ADVERTISEMENT

‘ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 9:37 IST
Last Updated 5 ಸೆಪ್ಟೆಂಬರ್ 2017, 9:37 IST
ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ನಡೆಯುತ್ತಿರುವ ಧರಣಿಯಲ್ಲಿ ಬಜರಂಗದಳ ಕಾರ್ಯಕರ್ತರು ಮನವಿ ಸಲ್ಲಿಸಿದರು
ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ನಡೆಯುತ್ತಿರುವ ಧರಣಿಯಲ್ಲಿ ಬಜರಂಗದಳ ಕಾರ್ಯಕರ್ತರು ಮನವಿ ಸಲ್ಲಿಸಿದರು   

ವಿಜಯಪುರ: ‘ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸಲು ಪುರಸಭೆಗೆ ಬದ್ಧತೆಯಿಲ್ಲ, ಜನರು ಕೊಟ್ಟಿರುವ ಮತಗಳ ಮೇಲೆ ನಿಮಗೆ ವಿಶ್ವಾಸವಿದ್ದರೆ ಕೂಡಲೇ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ’ ಎಂದು ಬಿಎಸ್ಎನ್ಎಲ್ ನಿರ್ದೇಶಕ ಕನಕರಾಜು ಹೇಳಿದರು.

ಇಲ್ಲಿನ ಶಿವಗಣೇಶ ಸರ್ಕಲ್ ನಲ್ಲಿ ವಿಜಯಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿಯ ನಡೆಯುತ್ತಿರುವ 21 ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.

23 ವಾರ್ಡುಗಳಿರುವ ವಿಜಯಪುರದ ಜನತೆಗೆ ಮೂಲ ಸೌಕರ್ಯ ಒದಗಿಸಲು ಸದಸ್ಯರಿಗೆ ಸಾಧ್ಯವಿಲ್ಲ, ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗುತ್ತಿದ್ದಾರೆ. ಕೇವಲ ಅಧ್ಯಕ್ಷ ಸ್ಥಾನಕ್ಕಾಗಿ ಬಣ ರಾಜಕೀಯಗಳನ್ನು ಮಾಡಿಕೊಂಡು ಜನತೆಯ ಆಶೋತ್ತರಗಳಿಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ADVERTISEMENT

ವಿಜಯಪುರದಲ್ಲಿನ ಎಲ್ಲಾ ಸಂಘ ಸಂಸ್ಥೆಗಳು, ಆಟೋ ಚಾಲಕರು, ವರ್ತಕರು, ಸೇರಿದಂತೆ ಎಲ್ಲರೂ ತಾಲ್ಲೂಕು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.
ಬಜರಂಗದಳ ಜಿಲ್ಲಾ ಸಂಚಾಲಕ ಕೃಷ್ಣಮೂರ್ತಿ ಮಾತನಾಡಿ, ‘ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿವಹಿಸುತ್ತಿಲ್ಲ, ಮುಖ್ಯಮಂತ್ರಿಗಳು ಸಿದ್ದರಿದ್ದರೂ ಕೆಲ ಮುಖಂಡರುಗಳ ಅವಕೃಪೆಯಿಂದ ವಿಳಂಬವಾಗುತ್ತಿದೆ’ ಎಂದರು.

ಬೂದಿಗೆರೆ ನಾರಾಯಣಸ್ವಾಮಿ ಮಾತನಾಡಿ, ‘ವಿಜಯಪುರ ತಾಲ್ಲೂಕು ಕೇಂದ್ರ ಮಾಡದ ಹೊರತು, ನಮ್ಮ ಹೋರಾಟ ನಿಲ್ಲುವುದಿಲ್ಲ, ಜನತೆಗೆ ನ್ಯಾಯಬೇಕು, ಯಾವುದೇ ಪಕ್ಷದವರು ನಮಗೆ ಸಹಕಾರ ನೀಡಲಿ ನಾವು ಅವರಿಗೆ ಬೆಂಬಲಿಸುತ್ತೇವೆ’ ಎಂದರು.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಿ, ಕಂದಾಯ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಹೇಶ್ ಕುಮಾರ್, ವಿ.ರಾ.ಶಿವಕುಮಾರ್, ಎನ್. ರಾಜಗೋಪಾಲ್, ಕನ್ನಡ ಆಂಜಿನಪ್ಪ, ಪ್ರವೀಣ್ ಕುಮಾರ್, ಎನ್.ದೇವರಾಜ್, ಜೆ.ಆರ್.ಮುನಿವೀರಣ್ಣ, ಕೆ.ವೀರಭದ್ರಯ್ಯ, ಪ್ರಭು, ಮಧುಸೂದನ್, ಯಲುವಹಳ್ಳಿ ಅಶೋಕ್, ಚಂದ್ರಪ್ಪ, ಬಾಬಾಜಾನ್, ಮುನಿವೆಂಕಟರಣಪ್ಪ, ಗೋವಿಂದರಾಜು, ಮುರಳಿ, ಎಸ್.ಎಂ. ಮನೋಹರ್, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.