ADVERTISEMENT

ನಗರೋತ್ಥಾನ: ಕೇಂದ್ರದಿಂದ ಅನುದಾನ ಕಡಿಮೆ

ಸೋಮೇಶ್ವರ ಬಡಾವಣೆ ಸೇರಿದಂತೆ ವಿವಿಧೆಡೆಗಳಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 7:16 IST
Last Updated 22 ಮಾರ್ಚ್ 2018, 7:16 IST
ಕಾಮಗಾರಿಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು
ಕಾಮಗಾರಿಗಳಿಗೆ ಶಾಸಕ ಟಿ.ವೆಂಕಟರಮಣಯ್ಯ ಶಂಕುಸ್ಥಾಪನೆ ನೆರವೇರಿಸಿದರು   

ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತದಲ್ಲಿ ಇದ್ದಾಗ ಕೋಟಿಗಟ್ಟಲೆ ಹಣವನ್ನು ನಗರೋತ್ಥಾನ ಯೋಜನೆಯಲ್ಲಿ ನಗರದ ಅಭಿವೃದ್ಧಿಗೆ ಹಣ ನೀಡುತಿತ್ತು. ಆದರೆ ಈಗಿನ ಸರ್ಕಾರ ನಗರೋತ್ಥಾನಕ್ಕೆ ಹಣ ನಿಲ್ಲಿಸಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರದ 28ನೇ ವಾರ್ಡ್‌ನ ಸೋಮೇಶ್ವರ ಬಡಾವಣೆ ಸೇರಿದಂತೆ ವಿವಿಧೆಡೆಗಳಲ್ಲಿ ಬುಧವಾರ ಕಾಮಗಾ
ರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೇಂದ್ರದಿಂದ ನಗರಸಭೆಗೆ ಕೇವಲ ಒಂದು ಕೋಟಿ ರೂಪಾಯಿ ಮಾತ್ರ ಅನುದಾನ ಬರುತ್ತದೆ ಎಂದರು.

ADVERTISEMENT

ಇದರಿಂದ ನಗರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಾಗ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿದ್ದಾರೆ. ಹೀಗಾಗಿ ನಗರದಲ್ಲಿ ಅಭಿವೃದ್ಧಿ ಕೆಲಸ ನಡೆಯಲು ಅನುಕೂಲವಾಗಿದೆ ಎಂದರು.

ನಗರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ನಗರಸಭಾ ಸದಸ್ಯರನ್ನು ಆಹ್ವಾನಿಸಿಯೇ ಮಾಡಲಾ
ಗುತ್ತಿದೆ. ಅಭಿವೃದ್ದಿ ಸಹಿಸದ ವಿರೋಧ ಪಕ್ಷದವರು ವಿನಾಕಾರಣ ಆರೋಪ ಮಾಡುತ್ತಾ ಇದು ಮುಖ್ಯಮಂತ್ರಿಗಳ ಅನುದಾನದಲ್ಲಿ ಬರುವುದಿಲ್ಲ ಎಂದು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರ ಫಲವಾಗಿ ಅವರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ₹ 25 ಕೋಟಿ ವಿಶೇಷ ಅನುದಾನ ಕ್ಷೇತ್ರಕ್ಕೆ ಬಂದಿದೆ. ನೆರೆಯ ಯಾವುದೇ ತಾಲ್ಲೂಕುಗಳಿಗೆ ಇದನ್ನು ನೀಡಿಲ್ಲ. ಆದರೆ ಇದು ನಗರೋತ್ಥಾನದ ಅನುದಾನ ಎಂದು ಕೆಲ ನಗರಸಭಾ ಸದಸ್ಯರು ಬಿಂಬಿಸಿ ಅನಗತ್ಯವಾಗಿ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುವುದು ಸರಿಯಲ್ಲ ಎಂದರು.

ಕೆಲವು ಯೋಜನೆಗಳು ಈ ಹಿಂದಿನ ಅವಧಿಯಲ್ಲಿ ಆಗಿದ್ದು ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಗರದ ಹೊರವಲಯದಲ್ಲಿ ನಿರ್ಮಾಣ
ವಾಗುತ್ತಿರುವ ಚತುಷ್ಪಥ ರಸ್ತೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ 50 ಪಾಲುದಾರಿಕೆ ಹೊಂದಿವೆ ಎಂದರು.

‘ನನ್ನ ಅವಧಿಯಲ್ಲಿ ಕಾಮಗಾರಿಗಳು ಆರಂಭವಾಗಿವೆ. ಇನ್ನು ಡಿ.ಕ್ರಾಸ್ ಹಾಗೂ ಬಾಶೆಟ್ಟಿಹಳ್ಳಿಯ ಮೇಲ್ಸೇತುವೆಗಳೂ ನನ್ನ ಅವಧಿಯಲ್ಲಿಯೇ ಆರಂಭವಾಗಿವೆ. ತಾಯಿ ಮತ್ತು ಮಗು ಆಸ್ಪತ್ರೆ  ನನ್ನ ಅವಧಿಯಲ್ಲಿಯೇ ಆಗಿರುವುದನ್ನು ದಿನಾಂಕ ಸಹಿತ ನಿರೂಪಿಸಬಲ್ಲೆ’ ಎಂದು ತಿಳಿಸಿದರು.

ಸಾಮಾನ್ಯ ಅನುದಾನ: ‘ಇಡೀ ರಾಜ್ಯದ ಎಲ್ಲ ನಗರಸಭೆಗಳಿಗೂ ನೀಡಿರುವಂತೆ ಅನುದಾನವನ್ನು ನಮ್ಮ ನಗರಸಭೆಗೂ ನೀಡಲಾಗಿದೆ. ಆದರೆ ಶಾಸಕರು ದೊಡ್ಡ
ಬಳ್ಳಾಪುರ ನಗರಸಭೆಗೆ ಮಾತ್ರ ವಿಶೇಷ ಅನುದಾನ ತರಲಾಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ’ ಎಂದು ದೂರಿರುವ  ರೋಜಿಪುರದ 27ನೇ ವಾರ್ಡ್‌ನ ಸದಸ್ಯೆ ಸುಶೀಲರಾಘವ, ಎಸ್ಸಿಪಿ, ಎಸ್‌ಟಿಪಿ  ಅನುದಾನವನ್ನೂ ಶಾಸಕರು ನಮ್ಮ ಅನುದಾನ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದರು.

ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ಪೌರಾಯುಕ್ತ ಆರ್.ಮಂಜುನಾಥ್, ನಗರಸಭೆ ಕಾರ್ಯಪಾಲಕ ಎಂಜಿನಿಯರ್ ಶೇಕ್‌ ಫಿರೋಜ್, ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಕೆ.ಜಿ.ಅಶೋಕ್‌, ಉಪಾಧ್ಯಕ್ಷ ಕೆ.ಎಸ್‌. ರವಿಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಸ್‌.ದಯಾನಂದ್‌,  ಭೂ ನ್ಯಾಯಮಂಡಳಿ ಸದಸ್ಯ ಡಿ.ವಿ.ಅಶ್ವತ್ಥಪ್ಪ, ಮುಖಂಡರಾದ ಎಚ್‌.ಪಿ.ಸೋಮನಾಥ್‌, ಜಿ.ರಾಮಕೃಷ್ಣ, ನಗರಸಭೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.