ADVERTISEMENT

ದೊಡ್ಡಬಳ್ಳಾಪುರ: ಇಂದು ತಾ.ಪಂ. ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 10:11 IST
Last Updated 24 ಜುಲೈ 2014, 10:11 IST

ದೊಡ್ಡಬಳ್ಳಾಪುರ: ತಾಲ್ಲೂಕು ಪಂಚಾ­ಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ­ಗಾಗಿ ಗುರುವಾರ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲ 12 ಸದಸ್ಯರಿಗೆ ಬುಧವಾರ ವಿಪ್‌ ಜಾರಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ನಾರಾಯಣ­ಸ್ವಾಮಿ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರತ್ನಮ್ಮ ಮುನಿಯಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ದೀಪಾಕೃಷ್ಣಮೂರ್ತಿ ಅವರು ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಇವ­ರಿಗೆ ಮತ ಹಾಕುವಂತೆ ವಿಪ್‌ನಲ್ಲಿ ತಿಳಿಸ­ಲಾಗಿದೆ. ವಿಪ್‌ ಉಲ್ಲಂಘನೆ ಮಾಡುವ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ­ಲಾಗುವುದು ಎಂದರು.

ಪಕ್ಷ ವಿರೋಧಿ ಹಾಗೂ ಪಕ್ಷಾಂತರ ಆರೋಪದ ಮೇಲೆ ಅಮಾನತು ಆಗಿದ್ದ ಐವರು ತಾಲ್ಲೂಕು ಪಂಚಾಯಿತಿ ಸದಸ್ಯರ ಪೈಕಿ ಇಬ್ಬರು ಮತ್ತೆ ಬಿಜೆಪಿಗೆ ಮರಳಿದ್ದಾರೆ.  ವಿಪ್‌ ವಿರುದ್ಧವಾಗಿ ಸದಸ್ಯರು ನಡೆದುಕೊಂಡರೆ ಪಕ್ಷಾಂತರ ಕಾಯ್ದೆ ಪ್ರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳು ವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ  ಪ್ರಹ್ಲಾದ್‌ ಜೋಶಿ ಸೂಚನೆ ನೀಡಿದ್ದಾರೆ ಎಂದರು.

ಐದಕ್ಕೆ ಕುಸಿದ ಬಿಜೆಪಿ ಸಂಖ್ಯೆ: ತಾ.ಪಂ.ನಲ್ಲಿ ಅಧಿಕೃತವಾಗಿ 12 ಸದ­ಸ್ಯರು ಬಿಜೆಪಿಯಿಂದ ಆಯ್ಕೆಯಾಗಿ­ದ್ದಾರೆ. ಆದರೆ, ವಿಧಾನಸಭಾ ಚುನಾ­ವಣೆ­ಯಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರು ಆಯ್ಕೆಯಾದ ನಂತರ ತಾಲ್ಲೂಕಿನಲ್ಲಿ ನಡೆದ ರಾಜಕೀಯ ಬದಲಾವಣೆ ಹಾಗೂ ಬಿಜೆಪಿ ಮುಖಂಡರಲ್ಲಿನ ಗುಂಪುಗಾರಿಕೆಯಿಂದಾಗಿ ತಾಲ್ಲೂಕು ಪಂಚಾಯಿತಿಯಲ್ಲಿ ವಾಸ್ತವವಾಗಿ ಬಿಜೆಪಿ ಸದಸ್ಯರ ಸಂಖ್ಯೆ ಐದಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿಯೇ 5 ಸದಸ್ಯರನ್ನು ಹೊಂದಿರುವ ಜೆಡಿಎಸ್‌ ಪಕ್ಷದ ಸದಸ್ಯರ ಬೆಂಬಲದೊಂದಿಗೆ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿ ಮುಂದಾಗಿದೆ.

ಜುಲೈ 5ರಂದು ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ನಿಂದ 9 ಸದಸ್ಯರು ಮಾತ್ರ ಹಾಜರಾಗಿದ್ದರು. ಇದರಿಂದ ಬಹುಮತದ ಕೊರತೆ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಸದ್ಯದ  ಮಾಹಿತಿಗಳ ಪ್ರಕಾರ ಗುರುವಾರ ನಡೆಯುವ ಚುನಾವಣೆಯಲ್ಲೂ ಎರಡು ಗುಂಪುಗಳಲ್ಲೂ(ಕಾಂಗ್ರೆಸ್‌–ಬಿಜೆಪಿ, ಜೆಡಿಎಸ್‌–ಬಿಜೆಪಿ) ತಲಾ 10 ಜನ ಸದಸ್ಯರ ಸಮ ಬಲ ಇರುವ ಹಿನ್ನೆಲೆಯಲ್ಲಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.