ADVERTISEMENT

ರಾಜ್ಯದಲ್ಲಿ ಪರಿಶಿಷ್ಟರಿಗೆ ಗರಿಷ್ಠ ಅನುದಾನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:24 IST
Last Updated 13 ನವೆಂಬರ್ 2017, 5:24 IST

ದೇವನಹಳ್ಳಿ: ‘ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ನಾಲ್ಕೂವರೆ ವರ್ಷದ ಆಡಳಿತದಲ್ಲಿ ₹ 85 ಸಾವಿರ ಕೋಟಿ ವಿಶೇಷ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನೀಡಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಮುನಿನರಸಿಂಹಯ್ಯ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಪರಿಶಿಷ್ಟ ಪಂಗಡ ಕಾಂಗ್ರೆಸ್‌ ವಿವಿಧ ಘಟಕ ಪದಾಧಿಕಾರಿಗಳ ನೇಮಕ ಆದೇಶ ಪತ್ರ ವಿತರಣೆ ಮತ್ತು ಹಿರಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಇಲಾಖೆಯಲ್ಲಿ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. ಮೀಸಲು ಎಲ್ಲಿ ಉಳಿಕೆ ಇದೆ, ಯಾಕೆ ವೆಚ್ಚ ಮಾಡಿಲ್ಲ ಎಂದು ತಿಳಿದು ಫಲಾನುಭವಿಗಳಿಗೆ ಮಾಹಿತಿ ನೀಡಬೇಕು. ನಾಲ್ಕೂವರೆ ವರ್ಷದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಎಂದರು.

ADVERTISEMENT

ಮುಖಂಡ ಚಿನ್ನಪ್ಪ ಮಾತನಾಡಿ, ಆದೇಶ ಪ್ರತಿಯ ಹುದ್ದೆಗೆ ಸೀಮಿತವಾಗಿರದೆ ಪಕ್ಷ ಬಲಪಡಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಶೀಘ್ರದಲ್ಲಿಯೇ ತಾಲ್ಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಚಾಲನೆ ನೀಡಲಾಗುತ್ತದೆ. ಸರ್ಕಾರ, ಹುರುಳುಗುರ್ಕಿ ಗ್ರಾಮದಲ್ಲಿ ವಾಲ್ಮೀಕಿ ಅಧ್ಯಯನ ಪೀಠಕ್ಕೆ ಹದಿನೈದು ಎಕರೆ ಜಾಗ ಗುರುತಿಸಿ ಹಸ್ತಾಂತರಿಸಿದ್ದು ₹ 50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮನೆ ಮನೆಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದರು.

ಮುಖಂಡ ಬಿ.ಚಂದ್ರಪ್ಪ ಮಾತನಾಡಿ, ಸರ್ಕಾರ ಏನೇ ಅನುದಾನ ನೀಡಿದರೂ ಪಕ್ಷದಲ್ಲಿ ತಾಲ್ಲೂಕನ್ನು ಕಡೆಗಣಿಸಲಾಗಿದೆ. ಕೇವಲ ಹೊಸಕೋಟೆಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನವಿದೆ. ಬಯಾಪ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಯಾರಿಗೆ ಟಿಕೆಟ್‌ ನೀಡಿದರೂ ಪಕ್ಷದ ಶಾಸಕರನ್ನು ಗೆಲ್ಲಿಸಿಕೊಳ್ಳುವುದು ಅನಿವಾರ್ಯ ಎಂದರು.

ಪ್ರದೇಶ ಕಾಂಗ್ರೆಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಪರಿಶಿಷ್ಟ ಸಮುದಾಯದಲ್ಲಿ ಕಾಂಗ್ರೆಸ್‌ ಬೆಂಬಲಿಗರು ಹೆಚ್ಚು ಇದ್ದಾರೆ. ದೇಶದಲ್ಲಿ ಕಾಂಗ್ರೆಸ್‌ ಸಂದಿಗ್ಧ ಸ್ಥಿತಿಯಲ್ಲಿದೆ. 2018ರ ಚುನಾವಣೆಯಿಂದಲೇ ಪುಟಿದೇಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ಮಂಜುನಾಥ್‌, ರಾಧಮ್ಮ ಮುನಿರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾರುತಿ, ವಿಜಯಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಎಸ್ಟಿ ಘಟಕ ಅಧ್ಯಕ್ಷ ಮುನಿರಾಜು, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದ ಎಸ್‌.ಜಿ.ಮಂಜುನಾಥ್‌, ಪುರುಷೋತ್ತಮ ಕುಮಾರ್‌, ಎಪಿಎಂಸಿ ನಿರ್ದೇಶಕ ಸುಧಾಕರ್‌, ಮುಖಂಡ ಪ್ರಸನ್ನ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.