ADVERTISEMENT

‘ಪ್ರತಿಯೊಬ್ಬರೂ ಕಲೆ ಉಳಿಸಿ ಬೆಳೆಸಿ’

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 10:55 IST
Last Updated 5 ಜನವರಿ 2017, 10:55 IST

ವಿಜಯಪುರ: ಕಲೆಯೆಂಬುದು ಯಾವುದೇ ಶಾಲೆಗಳಲ್ಲಿ ಕಲಿಯುವಂತಹ ವಿದ್ಯೆಯಲ್ಲ. ಅದು ಸ್ವತಃ ರಕ್ತಗತವಾಗಿ ಬರುವಂತಹ ನೈಸರ್ಗಿಕವಾದ ಕಲೆಯಾಗಿದ್ದು ಇಂತಹ ಪವಿತ್ರವಾದ ಕಲೆಯನ್ನು ಉಳಿಸಿ ಬೆಳೆಸಬೇಕಾದಂತಹ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಬೇಕು ಎಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ರಾಜಗೋಪಾಲ್ ಹೇಳಿದರು.

ಪಟ್ಟಣದ ಕನ್ನಡ ಕಲಾವಿದರ ಸಂಘದ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದರು ಅಸಂಘಟಿತ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜೀವನದಲ್ಲಿನ ಎಲ್ಲ ನೋವನ್ನು ಮರೆತು ಸಮಾಜದಲ್ಲಿನ ಎಲ್ಲ ಜನರಿಗೆ ಮನರಂಜನೆ ಉಂಟು ಮಾಡುವ ಸೇವಾ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಅವರಿಗೆ ಸಿಗಬೇಕಾದಂತಹ ಗೌರವ ಇದುವರೆಗೂ ಸಿಕ್ಕಿಲ್ಲ ಎಂದರು.

ಪುರಸಭಾ ಸದಸ್ಯ ಜೆ.ಎನ್.ಶ್ರೀನಿವಾಸ್ ಮಾತನಾಡಿ, ರಂಗಕಲೆಯೆಂಬುದು ಗ್ರಾಮೀಣ ಪ್ರದೇಶಗಳಿಂದ ಜೀವಂತವಾಗಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಯ ಬೇಕಾದರೆ ಕಲಾಪ್ರಕಾರಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ನಾಟಕ, ಹರಿಕಥೆ, ಸಂಗೀತ ವಾದ್ಯಗಳನ್ನು ನುಡಿಸುವುದು, ಜಾನಪದಕಲೆ, ರಂಗಕಲೆ, ಮುಂತಾ ದವುಗಳಲ್ಲಿ ತೊಡಗಿಸಬೇಕು  ಎಂದರು.

ಹೋಬಳಿಯ ಗೊಬ್ಬರಗುಂಟೆ ಗ್ರಾಮದ ಕಲಾವಿದ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ನಾಯ್ಡು ತಂಡದಿಂದ ನಾಡಗೀತೆ, ರೈತಗೀತೆ, ಹಾಗೂ ಕನ್ನಡಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಾಯಿತು. ಪುರಸಭಾ ಸದಸ್ಯ ವರದರಾಜು, ಮುರಳಿ, ಜನಾರ್ಧನ, ಮಿಠಾಯಿ ವಿಜಯಕುಮಾರ್ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.