ADVERTISEMENT

ತುಂಡಾಗಿ ಬಿದ್ದ ತಂತಿ, ಆಸ್ಪತ್ರೆಗೆ ದಾಖಲು

ಆಟದ ನಡುವೆ ವಿದ್ಯುತ್ ತಂತಿ ಹಿಡಿದ ವಿದ್ಯಾರ್ಥಿಗಳಿಬ್ಬರ ಸ್ಥಿತಿ ಗಂಭೀರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 10:36 IST
Last Updated 7 ಮಾರ್ಚ್ 2017, 10:36 IST
ದೇವನಹಳ್ಳಿ: ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್  ತಂತಿ ತುಂಡಾಗಿ ಕೆಳಗೆ ಬಿದ್ದಿದ್ದ ಸಂದರ್ಭ ಅದನ್ನು ಮುಟ್ಟಿದ ಮಕ್ಕಳಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಪುಟ್ಟಪ್ಪನಗುಡಿ ಬೀದಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ನಡೆದಿದೆ.

ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿ ನಿಖಿಲ್ ಒಂದನೇ ತರಗತಿ ಹಾಗೂ ಮುನೇಗೌಡ 3ನೇ ತರಗತಿ ಎನ್ನಲಾಗಿದೆ. ಸೋಮವಾರ ಮಧ್ಯಾನ್ಹ 1.30ರ ನಂತರ ಶಾಲೆಯಲ್ಲಿ ನೀಡಿದ ಬಿಸಿ ಊಟ ಸೇವಿಸಿದ ವಿದ್ಯಾರ್ಥಿಗಳು ಶಾಲೆಯ ಅಂಗಳದಲ್ಲಿ ಆಟವಾಡುತ್ತಿದ್ದರು.

ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಆಟದ ಮೈದಾನ ಸಮೀಪ ಇರುವ ಗಂಗಮ್ಮ ದೇವಿ ದೇವಸ್ಥಾನ ಆವರಣದಲ್ಲಿದ್ದ ಸಂದರ್ಭದಲ್ಲಿ ತುಂಡಾಗಿ ಹರಿದು ಸೈಜು ಕಲ್ಲುಗಳ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದಿದ್ದಾರೆ. ತಂತಿ ಮುಟ್ಟಿದ ವಿದ್ಯಾರ್ಥಿ ಮುನೇಗೌಡ ಕೆಳಗೆ ಬಿದ್ದು ಒದ್ದಾಡುತ್ತಿರುವ ಸಂದರ್ಭದಲ್ಲಿ ಅಲ್ಲೇ ಇದ್ದ ನಿಖಿಲ್  ತಂತಿಯನ್ನು ಬೇರ್ಪಡಿಸಿ ರಕ್ಷಿಸಲು ಮುಂದಾದ ಸಂದರ್ಭದಲ್ಲಿ ತಾನು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದಾನೆ.

ಇದನ್ನು ಕಂಡ ಇತರೆ ವಿದ್ಯಾರ್ಥಿಗಳು ತಕ್ಷಣ ಶಾಲೆಯಲ್ಲಿನ ಶಿಕ್ಷಕರಿಗೆ ಮಾಹಿತಿ ನೀಡಿದ ನಂತರ ಎಚ್ಚೆತ್ತುಕೊಂಡ ಶಿಕ್ಷಕರು ಕಟ್ಟಿಗೆ ಮೂಲಕ ವಿದ್ಯುತ್ ತಂತಿಯನ್ನು ಬೇರ್ಪಡಿಸಿ ಅಸ್ವಸ್ಥಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು: ಅವಘಡ ಸಂಭವಿಸಿದ ತಕ್ಷಣ ಶಾಲೆಯಲ್ಲಿನ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ನೆರವಾಗಿದ್ದ ಶಿಕ್ಷಕಿಯರು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಒಂದೆರಡು ಶಿಕ್ಷಕಿಯರನ್ನು ಹೊರತುಪಡಿಸಿ ಎಲ್ಲರೂ ಬೆಂಗಳೂರು ಕಡೆಗೆ ದೌಡಾಯಿಸಿದರು. ರಾತ್ರಿ ಹೊತ್ತಿನಲ್ಲಿ ಇಬ್ಬರು ಚಿಕಿತ್ಸೆಗೆ ಸ್ಪಂದಿಸಿದ್ದಾಗಿ ವೈದ್ಯರು ತಿಳಿಸಿದರು.
 
‘ಬೆಸ್ಕಾಂ’ ವಿರುದ್ಧ ಆಕ್ರೋಶ
ಮೈದಾನ ವ್ಯಾಪ್ತಿಯಲ್ಲಿ 11 ಕೆ.ವಿ. ಮತ್ತು 240 ವೋಲ್ಟೆಜ್ ಸೆಕೆಂಡರಿ ವಿದ್ಯುತ್ ಎರಡು ಮಾರ್ಗವಿದೆ. ವಿದ್ಯುತ್ ತಂತಿ ಹರಿದು ಬಿದ್ದಿರುವುದು ಯಾವ ಮಾರ್ಗದಿಂದ ಎಂಬುದು ಗೊತ್ತಿಲ್ಲ. ಕಳೆದ ಹದಿನೈದು ದಿನಗಳಿಂದ ವಿದ್ಯುತ್ ತಂತಿ ಕಿತ್ತು ಬಿದ್ದಿರುವುದನ್ನು ಸರಿಪಡಿಸುವಂತೆ ಶಾಲೆಯ ಶಿಕ್ಷಕರು ಮತ್ತು ಪೋಷಕರು ‘ಬೆಸ್ಕಾಂ’ ಇಲಾಖೆಗೆ ತಿಳಿಸಿದ್ದರೂ ನಿಷ್ಕಾಳಜಿ ತೋರಿಸಲಾಗಿದೆ. 
 
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ವಿದ್ಯುತ್ ಮಾರ್ಗದಲ್ಲಿ ಅಳವಡಿಸಿರುವ ವಿದ್ಯುತ್ ತಂತಿ ಮತ್ತು ಮುರಿದು ಶಿಥಿಲ ವ್ಯವಸ್ಥೆಯಲ್ಲಿರುವ ಕಂಬಗಳನ್ನು ಸ್ಥಳಾಂತರ ಮಾಡಲು ಇಲಾಖೆ ಮುಂದಾಗಿಲ್ಲ, ಮಕ್ಕಳ ಭವಿಷ್ಯ ಯಾವ ರೀತಿ, ಇದಕ್ಕೆ ಜವಾಬ್ದಾರಿ ‘ಬೆಸ್ಕಾಂ’ ಇಲಾಖೆ  ಸರಿ ಎನ್ನಲಾಯಿತು.

ತಿಂಗಳ ಹಿಂದೆ ಶಾಲೆ ಆವರಣದಲ್ಲಿರುವ ಶತಮಾನದ ಶಿಥಿಲಗೊಂಡಿರುವ ಮರ ಮತ್ತು ವಿದ್ಯುತ್ ಮಾರ್ಗದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸಮಗ್ರ ವರದಿಯಿಂದ ಎಚ್ಚೆತ್ತುಕೊಂಡಿದ್ದರೆ ಇಂತಹ ಅವಘಡ ಸಂಭವಿಸುತ್ತಿರಲಿಲ್ಲ ಎಂಬುದು ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರ ಆಕ್ರೋಶವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.