ADVERTISEMENT

ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:44 IST
Last Updated 27 ಮೇ 2017, 9:44 IST

ದೊಡ್ಡಬಳ್ಳಾಪುರ:ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ನಗರಕ್ಕೆ ಅಂಟಿಕೊಂಡೇ ಇರುವುದರಿಂದ  ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ತಾಲ್ಲೂಕಿನ ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಗ್ರಾಮದ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಆ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಎರಡು ವಾರಗಳಲ್ಲಿ ಎರಡು ಆಟೋಗಳ ವ್ಯವಸ್ಥೆ ಮಾಡಿ, ಕಸವನ್ನು ನಗರಸಭೆಯ ಕಸದ ವಿಲೇವಾರಿ ಘಟಕದಲ್ಲಿ ಹಾಕಿಸಲಾಗುವುದು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ತಾಲ್ಲೂಕು ಕಚೇರಿಯಲ್ಲಿ ಪಹಣಿಗಳನ್ನು ಗುರುತಿಸಲಾಗುವುದು. ಸೂಕ್ತ ಜಮೀನುಗಳ ಮಾರ್ಪಾಡು ಮಾಡಿ ನಿವೇಶನ ಒದಗಿಸಲಾಗುವುದು. ಪಡಿತರ  ಕಾರ್ಡ್ ಹಾಗೂ ಪಿಂಚಣಿ ಅದಾಲತ್ ವಿಚಾರವಾಗಿ ಮುಂದಿನ ವಾರ ಗ್ರಾಮಸ್ಥರು, ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸಬೇಕು ಎಂದರು.

ADVERTISEMENT

ಗ್ರಾಮಸ್ಥರ ಪಡಿತರ ಕಾರ್ಡ್‌ಗಳ ಹಾಗೂ ಪಿಂಚಣಿ ಕುರಿತ ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷೆ ನಾಗಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ಸದಸ್ಯೆ ಅನ್ನಪೂರ್ಣ ಮಲ್ಲಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಅಶ್ವತ್ಥರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.