ADVERTISEMENT

ಚಂದಾಪುರ–ದೊಮ್ಮಸಂದ್ರ ರಸ್ತೆ ಮೇಲ್ದರ್ಜೆಗೆ

ದ್ವಿಪಥ ರಸ್ತೆ ಕಾಮಗಾರಿಗೆ ಶಾಸಕ ಶಿವಣ್ಣ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:44 IST
Last Updated 2 ಜನವರಿ 2017, 11:44 IST

ಆನೇಕಲ್‌: ತಾಲ್ಲೂಕಿನ ಚಂದಾಪುರ–ದೊಮ್ಮಸಂದ್ರ ರಸ್ತೆಯು ಅತ್ಯಂತ ಹಾಳಾಗಿದ್ದು ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ ಈ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇದರಿಂದ ಸಂಚಾರ ಸುಗಮವಾಗಲಿದೆ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ತಾಲ್ಲೂಕಿನ ಚಂದಾಪುರದಲ್ಲಿ ಚಂದಾಪುರ ವೃತ್ತದಿಂದ ಹೀಲಲಿಗೆವರೆಗಿನ ₹1ಕೋಟಿ ವೆಚ್ಚದ ದ್ವಿಪಥ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ದೊಮ್ಮಸಂದ್ರದಿಂದ ಮುತ್ತಾನಲ್ಲೂರು ಕ್ರಾಸ್‌ನವರೆಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಹೀಲಲಿಗೆ ವರೆಗಿನ ಕಾಮಗಾರಿ ಪೂರ್ಣಗೊಂಡರೆ ಈ ಭಾಗದಲ್ಲಿರುವ ಹಲವಾರು ಗ್ರಾಮಗಳಿಗೆ ಉಪಯೋಗವಾಗಲಿದೆ ಎಂದರು.

ಮುಂದಿನ ಹಂತದಲ್ಲಿ ಹೀಲಲಿಗೆಯಿಂದ ಮುತ್ತಾನಲ್ಲೂರು ವರೆಗೂ ದ್ವಿಪಥ ರಸ್ತೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದೆ. ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.

ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ನಾಗರಾಜು, ಚಂದಾಪುರ ಪುರಸಭಾ ಅಧ್ಯಕ್ಷ ವೇಣುಗೋಪಾಲ್, ಸದಸ್ಯೆ ಮಂಜುಳ ನೀಲಕಂಠಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಣ್ಣ, ಚಂದ್ರಪ್ಪ, ಮುಖಂಡರಾದ  ಬಳ್ಳೂರು ಮುನಿವೀರಪ್ಪ, ಶಿವಪ್ಪ, ಬನಹಳ್ಳಿ ರಾಮಚಂದ್ರರೆಡ್ಡಿ, ಗೋಪಾಲರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.