ADVERTISEMENT

ನೀರು ಪೂರೈಕೆಗೆ ಸ್ವಂತ ಖರ್ಚಿನಲ್ಲಿ ಕೊಳವೆ ಬಾವಿ

​ಪ್ರಜಾವಾಣಿ ವಾರ್ತೆ
Published 4 ಮೇ 2017, 9:45 IST
Last Updated 4 ಮೇ 2017, 9:45 IST

ಸಾತನೂರು (ಕನಕಪುರ): ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸ್ವಂತ ಜಮೀನಿನಲ್ಲಿ ಸ್ವಂತ ಖರ್ಚಿನಿಂದ ಕೊಳವೆ ಬಾವಿ ಕೊರೆಸುತ್ತಿರುವುದಾಗಿ ಕಾಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕುಮಾರ್‌ ಹೇಳಿದರು.

ತಾಲ್ಲೂಕಿನ  ಸಾತನೂರು ಹೋಬಳಿ ಕಾಡಳ್ಳಿ ಗ್ರಾಮ ಪಂಚಾಯಿತಿಯ ಹಲಸೂರು ಗ್ರಾಮದಲ್ಲಿ ಕೊಳವೆ ಬಾವಿಗಳ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಾಗೂ ಎಲ್ಲೂ ನೀರಿನ ಸೌಕರ್ಯ ದೊರೆಯದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.

ಈ ಗ್ರಾಮವು ಸುಮಾರು 2 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಈಗಾಗಲೆ 5 ಕೊಳವೆ ಬಾವಿಗಳಿದ್ದು ಅವುಗಳಲ್ಲಿ 3 ವಿಫಲವಾಗಿವೆ. 2 ಮಾತ್ರ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡುತ್ತಿವೆ. ಅವುಗಳಲ್ಲಿನ ನೀರು ಗ್ರಾಮದ 5 ವಾರ್ಡುಗಳಿಗೆ ಸಾಕಾಗುತ್ತಿಲ್ಲ ಎಂದರು.

ಪಂಚಾಯಿತಿ ಅಧ್ಯಕ್ಷರಾಗಿ ಬೇಸಿಗೆಯಲ್ಲಿ ಗ್ರಾಮದ ಜನತೆಗೆ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ಸ್ವಂತ ಜಮೀನಿನಲ್ಲಿ ಬೋರ್‌ ಕೊರೆಸಲಾಗುತ್ತಿದೆ ಎಂದರು.

ಗ್ರಾಮದ ಜನತೆಯ ಉಪಯೋಗಕ್ಕೆ ಮೊದಲು ಒಂದು ಕೊಳವೆ ಬಾವಿ ತೋಡಿಸಿದ್ದು ಅದು ವಿಫಲವಾದ ಮೇಲೆ ಮತ್ತೆ ಕೊರೆಸಲಾಗುತ್ತಿದೆ, 800 ಅಡಿಯಷ್ಟು ಕೊರೆಸಿದ್ದು ಸುಮಾರು 2.5 ಇಂಚಿನಷ್ಟು ನೀರು ಬಂದಿದೆ, ಹಳೆಯ ಕೊಳವೆಬಾವಿ ಜತೆಗೆ ಇದನ್ನು ಜೋಡಿಸಿಕೊಂಡು ಗ್ರಾಮದ ಜನತೆಗೆ ನೀರು ಪೂರೈಕೆ ಮಾಡುವುದಾಗಿ ಹೇಳಿದರು.

ಅಧ್ಯಕ್ಷೆ ಪತಿ ಕುಮಾರ್‌ ಮಾತನಾಡಿ, ಕುಡಿಯುವ ನೀರಿಗೆ ಖಾಸಗಿ ಕೊಳವೆ ಬಾವಿಯನ್ನು ವಶಕ್ಕೆ ಪಡೆದು ಗ್ರಾಮಕ್ಕೆ ನೀರು ಕೊಡುವಂತೆ ಜಿಲ್ಲಾಡಳಿತ ತಿಳಿಸಿದೆ, ಸದ್ಯಕ್ಕೆ ತಮ್ಮ ಜಮೀನಿನಲ್ಲಿರುವ ಕೊಳವೆಬಾವಿಯ ನೀರನ್ನೇ ಗ್ರಾಮಕ್ಕೆ ಉಚಿತವಾಗಿ ಕೊಡುತ್ತಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.