ADVERTISEMENT

ಬರಿದಾಗುತ್ತಿರುವ ಕೆರೆ, ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 8:22 IST
Last Updated 12 ಏಪ್ರಿಲ್ 2017, 8:22 IST

ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುವನಹಳ್ಳಿ ಕೆರೆಯ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದರೂ, ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು  ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಗಜೇಂದ್ರ ಆರೋಪಿಸಿದ್ದಾರೆ.

ಒಂದು ವಾರದಿಂದ ಈ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಕೆರೆಯ ಅಸ್ತಿತ್ವಕ್ಕೆ ತೀವ್ರವಾದ ಧಕ್ಕೆ ಉಂಟಾಗುತ್ತಿದೆ. ಪ್ರತಿದಿನ ಹಳ್ಳಿಗಳ ಮೂಲಕ ಕೆರೆ ಅಂಗಳಕ್ಕೆ 15 ರಿಂದ 20 ಲಾರಿಗಳು ಸಂಚರಿಸುತ್ತಿವೆ. ಜೆಸಿಬಿ ಸಹಾಯದಿಂದ ಮಣ್ಣನ್ನು ತುಂಬಲಾಗುತ್ತಿದೆ.

ಬಹುತೇಕ ಲಾರಿಗಳು 12 ರಿಂದ 15 ಚಕ್ರದ ಬೃಹದಾಕಾರದ್ದಾಗಿದ್ದು ಮಣ್ಣಿನ  ಸಾಗಣೆ ಬಗ್ಗೆ ಗಮನಹರಿಸದೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಬೆಂಬಲಿಸುತ್ತಿರುವ ಶಂಕೆಯಿದೆ ಎಂದು ದೂರಿದರು.

ಈ ಮಣ್ಣನ್ನು ಅಲಂಕಾರಿಕ ಹೆಂಚುಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ. ಇತರೆ ಮಣ್ಣುಗಳಿಗಿಂತ ಉತ್ತಮ ಗುಣಮಟ್ಟ ಹೊಂದಿರುವ ಕಾರಣದಿಂದಾಗಿ ಬೇಡಿಕೆ  ಹೆಚ್ಚಾಗಿದೆ. ಯಾರೂ ಕೇಳದೆ ಇರುವುದರಿಂದ ತಡರಾತ್ರಿಯಲ್ಲಿ  ಲಾರಿಗಳು  ರಾಜಾರೋಷವಾಗಿ ಸಾಗಾಣಿಕೆ ಮಾಡುತ್ತಿವೆ.  ಇದರಿಂದ ರಸ್ತೆ ಬದಿ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಲಾರಿಗಳು ಸಂಚಾರ ಮಾಡುವ ರಸ್ತೆಗಳ ಮನೆಗಳ ಆವರಣ ದೂಳುಮಯ ಗೊಂಡಿವೆ.

ಕಳೆದ ವರ್ಷ ಸಮೀಪದ  ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಖರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.  ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಮಣ್ಣು ತೆಗೆಯುತ್ತಿದ್ದ ಕಂಪೆನಿಗೆ ನೋಟಿಸ್ ಜಾರಿ ಮಾಡಿತ್ತು. ಇತ್ತೀಚೆಗೆ ಕೆಲ ಪ್ರಭಾವಿಗಳು ಸುಲಭವಾಗಿ ಹಣ ಗಳಿಸಲು ಮಣ್ಣು ಮಾರಾಟ ಮಾಡುವ ದಂದೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಯಲಿಯೂರು ಗೇಟ್ ನಲ್ಲಿರುವ  ಕೆರೆಯ  ಇಕ್ಕೆಲಗಳಲ್ಲಿ  10 ರಿಂದ 15 ಅಡಿಗಳಷ್ಟು ಆಳ ಕೊರೆದು ಮಣ್ಣನ್ನು ತೆಗೆದಿದ್ದು ಕೆರೆಗೆ ಧಕ್ಕೆಯಾಗುತ್ತಿದೆ ಎಂದು  ಸ್ಥಳೀಯರಾದ ಈಎಸ್.ಮಂಜುನಾಥ್, ವೇಣು ಗೋಪಾಲ್, ಕೃಷ್ಣಪ್ಪ, ಅಶೋಕ್ ಕುಮಾರ್, ಪಿಳ್ಳಪ್ಪ ಅವರು ತಿಳಿಸಿದ್ದಾರೆ.

ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಇಲಾಖೆಯಿಂದ ಯಾರಿಗೂ ಅನುಮತಿ ನೀಡಿಲ್ಲ. ಒಂದು ವೇಳೆ ಮಣ್ಣು ತೆಗೆಯುವುದು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಎಇಇ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT