ADVERTISEMENT

ಮುಂಗಾರು ಹಂಗಾಮ ಶೇ 91.15 ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 10:37 IST
Last Updated 13 ಸೆಪ್ಟೆಂಬರ್ 2017, 10:37 IST
ದೇವನಹಳ್ಳಿ ತಾಲ್ಲೂಕಿನಲ್ಲಿ ರಾಗಿ ಬೆಳೆ.
ದೇವನಹಳ್ಳಿ ತಾಲ್ಲೂಕಿನಲ್ಲಿ ರಾಗಿ ಬೆಳೆ.   

ದೇವನಹಳ್ಳಿ: ಪ್ರಸ್ತುತ ಸಾಲಿನ ಮುಂಗಾರು ಹಂಗಾಮ ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಶೇ 91.15ರಷ್ಟು ಬಿತ್ತನೆ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಮೂರು ವರ್ಷಗಳಿಂದ ಸತತವಾಗಿ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿತ್ತು. ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆ ವಿಚಾರದಲ್ಲಿ ರೈತರು ಆತಂಕದಲ್ಲಿದ್ದರು. ಮುಂಗಾರು ಬಿತ್ತನೆಯ ಅಂತಿಮ ದಿನಗಳಲ್ಲಿ ಮಳೆ ಬಂದಿರುವುದರಿಂದ ಶೇಕಡಾವಾರು ಬಿತ್ತನೆ ಪೂರ್ಣಗೊಂಡು ಹಿಂಗಾರು ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

ಜಿಲ್ಲೆಯಲ್ಲಿ ನೀರಾವರಿ ಮತ್ತು ಖುಷ್ಕಿ ಭೂಮಿಯಲ್ಲಿನ ಒಟ್ಟಾರೆ ಗುರಿ 54,191 ಹೆಕ್ಟೇರ್‌ ಪೈಕಿ 49,395.6 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ ಬಿತ್ತನೆಯಾಗಿದೆ. ಮುಂಗಾರು ಮಳೆ ವಿಳಂಬವಾದ ಪರಿಣಾಮ ಭೂಮಿ ಹಸನು ಮಾಡಿ ಬಿತ್ತನೆ ಮಾಡಲು ಸಾಧ್ಯವಾಗಿರಲಿಲ್ಲ, ಕೆಲವು ಕಡೆ ನೀರಾವರಿ ಆಶ್ರಯ ಹೊಂದಿದ್ದ ರೈತರು ಮಾತ್ರ ಮುಸಕಿನ ಜೋಳ, ತೊಗರಿ ಬಿತ್ತನೆ ಮಾಡಿದ್ದರು.

ರಾಗಿ ಇತರೆ ಬೆಳೆಗಳ ಬಿತ್ತನೆಯು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಕನಿಷ್ಠ ಮಳೆಯಾದರೂ ಬರಬಹುದೇ ಎಂಬ ನಿರೀಕ್ಷೆಯಲ್ಲಿ ರೈತರು ಕಾಯುವಂತಾಗಿತ್ತು. ವಾಯುಭಾರ ಕುಸಿತದ ಪರಿಣಾಮ ಉಂಟಾದ ಹದವಾದ ಮಳೆ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಹಿಂಗಾರು ಮಳೆಯ ಆಧಾರದ ಮೇಲೆ ಮುಂಗಾರು ಬೆಳೆ ಇಳುವರಿ ಅವಲಂಬಿತವಾಗಿದೆ ಎಂಬುದು ಹಿರಿಯ ರೈತರು ಹೇಳುತ್ತಾರೆ.

ADVERTISEMENT

ಸಕಾಲದಲ್ಲಿ ಮುಂಗಾರು ಆರಂಭಗೊಂಡಿದ್ದರೆ ರಾಗಿ ತೆನೆಯ ಹಂತಕ್ಕೆ ಬರಬೇಕಿತ್ತು. ಮೊದಲು ಬಿತ್ತನೆ ಮಾಡಿದ ರಾಗಿ ಪೈರು ಕೆಲಕಡೆ ನೆಲ ಮಟ್ಟದಿಂದ ಅರ್ಧ ಅಡಿಯಷ್ಟು ಬೆಳವಣಿಗೆ ಕಂಡಿದೆ. ಹದಿನೈದು ದಿನಗಳ ಹಿಂದೆ ಬಿತ್ತನೆ ಮಾಡಿದ ರಾಗಿ ಬೆಳೆ ಒಂದೆರಡಿಂಚು ಮಾತ್ರ ಬೆಳವಣಿಗೆಯಾಗಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವಾಡಿಕೆ ಮತ್ತು ವಾಯುಭಾರ ಕುಸಿತದಿಂದಾಗುವ ಮಳೆಯನ್ನು ರೈತರ ಕೃಷಿ ಬೆಳೆ ಅವಲಂಬಿಸಿದೆ. ಮಳೆ ಬಾರದೆ ಇದ್ದರೆ ಮತ್ತೊಮ್ಮೆ ಬರ ಅನಿವಾರ್ಯವಾಗಲಿದೆ ಎಂಬುದು ರೈತರ ಲೆಕ್ಕಾಚಾರ.

2017ನೇ ಸಾಲಿನಲ್ಲಿ ಸೆ.11ರ ವರೆಗೆ ಜಿಲ್ಲೆಯಲ್ಲಿನ ಸರಾಸರಿ ವಾಡಿಕೆ ಮಳೆ 652 ಮಿ.ಮೀ. ಪೈಕಿ 459 ಮಿ.ಮೀ.ಆಗಿದೆ. ಒಟ್ಟಾರೆ 42 ಮಿ.ಮೀ. ಕೊತೆಯಾಗಿದೆ. ಕಳೆದ ಏಳು ದಿನಗಳಲ್ಲಿ ಜಿಲ್ಲೆಯಲ್ಲಿ 112 ಮಿ.ಮೀ. ವಾಡಿಕೆ ಮಳೆ ಪೈಕಿ 280 ಮಿ.ಮೀ. ಮಳೆಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಈವರೆಗೂ ಆಗಿರುವ ಮಳೆ ಪ್ರಮಾಣ ದೇವನಹಳ್ಳಿ 580 ಮಿ.ಮೀ. ಹೊಸಕೋಟೆ 621 ಮಿ.ಮೀ. ನೆಲಮಂಗಲ 761 ಮಿ.ಮೀ. ಎಂದು ಕೃಷಿ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ 2017 ನೇ ಸಾಲಿನ ಬೆಳೆ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ ನೀರಾವರಿ ಮತ್ತು ಮಳೆಯಾಶ್ರಿತ) ಭತ್ತ 388.25, ರಾಗಿ 35,153, ಮುಸುಕಿನ ಜೋಳ 9,122, ಸಿರಿಧಾನ್ಯ 120.2, ಮೇವಿನ ಜೋಳ 786.46, ಪಾಪ್ ಕಾರ್ನ್ 143, ತೊಗರಿ 946, ಹುರುಳಿ 51.51, ಅಲಸಂದೆ 495, ಅವರೆ 1561, ನೆಲಗಡಲೆ 94.2, ಎಳ್ಳು 3, ಹರಳು 153, ಹುಚ್ಚೆಳ್ಳು 153, ಸಾಸಿವೆ 225 ಬಿತ್ತನೆಯಾಗಿದೆ. ಈ ಪೈಕಿ ನೀರಾವರಿ 2,973, ಮಳೆಯಾಶ್ರಿತ 46,433 ಹೆಕ್ಟೇರ್‌ನಷ್ಟಿದೆ.

ದೇವನಹಳ್ಳಿ 8,317(ಶೇ88.34), ದೊಡ್ಡಬಳ್ಳಾಪುರ 21,830 (ಶೇ 9,487), ಹೊಸಕೋಟೆ 9,869 (ಶೇ 91.53, ನೆಲಮಂಗಲ 13,078(ಶೇ 86.67)ಬಿತ್ತನೆ ಪೂರ್ಣಗೊಂಡಿದೆ. ಹಿಂಗಾರು ಈಗಾಗಲೇ ಆರಂಭಗೊಂಡಿರುವುದರಿಂದ ಇಂಡಾಫ್ ರಾಗಿ ತಳಿ 5 ಮತ್ತು 9, ತೃಣಧಾನ್ಯ ನವಣೆ ಮತ್ತು ಹುರುಳಿ ಬಿತ್ತನೆಗೆ ಸಕಾಲವಾಗಿದೆ. ಜತೆಗೆ ಅಕ್ಟೋಬರ್ ನಂತರ ಕಡಲೆ ಬಿತ್ತನೆ ಮಾಡಿಕೊಳ್ಳಬಹುದು. ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜದ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.