ADVERTISEMENT

ಬಸ್ ಬಡಿದು ಇಬ್ಬರು ದ್ವಿಚಕ್ರ ವಾಹನ ಸವಾರರ ಸಾವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 5:20 IST
Last Updated 5 ನವೆಂಬರ್ 2017, 5:20 IST

ವಿಜಯಪುರ: ಸಾರಿಗೆ ಬಸ್ ಮತ್ತು ಹೋಂಡಾ ಆ್ಯಕ್ಟಿವಾ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿರುವ ಅಪಘಾತದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬಳುವಹಳ್ಳಿಯ ನಿವಾಸಿಗಳಾದ ಭಾಗ್ಯಮ್ಮ(35) ಮತ್ತು ಮುರಳಿ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೋಲಾರ ರಸ್ತೆಯಲ್ಲಿರುವ ಜೆ.ವೆಂಕಟಾಪುರ ಸಮೀಪದಲ್ಲಿ ವಿಜಯಪುರ ಕಡೆಯಿಂದ ಹೋಗುತ್ತಿರುವ ಸಾರಿಗೆ ಬಸ್‌ ಮತ್ತು ಬಳುವನಹಳ್ಳಿ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸವಾರರಿಗೆ ಡಿಕ್ಕಿ ಹೊಡೆಯಿತು. ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆ ತಡೆ: ಕೋಲಾರದಿಂದ ಚಿಕ್ಕಬಳ್ಳಾಪುರದ ಕಡೆಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಹೊಂಡಗಳಿವೆ. ಅದನ್ನು ತಪ್ಪಿಸಲು ಹೋಗಿ ಬಹಳಷ್ಟು ಅಪಘಾತಗಳು ಸಂಭವಿಸಿವೆ. ಈ ರಸ್ತೆಗಳನ್ನು ದುರಸ್ತಿ ಮಾಡುವ ಕೆಲಸ ಲೊಕೋಪಯೋಗಿ ಇಲಾಖೆಯವರು ಮಾಡಿಲ್ಲ.

ADVERTISEMENT

ಇದೇರೀತಿ ಅಪಘಾತ ಸಂಭವಿಸಿ ಸಾವನ್ನಪ್ಪಿದವರ ಕುಟುಂಬದವರು ಪರಿಹಾರಕ್ಕಾಗಿ ಸಾರಿಗೆ ಇಲಾಖೆಗೆ ಅಲೆದಾಡುತ್ತಿದ್ದಾರೆ. ಸಾರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ಕೊಟ್ಟಿಲ್ಲ. ಆದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಅವರಿಗೆ ಸೂಕ್ತವಾದ ಪರಿಹಾರ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ವಿತರಣೆ ಮಾಡಬೇಕು ಎಂದು ಪಟ್ಟು ಹಿಡಿದು ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ಬಂದಿದ್ದ ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆ ಜಿಲ್ಲಾಧಿಕಾರಿ ಆಂಟೋನಿ ಅವರು, ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ನಡೆಸಿದರು. ಸ್ಥಳದಲ್ಲೇ ₹ 50 ಸಾವಿರ ಪರಿಹಾರ ವಿತರಣೆ ಮಾಡುವುದು, ಮೃತರ ಕುಟುಂಬಕ್ಕೆ ಕಾನೂನಿನಡಿ ಸಿಗುವ ಪರಿಹಾರವನ್ನು ಪ್ರಾಮಾಣಿಕವಾಗಿ ಅವರ ಕುಟುಂಬಕ್ಕೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು.

ಸ್ಥಳಕ್ಕೆ ಚಿಂತಾಮಣಿ ವಿಭಾಗದ ಡಿವೈಎಸ್ಪಿ ನಾಗೇಶ್, ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ಧರಾಜು, ಸಬ್‌ ಇನ್‌ಸ್ಪೆಕ್ಟರ್‌ ಪ್ರದೀಪ್ ಪೂಜಾರಿ ಬಂದಿದ್ದರು. ರಸ್ತೆ ತಡೆ ನಡೆಸಿದ್ದರಿಂದ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.