ADVERTISEMENT

ಬ್ಯಾಡರಹಳ್ಳಿ: ಬಲಿದಾನ ಶಿಲ್ಪ, ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 9:59 IST
Last Updated 23 ಸೆಪ್ಟೆಂಬರ್ 2017, 9:59 IST
ಬ್ಯಾಡರಹಳ್ಳಿ ಗ್ರಾಮದ ಬಳಿ ಉತ್ಖನನ ಸಂದರ್ಭದಲ್ಲಿ ಸಿಕ್ಕಿದ ಬಲಿದಾನ ಶಿಲ್ಪ ಮತ್ತು ಕಲ್ಲಿನ ಕೆತ್ತನೆಯ ಶಾಸನ
ಬ್ಯಾಡರಹಳ್ಳಿ ಗ್ರಾಮದ ಬಳಿ ಉತ್ಖನನ ಸಂದರ್ಭದಲ್ಲಿ ಸಿಕ್ಕಿದ ಬಲಿದಾನ ಶಿಲ್ಪ ಮತ್ತು ಕಲ್ಲಿನ ಕೆತ್ತನೆಯ ಶಾಸನ   

ದೇವನಹಳ್ಳಿ : ಸಾವಿರಾರು ವರ್ಷಗಳ ಹಿಂದೆ ತ್ಯಾಗ ಬಲಿದಾನದ ಕುರುಹುಗಳಾಗಿರುವ ಶಾಸನ ಮತ್ತು ಸ್ಮಾರಕ ಶಿಲ್ಪಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಇತಿಹಾಸ ಸಂಶೋಧಕ ಡಾ.ಕೆ.ಆರ್. ನರಸಿಂಹನ್ ತಿಳಿಸಿದರು.

ತಾಲ್ಲೂಕು ಬ್ಯಾಡರಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ವಿವಿಧ ಶಾಸನಗಳ ಉತ್ಖನನ ವೇಳೆ ಬೆಳಕಿಗೆ ಬಂದ ಕೆಲವು ಕಲ್ಲಿನಿಂದ ಕೆತ್ತಲಾದ ಶಾಸನ ಮತ್ತು ಶಿಲ್ಪಿಗಳ ಬಗ್ಗೆ ವಿವರಿಸಿ ಅವರು ಮಾಹಿತಿ ನೀಡಿದರು. ತಾಲ್ಲೂಕಿನ ಕಾರಹಳ್ಳಿ, ಕುಂದಾಣ, ಸೋಲೂರು, ಅರದೇಶನಹಳ್ಳಿ, ಜಾಲಿಗೆ, ತಿಂಡ್ಲು ಭಾಗದಲ್ಲಿ ಉತ್ಖನನ ನಡೆಸಿದರೆ ಇತಿಹಾಸದ ಪ್ರತಿಯೊಂದು ಕಾಲಘಟ್ಟದ ಚಿತ್ರಣ ಹೊರಬರಲಿದೆ ಎಂದರು.

ಚಾಲುಕ್ಯ ಮನೆತನ ಮತ್ತು ತಮಿಳುನಾಡಿನ ಎರಡು ಪ್ರಮುಖ ಅರಸು ಮನೆತನಗಳ ನಡುವೆ ಅನೇಕ ಬಾರಿ ಕದನಗಳು ನಡೆದಿವೆ. ಇಂತಹ ಸಮರೋತ್ಕರ್ಷದಿಂದ ವೀರಗಲ್ಲು ಬಲಿದಾನದ ಶಿಲ್ಪ ಸ್ಮಾರಕ ಸ್ಥಾಪಿಸಲಾಗಿದೆ ಎಂದರು.

ADVERTISEMENT

ಇದೊಂದು ಅದ್ಭುತವಾದ ಕೆತ್ತನೆಯಿಂದ ಕೂಡಿದ ಶಿಲ್ಪವಾಗಿದ್ದು ಇದರಲ್ಲಿ ರಾಜ ಮನೆತನದ ಪ್ರತಿಯೊಂದು ಲಕ್ಷಣ ಪ್ರತಿಬಿಂಬಿತವಾಗಿದೆ. ಮೂರು ಹಂತಗಳಲ್ಲಿರುವ ಶಿಲ್ಪದ ಕೆಳಭಾಗದಲ್ಲಿ ಮೊದಲ ಹಂತದಲ್ಲಿರುವ ಕುದುರೆ, ಅದರ ಮೇಲಿನ ಆಸನ, ರಾಜರ ಅಂದವಾದ ವದನ, ಕೊಡೆ, ತದನಂತರದಲ್ಲಿ ಅಗ್ನಿಕುಂಡಲವಿದೆ. ಇದರ ಅಕ್ಕ ಪಕ್ಕದಲ್ಲಿ ಚಾಮರ ಬೀಸುತ್ತಿರುವ ತರುಣಿಯರಿದ್ದಾರೆ. ಸಂಸ್ಕಾರದ ಆಯುಧಗಳಾದ ಶಂಖ, ಚಕ್ರ, ಕುಂಭವಿದೆ ಎಂದು ವಿವರಿಸಿದರು.

ಶಿಲ್ಪದ ಎರಡನೆ ಹಂತದಲ್ಲಿ ವ್ಯಕ್ತಿಯ ಚಿತ್ರಣದ ಜತೆಗೆ ಸುಂದರ ಮಹಿಳೆ ಇದ್ದು ಈಕೆಯು ಗಂಡನೊಂದಿಗೆ ಕೂಡಿಕೊಂಡಿದ್ದಾಳೆ. ವೀರ, ಶೂರ ಲಕ್ಷಣಗಳು ಇದ್ದು ಒಬ್ಬ ಅದ್ವಿತೀಯ ಮಹಾರಾಜ ಎಂಬುದನ್ನು ಹೇಳುವಂತಿದೆ. ಮೂರನೆ ಹಂತದಲ್ಲಿ ಸ್ವರ್ಗಾರೋಹಣ ಚಿತ್ರವಿದೆ ಎಂದರು.

ಕಲ್ಲಿನ ಶಾಸನದಲ್ಲಿ ಉಲ್ಲೇಖಿಸಿರುವಂತೆ ರಾಜಾಧಿರಾಜ, ನಂತರ ಅವನ ಸಹೋದರರಾದ ರಾಜೇಂದ್ರದೇವ (ಕ್ರಿ.ಶ.1052–1063) ವೀರ ರಾಜೇಂದ್ರದೇವ (ಕ್ರಿ.ಶ.1063–1069) ಚೋಳ ಸಿಂಹಾಸನವೇರಿ ಆಡಳಿತ ನಡೆಸಿದ್ದರು. ಚೋಳ ಸಾಮ್ರಾಜ್ಯವನ್ನು ವೀರ ಸಿಂಹಾಸನದಲ್ಲಿ ಕುಳಿತು ವೀರ ರಾಜೇಂದ್ರನು ಆಳುತ್ತಿರುವಾಗ ವಿಕ್ರಮ ಚೋಳ ಮಂಡಲದ ಸಣ್ಣೆ ನಾಡಿಗೆ ಸೇರಿದ ತಿಪ್ಪೂರು.

ಪ್ರಸ್ತುತ ಬ್ಯಾಡರಹಳ್ಳಿ ಪ್ರಾಂತ್ಯದಲ್ಲಿ ಚೋಳ ವಿಧಾಧರ ವಿಳುಪುರಾಮರ ಮಗನಾದ ವಾಸವಯ್ಯ (ರಾಮರಾಯ ವೇಲನ್) ಎಂಬಾತನ ಹೆಂಡತಿ ಸೋಮಕ್ಕನು ಅಗ್ನಿ ಪ್ರವೇಶ ಮಾಡಿದ ಸಂದರ್ಭದಲ್ಲಿ ತಿಪ್ಪೂರಿನ ಅಧಿಪತಿಯಾಗಿದ್ದ ಪಸು ಪೊನ್ನಮೆಂಟಿ ರಾಜಾಧಿರಾಜ ಮಾವೆಂಟ್ ವೇಲರ್ ಎಂಬಾತನದ್ದು ಎಂದು ಉಲ್ಲೇಖವಾಗಿದೆ ಎಂದರು.

ಈ ಶಾಸನದ ಕುರಿತು ‘ಕರ್ನಾಟಕ ಶಾಸನ ಸಂಪುಟ ದೇವನಹಳ್ಳಿ 9’ರಲ್ಲಿ ಬಿ.ಎಲ್.ರೈಸ್ ಅವರು 1900ರಲ್ಲಿ ನಮೂದಿಸಿದ್ದರು. ಶಾಸನ ಪತ್ತೆ ಬಗ್ಗೆ ಅನೇಕ ವರ್ಷಗಳಿಂದ ಜಾಗದ ಹುಡುಕಾಟದಲ್ಲಿದ್ದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.