ADVERTISEMENT

ಜಿಲ್ಲೆಯ 1763 ಶಾಲಾಮಕ್ಕಳಿಗೆ ನ್ಯೂನತೆ

ಶಿಕ್ಷಣ ಇಲಾಖೆಯಿಂದ ವೈದ್ಯಕೀಯ ಮೌಲ್ಯಾಂಕಿತ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 9:24 IST
Last Updated 23 ಜುಲೈ 2014, 9:24 IST

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ವಿವಿಧ ನ್ಯೂನತೆಗಳಿರುವ  1763 ಮಕ್ಕಳಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಿ. ಪ್ರಕಾಶ್ ತಿಳಿಸಿದರು.

ದೇವನಹಳ್ಳಿ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಂಗಳವಾರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಲ್ಕು ದಿನಗಳ ವಿದ್ಯಾರ್ಥಿಗಳ ವೈದ್ಯಕೀಯ ಮೌಲ್ಯಾಂಕಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 517 ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, 80 ವಿದ್ಯಾರ್ಥಿಗಳನ್ನು ಹೊರತುಪಡಿಸಿ 466 ವಿದ್ಯಾರ್ಥಿಗಳನ್ನು ಮತ್ತೆ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ದೈಹಿಕ ನ್ಯೂನತೆ, ಶ್ರವಣ ಮತ್ತು ದೃಷ್ಟಿದೋಷ, ಮಾತಿನ ವಿಕಲತೆ, ಪಾರ್ಶ್ವವಿಕಲತೆ, ಮೆದುಳು ಪಾರ್ಶ್ವ, ಬುದ್ಧಿ ಮಾಂದ್ಯ, ಬಹುವಿಧದ ಅಂಗವಿಕಲತೆ ಸೇರಿದಂತೆ ಒಟ್ಟು ಹತ್ತು ರೀತಿಯ ನ್ಯೂನತೆಗಳನ್ನು ವೈದ್ಯರು ತಪಾಸಣೆ ನಡೆಸಿ ಗುರುತಿಸಿದ್ದಾರೆ ಎಂದು ವಿವರಿಸಿದರು.

ಧೃಡಿಕರಿಸಿದ ಮಕ್ಕಳಿಗೆ ಇಲಾಖೆವತಿಯಿಂದ ಗುರುತಿನ ಚೀಟಿ ನೀಡಿ ಶೇಕಡ 60ರಷ್ಟು ನ್ಯೂನತೆ ಇರುವ ಮಕ್ಕಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿ ದೈಹಿಕ ಆರೋಗ್ಯ ಬೌದ್ಧಿಕ ಸುಧಾರಣೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದ್ದು, ಸಮಾನ ಶಿಕ್ಷಣ ನೀಡುವ ಉದ್ದೇಶವನ್ನು ಇಲಾಖೆ ಈ ಮೂಲಕ ಕಾರ್ಯಗತಗೊಳಿಸುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮುನಿರಾಜು ಮಾತನಾಡಿ, ಮಕ್ಕಳು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ವಿವಿಧ ರೀತಿಯ ನ್ಯೂನತೆಗಳನ್ನು ಶಿಕ್ಷಕರು ಗಮನಿಸಬೇಕಾಗುತ್ತದೆ. ಬರವಣಿಗೆ, ಪಾಠ ವಾಚನ ಸಮಯದಲ್ಲಿ ಪುಸ್ತಕ ಮತ್ತು ದೃಷ್ಟಿಯ ಅಂತರ ಬೋಧನಾ ಸಮಯದಲ್ಲಿ ಶಿಕ್ಷಕರು ಹೇಳುವ ಪಾಠ ಗಮನವನ್ನು ಕೇಂದ್ರೀಕರಿಸಿ ಮಾತನಾಡುವ ಶೈಲಿ, ನಡೆದಾಟ, ಕಲಿಕೆಯಲ್ಲಿನ ಆಸಕ್ತಿ, ಕ್ರೀಡೆಯಲ್ಲಿನ ನಿರಾಸಕ್ತಿ ಸೇರಿದಂತೆ ಪ್ರತಿಯೊಂದನ್ನು ಶಿಕ್ಷಕರು ಗಮನಿಸುತ್ತಿರಬೇಕು. ಶಿಕ್ಷಕರಿಗಿಂತ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ . ಆದ್ದರಿಂದ ಪೋಷಕರು ಪ್ರತಿಯೊಂದು ಅಂಶಗಳ ಬಗ್ಗೆ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಗುರುರಾಜ್, ಯೋಜನಾ ಉಪಸಮನ್ವಯಾಧಿಕಾರಿ ಪ್ರೇಮಲತಾ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರವಿಪ್ರಕಾಶ್, ಬಿ.ಆರ್.ಸಿ.ನಾಗೇಶ್, ಡಾ.ನಾಗೇಶ್, ಡಾ.ಸಂತೋಷ್, ಡಾ.ಮನೋಜ್ ಕುಮಾರ್, ಡಾ.ಮಹಿಮಾ, ಸವಿತಾ, ಎ.ಪಿ.ಓ ಲೀಲಾವತಿ, ನೋಡಲ್ ಅಧಿಕಾರಿ ಕಲ್ಪನಾ ವಿಶ್ವನಾಥ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.