ADVERTISEMENT

ತಾಲ್ಲೂಕು ಕೇಂದ್ರಕ್ಕೆ ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಜನ ಜಾಗೃತಿ ಸೇನೆ ಆರೋಪ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 9:28 IST
Last Updated 31 ಜನವರಿ 2017, 9:28 IST
ತಾಲ್ಲೂಕು ಕೇಂದ್ರಕ್ಕೆ ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಜನ ಜಾಗೃತಿ ಸೇನೆ ಆರೋಪ
ತಾಲ್ಲೂಕು ಕೇಂದ್ರಕ್ಕೆ ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಜನ ಜಾಗೃತಿ ಸೇನೆ ಆರೋಪ   
ದೇವನಹಳ್ಳಿ: ವಿಜಯಪುರ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಭಾರತ ಜನ ಜಾಗೃತಿ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ ಆರೋಪಿಸಿದರು.
 
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ನಡೆದ ಜನಜಾಗೃತಿ ಸೇನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕು ಕೇಂದ್ರವಾಗಿರುವ ದೇವನಹಳ್ಳಿ ಪುರಸಭೆಗಿಂತ ವಿಜಯಪುರ ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂಖ್ಯೆ ಇದೆ. ವಾಣಿಜ್ಯ ವಹಿವಾಟು ಇತರೆ ವ್ಯಾಪಾರ ವಹಿವಾಟಿನಿಂದ ವಿಜಯಪುರ ಹೋಬಳಿ ಕೇಂದ್ರ ಪ್ರಬುದ್ಧಮಾನಕ್ಕೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹುಂಡೇಕರ್‌ ವರದಿಯಲ್ಲಿ ವಿಜಯಪುರ ತಾಲ್ಲೂಕು ಕೇಂದ್ರಕ್ಕೆ ಅರ್ಹವೆಂಬುದನ್ನು ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.
 
ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬಂದು ಹತ್ತಾರು ವರ್ಷ ಕಳೆದರೂ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಅನುದಾನ ನೀಡುವಲ್ಲಿ ವಿಫಲವಾಗಿದೆ. ಮೀಸಲು ಕ್ಷೇತ್ರವಾಗಿರುವ ದೇವನಹಳ್ಳಿ ತಾಲ್ಲೂಕಿನಲ್ಲಿ ಅಭಿವೃದ್ಧಿ ಎಂಬುದು ಕುಂದಿತವಾಗಿದೆ. ವಿಜಯಪುರ ಮತ್ತು ದೇವನಹಳ್ಳಿ ಎರಡು ಪುರಸಭೆ ಹೊಂದಿರುವ ತಾಲ್ಲೂಕಿನಲ್ಲಿ ಈವರೆವಿಗೂ ಒಳಚರಂಡಿ ವ್ಯವಸ್ಥೆಯಾಗಿಲ್ಲ. ಸಾವಿರಾರು ಕೋಟಿ ತಾಲ್ಲೂಕಿನ ತೆರಿಗೆ ಹಣವನ್ನು ಸಂಗ್ರಹಿಸುವ ‘ಬಯಪಾ’ದಿಂದ ಬಿಡಿಗಾಸು ಅನುದಾನ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಬಂದಿಲ್ಲ ಎಂದರು.
 
ದೇವನಹಳ್ಳಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಿ ಎರಡು ವರ್ಷ ಕಳೆದರೂ ಈವರೆವಿಗೂ ಸಂಬಂಧಿಸಿದ ಉಸ್ತುವಾರಿ ಸಚಿವರು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಂಡಿಲ್ಲ, ಸ್ವಕ್ಷೇತ್ರ ಅವರಿಗೆ ಮುಖ್ಯವಾಗಿದೆ. ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬ ಸ್ಥಿತಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ ಎಂದು ಅವರು ಆಕ್ರೋಶ  ವ್ಯಕ್ತಪಡಿಸಿದರು. 
 
ಸೇನೆ ಮುಖಂಡ ಕುರುಬರಹಳ್ಳಿ ನಾಗರಾಜ್‌, ಶ್ರೀನಿವಾಸ್‌ ಗಾಂಧಿ, ಮುನಿಯಪ್ಪ, ರಾಮಮೂರ್ತಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.