ADVERTISEMENT

ಬಿಗಿ ಇಲ್ಲದ ಪುರಸಭೆ ಆಡಳಿತ: ಆತಂಕ

​ಪ್ರಜಾವಾಣಿ ವಾರ್ತೆ
Published 4 ಮೇ 2017, 9:56 IST
Last Updated 4 ಮೇ 2017, 9:56 IST
ವಿಜಯಪುರದ ಪುರಸಭಾ ಕಾರ್ಯಾಲಯ ಖಾಲಿಯಾಗಿರುವುದನ್ನು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್ ಅವರು ತೋರಿಸುತ್ತಿರುವುದು
ವಿಜಯಪುರದ ಪುರಸಭಾ ಕಾರ್ಯಾಲಯ ಖಾಲಿಯಾಗಿರುವುದನ್ನು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್ ಅವರು ತೋರಿಸುತ್ತಿರುವುದು   

ವಿಜಯಪುರ: ಪುರಸಭೆಗೆ ನಿಗದಿಯಾಗಿದ್ದ ಮೀಸಲಾತಿ ಪಟ್ಟಿಯನ್ನು ಬದಲಾವಣೆ ಮಾಡಿಕೊಡುವಂತೆ  ಕೆಲವು ಸದಸ್ಯರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಪುರಸಭೆಯಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ  ಬಿಗಿಯಿಲ್ಲದ ಆಡಳಿತದಿಂದಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಲಾಗಿದೆ.

ಪ್ರಜಾ ವಿಮೋಚನ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಮಾತನಾಡಿ, ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಗೊಳಿಸಿ ಜನರಿಗೆ ಅನುಕೂಲ ಮಾಡಬೇಕು ಎಂದಿದ್ದಾರೆ.

ವಿಜಯಪುರ ಪುರಸಭೆ ನೂರು ವರ್ಷ ಕಂಡಿದೆ. ಇಲ್ಲಿ ಅಧ್ಯಕ್ಷರಿಲ್ಲದ ಕಾರಣ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ.   ತಾಲ್ಲೂಕು ಕೇಂದ್ರಕ್ಕಿಂತಲೂ ವಾಣಿಜ್ಯ ಪಟ್ಟಣವಾಗಿ ಅಭಿವೃದ್ಧಿಯಾಗುತ್ತಿರುವ ಇಲ್ಲಿ   23 ವಾರ್ಡುಗಳಿವೆ. 40 ಸಾವಿರಕ್ಕೂ ಹೆಚ್ಚಿನ  ಜನಸಂಖ್ಯೆ ಇದೆ. ಅಧ್ಯಕ್ಷರಿಲ್ಲದ ಕಾರಣ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ. ಅಧ್ಯಕ್ಷರಿಲ್ಲದಿರುವುದನ್ನೆ ಬಂಡವಾಳವಾಗಿಸಿಕೊಂಡಿರುವ ಅಧಿಕಾರಿಗಳು, ವಾರ್ಡುಗಳನ್ನು ಪುನರ್ ವಿಂಗಡಣೆ ಮಾಡಲು ಹೊರಟಿದ್ದಾರೆ.

ಎಲ್ಲ ವಾರ್ಡುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಕಸವಿಲೇವಾರಿ ಮಾಡದೇ ಇರುವುದರಿಂದ  ಎಲ್ಲೆಂದರಲ್ಲಿ ಕಸದ ರಾಶಿಗಳಿಂದ ದುರ್ನಾತ ಬೀರುತ್ತಿದ್ದು, ಕಸದ ರಾಶಿಗಳಿಗೆ ಬೆಂಕಿ ಹಚ್ಚುತ್ತಿರುವುದರಿಂದ ಕಲುಷಿತವಾದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ಜನರು ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ಬೇಸಿಗೆಯಾಗಿರುವುದರಿಂದ  ಸಮಸ್ಯೆಗಳು ಮತ್ತಷ್ಟು ಉಲ್ಭಣವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಸಂಸದ ಎಂ.ವೀರಪ್ಪಮೊಯಿಲಿ, ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್, ಡಾ.ಬಿ.ಆರ್. ಅಂಬೇಡ್ಕರ್ ಸೇವಾ ಪ್ರತಿಷ್ಠಾನ ರಾಜ್ಯ ಸಂಚಾಲಕ ಬಿ.ಎಸ್.ಪ್ರವೀಣ್ ಕುಮಾರ್, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಮಂಜುನಾಥ್,  ಕರವೇ ಸಂಘಟನೆಗಳ ಅಧ್ಯಕ್ಷರಾದ ಎಸ್.ಎಂ.ಸುರೇಶ್, ಮಹೇಶ್ ಕುಮಾರ್ ಹಾಗೂ  ಶಿವಕುಮಾರ್  ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.