ADVERTISEMENT

ರಾಗಿಗೆ ಗೇಣು ಹುಳುಗಳ ಕಾಟ

ಇಳುವರಿ ಕುಸಿತದ ಭೀತಿ: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 11:29 IST
Last Updated 1 ನವೆಂಬರ್ 2014, 11:29 IST

ದೊಡ್ಡಬಳ್ಳಾಪುರ: ತಾಲ್ಲೂಕಿನ ಹಲ­ವಾರು ಕಡೆ ರಾಗಿ ಬೆಳೆಗೆ ಗೇಣು ಹುಳು­ಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಇಳು­ವರಿ ಕುಸಿತದ ಭೀತಿ ರೈತರಿಗೆ ಎದು­ರಾಗಿದೆ.

ಕಸಬಾ ಹೋಬಳಿ ಆಲಹಳ್ಳಿ, ಮಜ­ರಾಹೊಸಹಳ್ಳಿ ಮತ್ತಿತರೆ ಕಡೆ ರಾಗಿ ಬೆಳೆದಿರುವ ಹೊಲಗಳಲ್ಲಿ ಗೇಣು ಹುಳು­ಗಳ ಕಾಟ ಹೆಚ್ಚಾಗಿದೆ. ಬೆಳಗಿನ ವೇಳೆ ಗಿಡದ ಮೇಲೆ ಈ ಹುಳುಗಳು ಕಾಣಿಸಿ­ಕೊಂಡು, ಮಧ್ಯಾಹ್ನದ ನಂತರ ರಾಗಿ ಪೈರುಗಳ ಬುಡದಲ್ಲಿ ಸೇರಿಕೊಳ್ಳುತ್ತಿವೆ. ಇದ­ರಿಂದ ರಾಗಿ ಗಿಡದ ಬುಡ ಸತ್ವ­ಹೀನವಾಗಿ ಒಣಗುತ್ತಿವೆ.

ಇನ್ನೂ ತೆನೆ ಬಿಡದ ರಾಗಿ ಪೈರು­ಗಳಲ್ಲಿ, ಗೇಣು ಹುಳುಗಳು ಹೆಚ್ಚಾಗಿದ್ದು, ಪೈರುಗಳು ಹಾಳಾಗುತ್ತಿವೆ. ಸಾಮಾನ್ಯ ಔಷಧಿಗಳು ಕೆಲಸ ಮಾಡಿಲ್ಲ. ಒಂದು ಎಕರೆಯಲ್ಲಿ ಬೆಳೆದಿರುವ ರಾಗಿ ಬೆಳೆ ಎಲ್ಲಿ ಕೈತಪ್ಪಿಹೋಗುವುದೋ ಎನ್ನುವ ಆತಂಕ ಎದುರಾಗಿದೆ ಎನ್ನುತ್ತಾರೆ ರೈತ ಮಂಜುನಾಥ್.

ಸಾಮಾನ್ಯವಾಗಿ ತಡವಾಗಿ ಬಿತ್ತನೆ ಮಾಡಿದ ರಾಗಿ ಬೆಳೆಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಗೇಣು ಹುಳುಗಳು ಕಾಣಿಸಿಕೊಳ್ಳುತ್ತವೆ. ಅಲಸಂದಿ ಮತ್ತಿತರೆ ಕಾಳು ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಈ ಹುಳುಗಳು ರಾಗಿ ಬೆಳೆಗೂ ವ್ಯಾಪಿಸು­ತ್ತವೆ. ಹುಳುಗಳ ನಿಯಂತ್ರಣಕ್ಕೆ ಕ್ಲೋರ್‌­ಪಿರಿಫೋಸ್ ಔಷಧಿಯನ್ನು ಒಂದು ಲೀಟರ್‌ಗೆ ೨ ಮಿಲೀನಷ್ಟು ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸದರೆ ಹುಳು­ಗಳು ನಾಶವಾಗುತ್ತವೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮಂಜು­ನಾಥ್ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.