ADVERTISEMENT

ಪೋಷಕರ ಕನಸು ನನಸು ಮಾಡಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:52 IST
Last Updated 8 ಜುಲೈ 2017, 10:52 IST

ಆನೇಕಲ್‌: ಪೋಷಕರು ತಮ್ಮ ಮಕ್ಕಳ ಬಗ್ಗೆ ಬಹುದೊಡ್ಡ ಕನಸುಗಳನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅವರ ಕನಸುಗಳನ್ನು ಸಾಕಾರ ಮಾಡಲು ಶ್ರಮಿಸಬೇಕು ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ನುಡಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಇನ್ನರ್‌ವೀಲ್‌ ಕ್ಲಬ್‌ ಬೆಂಗಳೂರು ದಕ್ಷಿಣ ವತಿಯಿಂದ ಪುನರ್‌ನಿರ್ಮಿಸಲಾದ ಶತಮಾನದ ಪಾರಂಪರಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಿಂದ ಒಂದು ದೇಶದ ಅಭಿವೃದ್ಧಿ ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಮೈಸೂರು ಸಂಸ್ಥಾನದ ರಾಜರಾಗಿದ್ದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಅವರಿಂದ 1915ರಲ್ಲಿ ಉದ್ಘಾಟನೆಗೊಂಡಿದ್ದ ಪಾರಂಪರಿಕ ಶಾಲಾ ಕಟ್ಟಡವನ್ನು ಪುನರ್‌ ಉದ್ಘಾಟಿಸಲು ಅವಕಾಶ ದೊರೆತಿರುವುದು ಸಂತಸದ ವಿಚಾರ. ಈ ಶಾಲೆಯು ಉತ್ತಮವಾಗಿ ಅಭಿವೃದ್ಧಿ ಹೊಂದಲಿ. ಶತಮಾನದ ಇತಿಹಾಸವನ್ನು ಮರುಕಳಿಸುವಂತೆ ಆಗಲಿ ಎಂದರು.

ADVERTISEMENT

ಶಾಸಕ ಬಿ.ಶಿವಣ್ಣ ಮಾತನಾಡಿ ಸರ್ಕಾರ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿದೆ. ಸರ್ಕಾರದ ಜೊತೆಗೆ ರೋಟರಿ, ಲಯನ್‌ ಕ್ಲಬ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದರು.

ಶಿಥಿಲವಾಗಿದ್ದ ಹಳೆಯ ಕಟ್ಟಡಕ್ಕೆ ಇನ್ನರ್‌ವೀಲ್‌ ಕ್ಲಬ್‌ ವತಿಯಿಂದ ಹೊಸ ರೂಪ ನೀಡಿರುವುದು ಅತ್ತಿಬೆಲೆ ಸರ್ಕಾರಿ ಶಾಲೆಗೆ ವರದಾನವಾಗಿದೆ. ಶತಮಾನ ಕಳೆದರೂ ಕಟ್ಟಡ ಗಟ್ಟಿಮುಟ್ಟಾಗಿರುವುದು ವಿಶೇಷ. ಉಪಯೋಗಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದ ಕಟ್ಟಡವನ್ನು ಸುಮಾರು ₹40 ಲಕ್ಷ ವೆಚ್ಚದಲ್ಲಿ ಪುನರ್‌ನಿರ್ಮಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅರ್ಪಣೆ ಮಾಡಿರುವುದು ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ ಎಂದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹಲವಾರು ಸಂಘ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ನೆರವನ್ನು ಆನೇಕಲ್‌ ತಾಲ್ಲೂಕಿನಲ್ಲಿ ಬಳಸಿಕೊಳ್ಳಲಾಗಿದೆ. ಈ ಮೂಲಕ ಎಲ್ಲಾ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಲಾಗುವುದು. ಉಳ್ಳವರು ಸೇವಾ ಚಟುವಟಿಕೆಗಳಿಗೆ ಉದಾರವಾಗಿ ದಾನ ನೀಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಇನ್ನರ್‌ವೀಲ್‌ ಕ್ಲಬ್‌ನ ಅಧ್ಯಕ್ಷೆ ರೇಖಾ ಶ್ರೀಧರ್ ಮಾತನಾಡಿ ಕ್ಲಬ್‌ ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ನೆನಪಿನಲ್ಲಿ ಉಳಿಯುವಂತಹ ಸೇವಾ ಕಾರ್ಯವನ್ನು ಮಾಡಬೇಕೆಂಬ ಮಹದಾಸೆಯಿತ್ತು ಎಂದರು. ಈ ಮೂಲಕ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಲಾಗಿದೆ. ಗ್ರಂಥಾಲಯ, ಪ್ರಯೋಗಾಲಯ, ಗಣಕ ಕೊಠಡಿ ಮತ್ತಿತರ ಸೌಲಭ್ಯಗಳು ಶಾಲೆಯಲ್ಲಿ ದೊರೆಯುತ್ತಿದ್ದು ಈ ಸರ್ಕಾರಿ ಶಾಲೆ ಮಾದರಿ ಶಾಲೆಯಾಗುವಂತಾಗಲಿ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್‌. ರಾಮಮೂರ್ತಿ, ಇನ್ನರ್‌ವೀಲ್ ಜಿಲ್ಲಾ ಅಧ್ಯಕ್ಷೆ ಪದ್ಮಣಿ ನಾಗಚಂದ್ರ, ರೋಟರಿಯ ಅನಂತರಾಜೇ ಅರಸ್, ರೋಟರಿ ಕ್ಲಬ್‌ ಸಾಮಾಜಿಕ ಸೇವಾ ವಿಭಾಗದ ನಿರ್ದೇಶಕ ಬಿ.ಆರ್.ಶ್ರೀಧರ್, ನಾವಿಕ ಸಂಸ್ಥೆಯ ಎಂ.ಕೃಷ್ಣಮೂರ್ತಿ, ಅತ್ತಿಬೆಲೆ–ಸರ್ಜಾಪುರ ರೋಟರಿ ಕ್ಲಬ್ ಅಧ್ಯಕ್ಷ ಅಮರೀಷ್‌ರೆಡ್ಡಿ, ಕ್ರೆಡಾಯ್‌ ಸಂಸ್ಥೆಯ ಸಿಇಓ ನರೇಶ್‌ ಸುವರ್ಣ, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳ, ರೋಟರಿ ಕ್ಲಬ್ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಶಂಕರ್, ಶಾಲಾ ಮುಖ್ಯೋಪಾಧ್ಯಾಯರಾದ ಪದ್ಮಾಮಣಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ವಿಜಯಲಕ್ಷ್ಮೀ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.