ADVERTISEMENT

ಮೂವರ ವಜಾಕ್ಕೆ ಆದೇಶ

ಕೊಯಿರಾ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 8:09 IST
Last Updated 21 ಅಕ್ಟೋಬರ್ 2014, 8:09 IST

ದೇವನಹಳ್ಳಿ: ತಾಲ್ಲೂಕಿನ ಕೊಯಿರಾ ಗ್ರಾಮಪಂಚಾಯಿತಿಯಲ್ಲಿ ‘ನರೇಗಾ’ ಯೋಜನೆಯ ವಿವಿಧ ಕಾಮಗಾರಿಗಳಲ್ಲಿ ಅಕ್ರಮವೆಸಗಿದ ಆರೋಪಕ್ಕೆ ಸಂಬಂಧಿಸಿ­ದಂತೆ ಮೂವರನ್ನು ವಜಾಗೊಳಿಸು­ವಂತೆ ಜಿ.ಪಂ. ಆದೇಶಿಸಿದೆ.

ಹಣ ದುರುಪಯೋಗಪಡಿಸಿ­ಕೊಂಡಿ­ರುವ ಬಗ್ಗೆ ತಪ್ಪೊಪ್ಪಿಕೊಂಡಿರುವ ಕಾರಣ ಗ್ರಾ.ಪಂ. ಡಾಟಾ ಎಂಟ್ರಿ ಆಪರೇಟರ್ ಮುನಿರಾಜು, ಎಲೆಕ್ಟ್ರಿಷಿ­ಯನ್‌ ತಿಮ್ಮಪ್ಪ ಮತ್ತು ಕರವಸೂಲಿ­ಗಾರ ಕೆ.ಆರ್. ಭೈರೇಗೌಡ ಅವರನ್ನು ವಜಾಗೊಳಿಸುವಂತೆ ತಾ.ಪಂ.ಗೆ ಜಿ.ಪಂ. ಸೂಚಿಸಿದೆ.

ಕೆಲವು ಮೃತಪಟ್ಟ ವ್ಯಕ್ತಿಗಳು, ಪಂಚಾ­ಯಿತಿ ನೌಕರರು ಮತ್ತು ಸರ್ಕಾರಿ ನೌಕರರ ಹೆಸರಿನಲ್ಲಿ ಅಕ್ರಮ­ವಾಗಿ ಹಣ ದುರುಪಯೋಗ ಮಾಡಿ­ಕೊಳ್ಳಲಾಗಿದೆ ಎಂದು ಈ ಮೂವರ ವಿರುದ್ಧ ಆರೋಪಿಸಲಾಗಿತ್ತು.

ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮ ಹಣ ದುರುಪಯೋಗದ ಬಗ್ಗೆ ಗ್ರಾಮದ ಚಿಕ್ಕೇಗೌಡ ಸೇರಿದಂತೆ 12 ಮಂದಿ ದೂರುದಾರರು 2014ರ ಜುಲೈ 5ರಂದು ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಿ ಸಮಗ್ರ ತನಿಖೆ ನಡೆಸು­ವಂತೆ ಒತ್ತಾಯಿಸಿದ್ದರು. ನಂತರ ಜಿಲ್ಲಾ ಒಂಬಡ್ಸ್‌ಮನ್ ಅವರು ಜುಲೈ17 ರಂದು ಸ್ಥಳಿಯ ಗ್ರಾಮ ಪಂಚಾಯಿತಿಗೆ ತೆರಳಿ ಕಡತ ಪರಿಶೀಲಿಸಿ ಸಾರ್ವಜನಿಕ­ರಿಂದಲೂ ಮಾಹಿತಿ ಪಡೆದಿದ್ದರು.

ಅಕ್ರಮದ ಬಗ್ಗೆ ತನಿಖೆ ನಡೆಸಿ ಹಣ ದುರುಪಯೋಗವಾದ ಬಗ್ಗೆ ಜಿಲ್ಲಾ ಒಂಬಡ್ಸ್‌ಮನ್ ಅವರು ಜಿಲ್ಲಾ ಪಂಚಾಯಿತಿಗೆ ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಜಿಲ್ಲಾ ಪಂಚಾಯಿತಿ 2014ರ ಸೆ. 20ರಂದು ತಾಲ್ಲೂಕು ಪಂಚಾಯಿತಿಗೆ ಪತ್ರ ಬರೆದಿತ್ತು.

ಈ ಹಿಂದಿನ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಈ ಹಿಂದಿನ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯಿತಿ ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅಕ್ರಮದಲ್ಲಿ ಭಾಗಿಯಾದ 15 ಮಂದಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಒಂಬುಡ್ಸ್‌ಮನ್ ಅಧಿಕಾರಿಗಳ ತನಿಖಾ ವರದಿ ಆಧರಿಸಿ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಮುನಿರಾಜು ಅವರಿಂದ ₨ 16034, ಎಲೆಕ್ಟ್ರಿಷಿಯನ್‌ ತಿಮ್ಮಪ್ಪ  ಅವರಿಂದ ₨ 14,186 ಮತ್ತು ಕರವಸೂಲಿಗಾರ ಕೆ.ಆರ್. ಭೈರೇಗೌಡ ಅವರಿಂದ ₨1250 ಹಣ ದುರುಪಯೋಗ­ವಾಗಿದ್ದು, ಈ ಬಗ್ಗೆ ತಪ್ಪು ಒಪ್ಪಿಕೊಂಡ ಹಿನ್ನಲೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ನಿಯಮ 113(3)ರಂತೆ ಕೆಲಸದಿಂದ ವಜಾಗೊಳಿಸಿ ದುರುಪಯೋಗದ ಹಣ ಶೇಕಡ12 ರಷ್ಟು ಬಡ್ಡಿ ಸೇರಿ ವಸೂಲಿ ಮಾಡುವಂತೆ ಕ್ರಮಕೈಗೊಳ್ಳಲು ಸೂಚಿಸಿದೆ.

ಅದೇ ರೀತಿ ಶೇಕಡ 12 ರಷ್ಟು ಬಡ್ಡಿ ಸೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವೆಂಕಟೇಶ್‌ಮೂರ್ತಿ ಅವರಿಂದ ₨31,470, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಅರುಣ ಪುರುಷೋತ್ತಮ ಅವರಿಂದ ₨19860, ಹಿಂದಿನ ಅಧ್ಯಕ್ಷ ಹಾಲಿ ಸದಸ್ಯ ರಮೇಶ್ ಬಾಬು ಅವರಿಂದ ₨5432, ಹಿಂದಿನ ಅಧ್ಯಕ್ಷೆ ಹಾಲಿ ಸದಸ್ಯೆ ಮಂಜಮ್ಮ ₨3672, ಗ್ರಾ.ಪಂ. ನಿವೃತ್ತ ಕಾರ್ಯದರ್ಶಿ ಜಯರಾಮಯ್ಯ ₨3472, ಈ ಹಿಂದಿನ ಪ್ರಬಾರ ಪಿಡಿಒ ಗೋವಿಂದರಾಜು ₨19960, ಕಿರಿಯ ಅಭಿಯಂತರ ಪ್ರಕಾಶ್ ₨2861, ಕಿರಿಯ ಅಭಿಯಂತರ ಶಂಕರಾಚಾರಿ ₨37,573, ಸಹಾಯಕ ಅಭಿಯಂತರ ರಾಮಯ್ಯ ₨6003, ಉಪವಲಯ ಅರಣ್ಯಾಧಿಕಾರಿ ₨14,582, ಈ ಹಿಂದಿನ ಪಿಡಿಒ ಹಾಗೂ ಪ್ರಸ್ತುತ ಅಣ್ಣೇಶ್ವರ ಗ್ರಾ.ಪಂ. ಪಿಡಿಒ ಕುಮಾರ್ ಅವರಿಂದ ₨36,902 ವಸೂಲಾತಿಗೆ ಇಲಾಖೆ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.