ADVERTISEMENT

ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭ: ರೆಡ್ಡಿ

ಚಂದಾಪುರಕ್ಕೆ ನೂತನ ಪ್ರಾದೇಶಿಕ ಸಾರಿಗೆ ಕಚೇರಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 8:53 IST
Last Updated 8 ಫೆಬ್ರುವರಿ 2017, 8:53 IST

ಆನೇಕಲ್‌: ತಾಲ್ಲೂಕಿನ ಚಂದಾಪುರಕ್ಕೆ ನೂತನ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಮಂಜೂರು ಮಾಡಲಾಗಿದ್ದು ಈ ವರ್ಷದ ಮಾರ್ಚ್‌್್ ಅಂತ್ಯದ ವೇಳೆಗೆ ಕಚೇರಿ ಪ್ರಾರಂಭವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ 2013ರಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯನ್ನು ತೆರೆಯಲು ಮಂಜೂರಾತಿ ನೀಡಲಾಗಿತ್ತು. ಆದರೆ 2013ರಿಂದಲೂ ಸಹ ಸ್ಥಳಾವಕಾಶದ ಕೊರತೆಯಿಂದ ಕಚೇರಿ ಪ್ರಾರಂಭವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮಂಜೂರಾಗಿರುವ ಸಾರಿಗೆ ಕಚೇರಿಯನ್ನು ಆನೇಕಲ್ ತಾಲ್ಲೂಕಿನ ಚಂದಾಪುರಕ್ಕೆ ಸ್ಥಳಾಂತರಿಸಿ ಸರ್ಕಾರ ಆದೇಶ ಮಾಡಿದೆ. ಇದರಿಂದ ಆನೇಕಲ್ ತಾಲ್ಲೂಕಿನ ಜನತೆಗೆ ಉಪಯೋಗವಾಗಲಿದೆ.

ಮಂಜೂರಾಗಿರುವ ಹುದ್ದೆಗಳು ಹಾಗೂ ನೋಂದಣಿ ಸೂಚಿ ಸಂಖ್ಯೆ ಕೆಎ–59 ಸಮೇತ ಕಚೇರಿಯನ್ನು ಆನೇಕಲ್ ತಾಲ್ಲೂಕಿನ ಚಂದಾಪುರಕ್ಕೆ ಸ್ಥಳಾಂತರ ಮಾಡಲಾಗಿದ್ದು ಕಚೇರಿಯ ಹೆಸರನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಚಂದಾಪುರ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.

ಆನೇಕಲ್ ತಾಲ್ಲೂಕಿನ ಚಂದಾಪುರಕ್ಕೆ ಸಾರಿಗೆ ಕಚೇರಿಯನ್ನು ಮಂಜೂರು ಮಾಡಿರುವುದರಿಂದ ಆನೇಕಲ್ ತಾಲ್ಲೂಕಿನ ಜನತೆಗೆ ಅತ್ಯಂತ ಉಪಯುಕ್ತವಾಗಿದೆ. ವಾಹನಗಳ ನೋಂದಣಿ ಹಾಗೂ ಪರವಾನಗಿ, ಚಾಲನಾ ಪರವಾನಗಿ ಸೇರಿದಂತೆ ಸಾರಿಗೆಯ ವಿವಿಧ ಕೆಲಸ ಕಾರ್ಯಗಳಿಗಾಗಿ ಬೆಂಗಳೂರಿಗೆ ಹೋಗಬೇಕಾಗಿತ್ತು.

ಇದರಿಂದಾಗಿ ತಾಲ್ಲೂಕಿನಲ್ಲಿಯೇ ಜನರಿಗೆ ಸೌಲಭ್ಯ ದೊರೆಯುವಂತಾಗಿದೆ. ಆನೇಕಲ್ ತಾಲ್ಲೂಕಿನ ಚಂದಾಪುರ ತಾಲ್ಲೂಕಿನ ಕೇಂದ್ರ ಭಾಗವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವುದರಿಂದ ಸಾರಿಗೆ ಸಂಬಂಧಿಸಿದಂತೆ ಎಲ್ಲಾ ಅನುಕೂಲ ಪಡೆಯಲು ಅವಕಾಶ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT