ADVERTISEMENT

ನೀರಿನ ಸಮಸ್ಯೆ: ಗ್ರಾ.ಪಂ ವಿರುದ್ಧ ಆಕ್ರೋಶ

ಕೆಟ್ಟು ಹೋಗಿರುವ ಕೊಳವೆ ಬಾವಿಗಳು, ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 6:13 IST
Last Updated 21 ಫೆಬ್ರುವರಿ 2017, 6:13 IST
ನೀರಿನ ಸಮಸ್ಯೆ: ಗ್ರಾ.ಪಂ ವಿರುದ್ಧ ಆಕ್ರೋಶ
ನೀರಿನ ಸಮಸ್ಯೆ: ಗ್ರಾ.ಪಂ ವಿರುದ್ಧ ಆಕ್ರೋಶ   

ವಿಜಯಪುರ : ಕೊಳವೆಬಾವಿಗಳು ಕೆಟ್ಟುಹೋಗಿ ತಿಂಗಳಾಗುತ್ತಿದೆ. ಕೊಳವೆಬಾವಿಗಳಿಂದ ಪಂಪು ಮೋಟಾರುಗಳನ್ನು ಮೇಲೆತ್ತಿ ಒಂದು ತಿಂಗಳು ಕಳೆದಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಇದುವರೆಗೂ ರಿಪೇರಿ ಮಾಡಿಸಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.

ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರ ಗ್ರಾಮದಲ್ಲಿ ಸುಮಾರು 250 ಕ್ಕೂ ಹೆಚ್ಚು ಕುಟುಂಬಗಳಿವೆ. 500 ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಗ್ರಾಮದಲ್ಲಿ ಎರಡು ಕೊಳವೆಬಾವಿಗಳಿವೆ. ಒಂದು ಕೊಳವೆಬಾವಿಯಲ್ಲಿನ ಪಂಪು ಮೋಟಾರು ಮೇಲೆತ್ತಿ ರಿಪೇರಿಗೆ ಕಳುಹಿಸಿದ್ದಾರೆ. ಇನ್ನೊಂದು ಕೊಳವೆಬಾವಿಯಲ್ಲಿನ ಪಂಪು ಮೋಟಾರು ಮೇಲೆತ್ತಿಲ್ಲ.

ಗ್ರಾಮ ಪಂಚಾಯಿತಿಯಿಂದ ಒಂದು ವಾರದ ಹಿಂದೆ ಟ್ಯಾಂಕರಿನಲ್ಲಿ ನೀರು ಕಳುಹಿಸಿದ್ದರು. ಇದುವರೆಗೂ ಬಂದಿಲ್ಲ. ಒಂದು ಮನೆಗೆ ಕೇವಲ ನಾಲ್ಕು ಬಿಂದಿಗೆ ಮಾತ್ರ ನೀರು ಕೊಡುತ್ತಿದ್ದಾರೆ, ದನಕರುಗಳಿಗೆ ನೀರಿಲ್ಲದೆ ಕಂಗಾಲಾಗುವಂತಿದೆ. ನೆರೆಯ ಚಂದೇನಹಳ್ಳಿ ಗ್ರಾಮದಿಂದ ಪೈಪ್ ಲೈನ್ ಸಂಪರ್ಕ ಕಲ್ಪಿಸಿ ನೀರು ಪಡೆದುಕೊಳ್ಳುತ್ತಿದ್ದೇವೆ. ಕೆಲವೊಮ್ಮೆ ಚಂದೇನಹಳ್ಳಿ ಗ್ರಾಮದಿಂದ ನೀರು ಬಾರದಿದ್ದಾಗ ತುಂಬಾ ಹಿಂಸೆ ಆಗುತ್ತಿದೆ.

ತೋಟಗಳ ಬಳಿ ನಿರ್ಮಾಣ ಮಾಡಿರುವ ಕೃಷಿ ಹೊಂಡಗಳ ಬಳಿಗೆ ಹೋಗಿ ನೀರು ತರಬೇಕು. ಬೇಸಿಗೆಯಾಗಿರುವುದರಿಂದ ರೈತರು ತಮ್ಮ ತೋಟಗಳಿಗೆ ನೀರು ಹಾಯಿಸಲು ಪ್ರಯಾಸ ಪಡುತ್ತಿದ್ದು ನೀರು ಬಿಡುತ್ತಿಲ್ಲ. ಕಾಡಿಬೇಡಿ ನೀರು ಹಿಡಿದುಕೊಂಡು ಬರಬೇಕು. ಇಲ್ಲಾಂದ್ರೆ ಜೀವನಕ್ಕಾಗಿ ನಂಬಿಕೊಂಡಿರುವ ದನಕರುಗಳಿಗೆ ನೀರಿಲ್ಲದೆ ಹಾಲು ಸರಿಯಾಗಿ ಉತ್ಪಾದನೆಯಾಗುತ್ತಿಲ್ಲ. ಇದರಿಂದ ಜೀವನಕ್ಕೂ ಕಷ್ಟಕವಾಗ್ತಿದೆ. ಶಾಲೆಗೆ ಹೋಗುವ ಮಕ್ಕಳು ಕೂಡಾ ನೀರಿಗಾಗಿ ಬಿಂದಿಗೆಗಳನ್ನು ಹಿಡಿದು ಕಾಯುವಂತಾಗಿದೆ, ಕೃಷಿ ಹೊಂಡಗಳ ಬಳಿಯಲ್ಲಿ ಹೋಗಿ ಎಲ್ಲಿ ನೀರಿಗೆ ಬೀಳುತ್ತಾರೊ ಎನ್ನುವ ಭಯ ಕಾಡುತ್ತಿದೆ. ಆದರೆ ನಮಗೆ ವಿಧಿಯಿಲ್ಲ.

ಕೂಲಿ ಕೆಲಸ ಮಾಡುವುದನ್ನು ಬಿಟ್ಟು ನೀರಿಗಾಗಿ ದಿನಪೂರ್ತಿ ಕಾಯಬೇಕು.  ಟ್ಯಾಂಕುಗಳ ಮುಂದೆ ಬಿಂದಿಗೆಗಳನ್ನು ಸರತಿ ಸಾಲಿನಲ್ಲಿಟ್ಟು ಕಾಯಬೇಕು. ನೀರು ಹಿಡಿಯುವಾಗ ಪ್ರತಿನಿತ್ಯ ಜಗಳ ಮಾಡಿಕೊಳ್ಳಬೇಕಾಗಿದೆ.

ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮೋಟಾರು ಪಂಪುಗಳು ತೆಗೆದಿರುವ ಕೊಳವೆಬಾವಿಯ ಬಳಿಯಲ್ಲಿ ಪೈಪುಗಳು ತುಕ್ಕುಹಿಡಿಯುತ್ತಿವೆ.  ಕೇಬಲ್ ಒಣಗುತ್ತಿದೆ. ಅದನ್ನು ಭದ್ರಪಡಿಸುವ ಕೆಲಸ ಮಾಡಿಲ್ಲ.

ಟ್ಯಾಂಕರುಗಳಲ್ಲಿ ನೀರು ಕೊಡುತ್ತಿದ್ದವರನ್ನು ಕೇಳಿದರೆ ಪಂಚಾಯಿತಿಯಿಂದ ನೀರು ಸರಬರಾಜು ಮಾಡಿರುವ ಹಣ ಪಾವತಿಸಿಲ್ಲ. ಆದ್ದರಿಂದ ಮತ್ತೆ ನೀರು ಸರಬರಾಜು ಮಾಡಲು ಆಗದು ಎಂದು ಹೇಳುತ್ತಾರೆ.

ಹೀಗೆಂದು ಗ್ರಾಮದ ಮುಖಂಡ ನಂಜುಂಡಪ್ಪ, ಶಿವಕುಮಾರ್, ಮಮತಾ, ರತ್ನಮ್ಮ , ಬಚ್ಚಮ್ಮ, ನರಸಮ್ಮ, ನಾರಾಯಣಮ್ಮ, ಅನಿತಾ, ಮುಂತಾದವರು ಆರೋಪಿಸಿದ್ದಾರೆ.
–ಎಂ. ಮುನಿನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.