ADVERTISEMENT

ಮೌಢ್ಯ ಪ್ರತಿಬಂಧಕ ಕಾಯ್ದೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2017, 5:21 IST
Last Updated 20 ಮೇ 2017, 5:21 IST
ದೇವನಹಳ್ಳಿ ಕನ್ನಮಂಗಲದಲ್ಲಿ ನಡೆದ  ರಾಜ್ಯ ಮಟ್ಟದ ‘ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ವೈಜ್ಞಾನಿಕ ಚಿಂತನ ಮಂಥನ ಕಾರ್ಯಾಗಾರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ, ನಿಮ್ಹಾನ್ಸ್ ಮಾನಸಿಕ ರೋಗ ತಜ್ಞ ಡಾ.ಸಿ.ಆರ್ ಚಂದ್ರಶೇಖರ್, ವಿಜ್ಞಾನ ಪರಿಷತ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಉಪಸ್ಥಿತರಿದ್ದರು
ದೇವನಹಳ್ಳಿ ಕನ್ನಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ‘ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ವೈಜ್ಞಾನಿಕ ಚಿಂತನ ಮಂಥನ ಕಾರ್ಯಾಗಾರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಪಿಳ್ಳಮುನಿಶಾಮಪ್ಪ, ನಿಮ್ಹಾನ್ಸ್ ಮಾನಸಿಕ ರೋಗ ತಜ್ಞ ಡಾ.ಸಿ.ಆರ್ ಚಂದ್ರಶೇಖರ್, ವಿಜ್ಞಾನ ಪರಿಷತ್ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಉಪಸ್ಥಿತರಿದ್ದರು   

ದೇವನಹಳ್ಳಿ: ಸಮಾಜದಲ್ಲಿ ಹೆಚ್ಚುತ್ತಿರುವ ಮೂಢನಂಬಿಕೆಗಳಿಗೆ ಕಡಿವಾಣ ಹಾಕಲು ಮೌಢ್ಯ ಪ್ರತಿಬಂಧಕ ಕಾಯ್ದೆ ಅನಿವಾರ್ಯವೆಂದು ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ್ ಬಿ.ಕಡ್ಲೇವಾಡ ತಿಳಿಸಿದರು.

ತಾಲ್ಲೂಕಿನ ಕನ್ನಮಂಗಲ ಮಾರುತಿ ವಿದ್ಯಾಮಂದಿರ ಶಾಲಾ ಆವರಣದಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಪರಿಷತ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ನಡೆದ ‘ಸಾಮಾಜಿಕ ಮೌಢ್ಯಗಳ ನಿವಾರಣೆಗಾಗಿ ವೈಜ್ಞಾನಿಕ ಚಿಂತನ ಮಂಥನ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

ರಾಜ್ಯ ವಿಜ್ಞಾನ ಪರಿಷತ್ 30 ವರ್ಷಗಳ ಹಿಂದೆ  ಮಾಜಿ ಕುಲಪತಿ ಎಚ್. ನರಸಿಂಹಯ್ಯರಿಂದ  ಸ್ಥಾಪಿತವಾಗಿ ವಿಜ್ಞಾನ ತಂತ್ರಜ್ಞಾನ ಇಲಾಖೆಯೊಂದಿಗೆ ಸಕ್ರಿಯವಾಗಿ  ಕಾರ್ಯ ನಿರ್ವಹಿಸುತ್ತಿದೆ. ಕಂದಾಚಾರ, ಮೂಢನಂಬಿಕೆಗೆ ಕಡಿವಾಣ ಹಾಕಿ ವೈಜ್ಞಾನಿಕ ಮನೋಭಾವದ ಅರಿವು ಮೂಡಿಸಲಾಗುತ್ತಿದೆ. ಮೂವತ್ತು ವರ್ಷಗಳ ಅವಧಿಯಲ್ಲಿ ಸಾವಿರಾರು ವಿಚಾರವಂತರು ತರಬೇತಿ ಪಡೆದು ಕಾರ್ಯೋನ್ಮುಖರಾಗಿದ್ದಾರೆ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪಿಳ್ಳಮುನಿಶಾಮಪ್ಪ, ಸಮಾಜ ಅಸ್ತಿತ್ವಕ್ಕೆ ಬಂದು ಸಾವಿರಾರು ವರ್ಷಗಳು ಉರುಳಿದರೂ ಮೂಢನಂಬಿಕೆಗಳು ಜೀವಂತವಿವೆ. ಆಧುನಿಕ ಶೈಲಿಯ ಜೀವನದಲ್ಲಿ ತೊಡಗಿಸಿಕೊಂಡಿರುವ ಸಮಾಜದಲ್ಲಿ ಕುಟುಂಬಗಳು ನೈತಿಕ ಮೌಲ್ಯ ಬೆಳೆಸಿಕೊಂಡಿಲ್ಲ. ಜನಸಂಖ್ಯಾ ಸ್ಫೋಟ, ಜಾತೀಯತೆ, ಮೌಢ್ಯ, ಸಮಾಜದ ಪ್ರಗತಿಗೆ ಮಾರಕ ಎಂದರು.

ಎಂವಿಎಂ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ, ಸದಾಕಾಲ  ದೇವರು ಇದ್ದಾನೆ ಎಂದು ನಂಬಿ ಮನೆಯಲ್ಲಿ ಕುಳಿತರೆ ಜೀವನ ನಿರ್ವಹಣೆ ಸಾಧ್ಯವಿಲ್ಲ, ದೇವಾಲಯ, ಚರ್ಚ್, ಮಸೀದಿ, ಮಂದಿರ ನೆಮ್ಮದಿ ಶಾಂತಿಗಾಗಿ ಅಷ್ಟೇ. ಮಹಿಳೆಯರು ಮೂಢನಂಬಿಕೆಯನ್ನು ಅತಿಯಾಗಿ ನಂಬುವವರು ಎಂದರು.

ವಿಜ್ಞಾನ ಪರಿಷತ್ ಸಹಕಾರ್ಯದರ್ಶಿ ಶ್ರೀನಾಥ್, ದಲಿತ ಸಾಹಿತ್ಯ ಕವಿ ಯೋಗಿಶ್ ಮಾಸ್ಟರ್, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಮಾಜಿ ಸದಸ್ಯ ಆಶೋಕನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ಪೊಲೀಸ್ ಇನ್‌ಸ್ಪೆಕ್ಟರ್ ಎ.ರಾಜು ಉಪಸ್ಥಿತರಿದ್ದರು.

‘ಯುವ ಸಮುದಾಯ ಮೌಢ್ಯ  ದಮನಿಸಲಿ’
ವಿಜ್ಞಾನ ಪರಿಷತ್ ರಾಜ್ಯ ಉಪಾಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಯುವ ಸಮುದಾಯ ಮೌಢ್ಯ ದಮನ ಮಾಡುವ ಶಕ್ತಿ ಆಗಬೇಕು.  ಬಹುತೇಕರು ದೇವರಗಳನ್ನು ಮಾರುಕಟ್ಟೆ ಸರಕುಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದರು .

ಮಾನಸಿಕ ದೌರ್ಬಲ್ಯ ಮತ್ತು ಭೌತಿಕ ವಿಕಸನದ ಬಗ್ಗೆ ಮಾತನಾಡಿದ ನಿಮ್ಹಾನ್ಸ್‌ ನಿವೃತ್ತ ಮನೋತಜ್ಞ ಡಾ.ಸಿ.ಆರ್ ಚಂದ್ರಶೇಖರ್ ಭೌತಿಕ ವಿಕಾಸ ನಿರಂತರ ಪ್ರತಿಕ್ರಿಯೆ. ಅದು ಅಡೆತಡೆ ಇಲ್ಲದೆ ಸರಾಗವಾಗಿರಬೇಕು. 2016 ರ ನಿಮ್ಹಾನ್ಸ್ ವರದಿಯಂತೆ ಪ್ರತಿನೂರರಲ್ಲಿ ಐದು ಜನ ಖಿನ್ನತೆಗೆ  ಒಳಗಾಗುತ್ತಿದ್ದಾರೆ, ಇದು ಖಿನ್ನತೆಗೆ ಒಳಗಾಗಿರುವವರಿಗೆ ಗೊತ್ತಿರುವುದಿಲ್ಲ ಎಂದರು.

ಜ್ಯೋತಿಷಿ, ಮಂತ್ರವಾದಿ, ದೇವಸ್ಥಾನ, ಮಸೀದಿ, ದರ್ಗಾ, ಯಂತ್ರ, ತಾಯಿತ ಎಂದು ಹಣ ಶ್ರಮ ಸಮಯ ಎರಡನ್ನು ವ್ಯರ್ಥ ಮಾಡುತ್ತಾರೆ. ಖಿನ್ನತೆ ರೋಗ ಮನಸ್ಸಿನ ಕಾಯಿಲೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.