ADVERTISEMENT

ಬಸ್‌ ಅವ್ಯವಸ್ಥೆಗೆ ಆಕ್ರೋಶ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 10:21 IST
Last Updated 28 ಮಾರ್ಚ್ 2015, 10:21 IST
ದೊಡ್ಡಬಳ್ಳಾಪುರ ಬಸ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗುವ ಬಸ್‌ ಹತ್ತಲು ಮುಗಿದ್ದಿರುವ ವಿದ್ಯಾರ್ಥಿಗಳು
ದೊಡ್ಡಬಳ್ಳಾಪುರ ಬಸ್‌ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗುವ ಬಸ್‌ ಹತ್ತಲು ಮುಗಿದ್ದಿರುವ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ನಗರದ ಹಳೇ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಬೆಳಗಿನ ವೇಳೆಯಲ್ಲಿ  ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ 8.30ರವರೆಗೆ ಕಾದರೂ ಒಂದು  ಬಸ್ ಬಾರದೆ ನಗರದ ಹಳೇ ಬಸ್ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಕಾದು ನಿಂತಿದ್ದ ದೃಶ್ಯ ಕಂಡುಬಂತು. ಬಸ್‌ ಬಾರದೇ ಇರುವಾಗ ದೂರು ನೀಡಿದರೆ ಶಾಸಕರು ಅಧಿಕಾರಿಗಳೊಂದಿಗೆ ಬಸ್‌ ನಿಲ್ದಾಣಕ್ಕೆ ಬಂದು  ಇವತ್ತಿನಿಂದ ಬಸ್‌ಗಳ ಅವ್ಯವಸ್ಥೆ ಸರಿ ಹೋಗಲಿದೆ ಎಂದು ಭರವಸೆ ನೀಡಿ ಹೋಗುತ್ತಾರೆ.  ಒಂದರೆಡು ದಿನ ಕಳೆಯುತ್ತಿದ್ದಂತೆ ಮತ್ತೆ ಅದೇ ಅವ್ಯವಸ್ಥೆ ಎಂದು ವಿದ್ಯಾರ್ಥಿ ಅಕುಲ್ ದೂರಿದರು.

ನಾವು ಹಣ ನೀಡಿಯೇ ಪಾಸ್‌ಗಳನ್ನು ಖರೀದಿಸಿದ್ದೇವೆ. ಹಾಗಾದರೆ ನಾವು ಬೆಂಗಳೂರಿಗೆ ಹೋಗುವುದು ಹೇಗೆ? ಪಾಸ್ ಹೊಂದಿರುವವರನ್ನು ಅಸ್ಪೃಶ್ಯರಂತೆ ಕಾಣುವ ಪ್ರವೃತ್ತಿ ದೂರವಾಗಬೇಕು. ಈಗ ಪರೀಕ್ಷಾ ಸಮಯವಾದ್ದರಿಂದ ಬೆಳಗ್ಗೆ 9.30ಕ್ಕೆ ಕಾಲೇಜಿನ ಬಳಿ ತಲುಪಬೇಕು. ಆದರೆ ಬಸ್‌ಗಳು ಗಂಟೆಗಟ್ಟಲೇ ಕಾದರೂ ಬಾರದೇ ಇದ್ದರೆ ನಾವು ಪರೀಕ್ಷೆ ಬರೆಯುವುದು ಹೇಗೆ ಎನ್ನುತ್ತಾರೆ ವಿದ್ಯಾರ್ಥಿನಿ ಶ್ರೀಲಕ್ಷ್ಮೀ.

‘ವಿದ್ಯಾರ್ಥಿಗಳೇನು ಕುರಿಗಳೆ ?’
ಪಾಸ್ ತೆಗೆದುಕೊಂಡಿರುವುದರಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿಯೇ ಸಂಚರಿಸುವ ಅನಿವಾರ್ಯವಿದೆ. ಗಂಟೆಗಟ್ಟಲೇ ಕಾದು ಬಸವಳಿದು, ಬಸ್ ನಿಲ್ದಾಣಕ್ಕೆ ಬಸ್ ಇನ್ನೂ ಬರುತ್ತಿರುವಾಗಲೇ ಮುಗಿ ಬೀಳುವ ವಿದ್ಯಾರ್ಥಿಗಳು, ಸೀಟು ಹುಡುಕುವ ಧಾವಂತದಲ್ಲಿ ಜಾರಿ ಬಿದ್ದಿರುವ ಉದಾಹರಣೆಗಳಿವೆ. ಚಕ್ರದ ಅಡಿ ಸಿಲುಕುವ ಆತಂಕವಿದೆ.

ಒಂದೇ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳನ್ನು ಕುರಿ ತುಂಬುವ ಹಾಗೆ ಬಸ್‌ನಲ್ಲಿ ತುಂಬುತ್ತಾರೆ. ತೆರಿಗೆ ಕಟ್ಟಿಸಿಕೊಂಡು ದೇಶದ ಪ್ರಜೆಗಳಿಗೆ ಸೌಲಭ್ಯ ನೀಡಬೇಕಾದ ಸರ್ಕಾರದ ಮುಂದೆ ಪ್ರತಿ ಸೌಲಭ್ಯಕ್ಕೂ ಕೈಚಾಚುವ ಪರಿಸ್ಥಿತಿ ಉಂಟಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಜಿ.ಸತ್ಯನಾರಾಯಣ್ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.