ADVERTISEMENT

ಮಾವು: ಶೇ50ರಷ್ಟು ಇಳುವರಿ ಖೋತಾ

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜು; ತೇವಾಂಶ ಕೊರತೆಯಿಂದ ಹಾನಿ ಸಾಧ್ಯತೆ

ಆರ್.ಜಿತೇಂದ್ರ
Published 4 ಮಾರ್ಚ್ 2017, 8:11 IST
Last Updated 4 ಮಾರ್ಚ್ 2017, 8:11 IST
ರಾಮನಗರ ತಾಲ್ಲೂಕಿನ ಪಾಲಬೋವಿದೊಡ್ಡಿ ಸಮೀಪ ಹೊಲವೊಂದರಲ್ಲಿ ಕಾಯಿ ಹಣ್ಣಾಗುವ ಹಂತದಲ್ಲಿ ಮಾವು
ರಾಮನಗರ ತಾಲ್ಲೂಕಿನ ಪಾಲಬೋವಿದೊಡ್ಡಿ ಸಮೀಪ ಹೊಲವೊಂದರಲ್ಲಿ ಕಾಯಿ ಹಣ್ಣಾಗುವ ಹಂತದಲ್ಲಿ ಮಾವು   

ರಾಮನಗರ: ಬರದಿಂದ ಕಂಗೆಟ್ಟ ರೈತರಿಗೆ ಮಾವು ಕೂಡ ಈ ಬಾರಿ ಸಿಹಿ ತಂದಿಲ್ಲ. ಮಳೆಯ ಕೊರತೆಯಿಂದಾಗಿ ಗಿಡಗಳಲ್ಲಿ ಕಾಯಿ ವಿರಳವಾಗಿದ್ದು, ಇದು ಒಟ್ಟಾರೆ ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ.

ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ರಾಮನಗರವು ಎರಡನೆಯ ಸ್ಥಾನದಲ್ಲಿದೆ. ಪ್ರಸ್ತುತ ಇಲ್ಲಿನ 22,131 ಹೆಕ್ಟೇರ್‌ ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 2ರಿಂದ 3 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಇಳುವರಿ ಇದೆ. ಆದರೆ ಈ ಬಾರಿ ಒಟ್ಟಾರೆ ಉತ್ಪನ್ನ 1 ಲಕ್ಷ ಮೆಟ್ರಿಕ್‌ ಟನ್‌ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಒಟ್ಟಾರೆ ಶೇ 50ರಷ್ಟು ಇಳುವರಿಯು ಕಡಿಮೆ ಆಗಲಿದೆ.

‘ರಾಜ್ಯದ ಉಳಿದ ಜಿಲ್ಲೆಗಳಿಗಿಂತ ರಾಮನಗರದಲ್ಲಿ ಮೊದಲು ಮಾವಿನ ಫಲ ಸಿಗುತ್ತದೆ. ಈಗಾಗಲೇ ಕೆಲವು ಕಡೆ ಕೊಯ್ಲು ಆರಂಭಗೊಂಡಿದೆ. ಈ ತಿಂಗಳಾಂತ್ಯಕ್ಕೆ ಮಾವಿನ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಮನಗರವೂ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮಾವಿನ ಇಳುವರಿ ಕಡಿಮೆ ಇರಲಿದೆ. ಹೀಗಾಗಿ ಸಹಜವಾಗಿ ಬೆಲೆ ಹೆಚ್ಚಾಗುವ ನಿರೀಕ್ಷೆಯೂ ಇದೆ’ ಎಂದು ಅವರು  ವಿವರಿಸಿದರು.

ಬದಾಮಿಗೆ ಹಾನಿ ಹೆಚ್ಚು: ರಾಮನಗರದಲ್ಲಿ ಪ್ರಮುಖವಾಗಿ ರಸಪುರಿ, ಸೇಂದೂರ, ಬದಾಮಿ, ಮಲ್ಲಿಕಾ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಪೈಕಿ ಬದಾಮಿ ತಳಿಯ ಮರಗಳ ಇಳುವರಿಯು ಶೇ 60ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಹನುಮಂತರಾಯಪ್ಪ ತಿಳಿಸಿದರು. 

‘ಮಳೆ ಮತ್ತು ತೇವಾಂಶದ ಕೊರತೆಯಿಂದಾಗಿ ಸಾಕಷ್ಟು ಮರಗಳು ಹೂವು ಕಚ್ಚಿಲ್ಲ. ಸಣ್ಣ ಕಾಯಿಗಳು ಹೆಚ್ಚಾಗಿ ಉದುರತೊಡಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಳುವರಿ ಇನ್ನಷ್ಟು ಕಡಿಮೆ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನೀರು ಅಗತ್ಯ: ‘ಸದ್ಯದ ಪರಿಸ್ಥಿತಿಯಲ್ಲಿ ಮಾವಿನ ಮರಗಳಿಗೆ ತೇವಾಂಶದ ಅಗತ್ಯ ಇದೆ. ನೀರಾವರಿ ಸೌಲಭ್ಯ ಇದ್ದವರು ಗಿಡಗಳಿಗೆ ಎರಡು ಬಾರಿ ನೀರುಣಿಸಬಹುದು. ಇಲ್ಲವಾದಲ್ಲಿ ಟ್ಯಾಂಕರ್‌ ಮೂಲಕವಾದರೂ ನೀರು ಸರಬರಾಜು ಮಾಡುವುದು ಸೂಕ್ತ’ ಎಂದು ಅವರು ಸಲಹೆ ನೀಡಿದರು.

‘ಮಳೆ ಆಶ್ರಿತ ಜಮೀನು ಹೆಚ್ಚಿರುವ ಕನಕಪುರ ಭಾಗದಲ್ಲಿ ಮಾವು ಈಗಾಗಲೇ ಮಾಗುವ ಹಂತಕ್ಕೆ ಬಂದಿದೆ. ಉಳಿದ ತಾಲ್ಲೂಕುಗಳಲ್ಲೂ ಕ್ರಮೇಣ ಬೆಳೆ ಕೈಸೇರುತ್ತಿದೆ. ರಾಮನಗರ ಜಿಲ್ಲೆಯಲ್ಲಿಯೇ ಮೊದಲಿಗೆ ಮಾವು ಕೈಸೇರುವುದು ಪ್ರತೀತಿ. ಆದರೆ ಈ ಬಾರಿ ನಮ್ಮೊಂದಿಗೆ ಕೋಲಾರ ಜಿಲ್ಲೆಯಲ್ಲೂ ಅವಧಿಪೂರ್ವದಲ್ಲಿ ಮಾವು ಹೂ ಕಚ್ಚಿತ್ತು.  ಹೀಗಾಗಿ ಅಲ್ಲಿನ ಬೆಳೆಯೂ ಸದ್ಯದಲ್ಲಿಯೇ ಮಾರುಕಟ್ಟೆ ಸೇರಲಿದೆ’ ಎಂದು ಹನುಮಂತರಾಯಪ್ಪ ವಿವರಿಸಿದರು.

*
ತೇವಾಂಶದ ಕೊರತೆಯಿಂದ ಕಾಯಿಗಳು ಉದುರಲು ಆರಂಭಿಸಿವೆ. ಅಗತ್ಯಬಿದ್ದಲ್ಲಿ ಟ್ಯಾಂಕರ್‌ ಮೂಲಕವಾದರೂ ಗಿಡಗಳಿಗೆ ನೀರು ಪೂರೈಸುವುದು ಸೂಕ್ತ.
-ಹನುಮಂತರಾಯಪ್ಪ,
ತೋಟಗಾರಿಕಾ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT