಗರ ತಾಲ್ಲೂಕಿನಲ್ಲಿ 4 ಹಳ್ಳಿಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಜಾನುವಾರುಗಳಿಗಾಗಿ ಕೈಲಾಂಚ ಹೋಬಳಿಯ ಕೆ.ಪಿ. ದೊಡ್ಡಿ ಹಾಗೂ ಕೂಟಗಲ್‌ ಹೋಬಳಿಯ ಯರೇಹಳ್ಳಿಯಲ್ಲಿ ಮೇವು ಬ್ಯಾಂಕ್‌ ತೆರೆಯಲಾಗಿದೆ’ ಎಂದು ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.
 
‘ವೈ.ಜಿ. ಗುಡ್ಡ, ಕಣ್ವಾ, ಮಂಚನಬೆಲೆ ಹಿನ್ನೀರು ಸೇರಿದಂತೆ ನೀರು ಮತ್ತು ನೆರಳಿನ ವ್ಯವಸ್ಥೆ ಇರುವ ಕಡೆ ಗೋಶಾಲೆಗಳನ್ನು ತೆರೆಯಿರಿ’ ಎಂದು ಸಂಸದ ಡಿ.ಕೆ. ಸುರೇಶ್‌ ಹಾಗೂ ಶಾಸಕ ಎಚ್‌.ಸಿ. ಬಾಲಕೃಷ್ಣ ಸಲಹೆ ನೀಡಿದರು. 
 
ಜಿಪಿಎಸ್‌ಗೆ ಆಕ್ಷೇಪ: ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಕಡ್ಡಾಯ ನಿಯಮಕ್ಕೆ ಬಾಲಕೃಷ್ಣ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಟ್ಯಾಂಕರ್‌ಗಳ ಮಾಲೀಕರಿಗೆ ಹೊರೆಯಾಗುತ್ತಿದ್ದು, ಜಿಲ್ಲಾಡಳಿತವೇ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಜಿಪಿಎಸ್ ಸಾಧನ ಅಳವಡಿಸಬೇಕು ಎಂದು ಆಗ್ರಹಿಸಿದರು. 
 
ಕಾಮಗಾರಿ ಮುಗಿಸಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ಯಾವುದಾದರೂ ಇಲಾಖೆಯ ಅನುದಾನ ಬಳಕೆಯಾಗದೇ ವಾಪಸ್‌ ಆದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು. 
 
ವಾರದಲ್ಲಿ ವರದಿಗೆ ಸೂಚನೆ: ಜಿಲ್ಲೆಯ ಶೇ 40ರಷ್ಟು ಅಧಿಕಾರಿಗಳು ಮಾತ್ರ ಕೇಂದ್ರ ಸ್ಥಾನದಲ್ಲಿ ವಾಸವಿರುವುದಾಗಿ ತಿಳಿದುಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದ ತಂಡವು ವರದಿ ತರಿಸಿಕೊಂಡು, ವಾರದೊಳಗೆ ಆ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಸಚಿವರು ಸೂಚಿಸಿದರು. 
 
ವಿಲೇವಾರಿಗೆ ಸೂಚನೆ: ಬಗರ್‌ಹುಕುಂ ಸಾಗುವಳಿ ಹಾಗೂ 94ಸಿ ಅಡಿ ಸಲ್ಲಿಕೆಯಾದ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು. 
 
ಆಧಾರ್‌ ಲಿಂಕ್‌: ಪಡಿತರ ಚೀಟಿ ಹೊಂದಿರುವ ಪ್ರತಿ ಸದಸ್ಯರೂ ತಮ್ಮ ಕಾರ್ಡಿನೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದಕ್ಕೆ ಇದೇ 31 ಕಡೆಯ ದಿನವಾಗಿದೆ. ಪ್ರತಿಯೊಬ್ಬರು ತಪ್ಪದೇ ಈ ಕಾರ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು. 
 
ಗೊಬ್ಬರ ಖರೀದಿಗೆ ಸಬ್ಸಿಡಿ: ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಸಬ್ಸಿಡಿ ದರದಲ್ಲಿ ರೈತರಿಗೆ ಸಾವಯವ ಗೊಬ್ಬರ ನೀಡುತ್ತಿದ್ದು, ಆಸಕ್ತರು ಬಳಸಿಕೊಳ್ಳಬಹುದು’ ಎಂದು ಸಚಿವರು ಮಾಹಿತಿ ನೀಡಿದರು.
 
‘ಈ ಸಂಸ್ಥೆಯು ಟನ್‌ಗೆ ₹1600 ಗೊಬ್ಬರ ನೀಡಲಿದ್ದು, ಇದರಲ್ಲಿ ರೈತರು ₹800 ಭರಿಸಿದರೆ ಸಾಕು, ಉಳಿದ ಹಣವನ್ನು ಸರ್ಕಾರ ನೀಡಲಿದೆ. ಬೇಡಿಕೆಯಷ್ಟು ಗೊಬ್ಬರ ಹೊಲಗಳಿಗೆ ತಲುಪಲಿದೆ. ರೈತರು ತಾವೇ ಗೊಬ್ಬರವನ್ನು ಸಾಗಣೆ ಮಾಡಿಕೊಂಡಲ್ಲಿ ಟನ್‌ಗೆ ಕೇವಲ ₹125ಕ್ಕೆ ಸಿಗಲಿದೆ. ಆಸಕ್ತರು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು’ ಎಂದರು.
 
ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಮೈಸೂರು ಎಲೆಕ್ಟ್ರಿಕಲ್ಸ್‌ ನಿಗಮದ ಅಧ್ಯಕ್ಷ ಶೇಷಾದ್ರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಪಿ. ರಾಜೇಶ್‌, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್, ಜಿಲ್ಲಾಧಿಕಅರಿ ಬಿ.ಆರ್‌. ಮಮತಾ. ಜಿ.ಪಂ. ಸಿಇಒ ಸಿ.ಪಿ. ಶೈಲಜಾ. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ. ರಮೇಶ್‌ ವೇದಿಕೆಯಲ್ಲಿದ್ದರು.
 
ಕಮಿಷನ್‌ ವ್ಯವಹಾರ ಮಾಡ್ತೀರಾ?
‘ಸರ್ಕಾರಿ ಅನುದಾನ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಬದಲು ಕೆಳಹಂತದ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಕಮಿಷನ್‌ ವ್ಯವಹಾರ ಮಾಡ್ತೀರಾ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಅಧಿಕಾರಿಗಳನ್ನು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

14ನೇ ಹಣಕಾಸು ಯೋಜನೆ ಅಡಿ ಗ್ರಾಮ ಪಂಚಾಯಿತಿಗಳಿಗೆ ಲಭ್ಯವಾಗುವ ಅನುದಾನದ ಬಗ್ಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿಯಿಂದ ಮಾಹಿತಿ ಪಡೆದ ಅವರು ‘ಕಚೇರಿಯಲ್ಲಿ ಸಭೆ ನಡೆಸಿ ವ್ಯವಹಾರ ಮಾತನಾಡುವ ಬದಲು ಸರಿಯಾಗಿ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು.

ನಮಗೂ ಬೇಕು ನಿಮ್ಮ ಮಾದರಿ: ‘ನರೇಗಾ ಅನುದಾನ ಬಳಕೆಯಲ್ಲಿ ಕನಕಪುರ ತಾಲ್ಲೂಕು ಮಾತ್ರ ಮುಂದಿದ್ದು, ಉಳಿದ ತಾಲ್ಲೂಕುಗಳನ್ನು ನಿರ್ಲಕ್ಷಿಸಲಾಗಿದೆ. ಕನಕಪುರದಲ್ಲಿ ಮಾತ್ರ ಈ ಕಾರ್ಯ ಬಿರುಸಾಗಿರುವುದಕ್ಕೆ ಕಾರಣವೇನು? ನಮಗೂ ನಿಮ್ಮ ಮಾದರಿ ಕಲಿಸಿಕೊಡಿ’ ಎಂದು ಶಾಸಕ ಬಾಲಕೃಷ್ಣ ಸಭೆಯಲ್ಲಿ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್‌ ‘ಇಲ್ಲಿ ಯಾವ ತಾರತಮ್ಯದ ಪ್ರಶ್ನೆಯೂ ಇಲ್ಲ. ಯಾವ ಅಧಿಕಾರಿ ಮೇಲೆ ಒತ್ತಡವನ್ನೂ ಹೇರಿಲ್ಲ. ನಮಗೆ ಜಿಲ್ಲೆಯ ನಾಲ್ಕೂ ತಾಲ್ಲೂಕು ಒಂದೇ. ಬೇಕಿದ್ದರೆ ನೀವೇ ನಮಲ್ಲಿಗೆ ಬಂದು ಕಾಮಗಾರಿ ಪರಿಶೀಲಿಸಿ’ ಎಂದು ಆಹ್ವಾನಿಸಿದರು.
 
* ಕೇವಲ ಕನಕಪುರದಲ್ಲಿ ಮಾತ್ರ ಗೋಶಾಲೆ ತೆರೆದರೆ ಸಾಲದು. ಉಳಿದ ತಾಲ್ಲೂಕುಗಳಲ್ಲೂ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಬೇಕು
ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.